ಭಾರತದ ಪ್ರವಾಸವನ್ನು ಇಂಗ್ಲೆಂಡ್ ಬೆಳೆಸಿದೆ. ಈ ಪ್ರವಾಸದಲ್ಲಿ ಮೊದಲಿಗೆ ಟಿ20 ಪಂದ್ಯಗಳನ್ನು ಆಡಲಾಗುತ್ತಿದೆ. ಈ ಸರಣಿಯ ಮೂರನೇ ಪಂದ್ಯಕ್ಕೆ ರಾಜ್‌ಕೋಟ್ ಸಾಕ್ಷಿಯಾಯಿತು. ಈ ಪಂದ್ಯದಲ್ಲಿ ಆರ್‌ಸಿಬಿ ಅಭಿಮಾನಿಗಳ ಕಣ್ಣು ಇಂಗ್ಲೆಂಡ್ ತಂಡದ ಆಟಗಾರರ ಮೇಲಿದೆ. ಈ ಸರಣಿ ಆರಂಭವಾಗುವುದಕ್ಕೂ ಮುನ್ನವೇ, ಆರ್‌ಸಿಬಿ ಅಭಿಮಾನಿಗಳು ಫುಲ್ ರೆಡಿ ಆಗಿದ್ದರು. ಐಪಿಎಲ್ 2025ರ ಟೀಸರ್ ರೀತಿ ಕಾಣಿಸಿಕೊಂಡ ಸರಣಿಯಲ್ಲಿ ತಮ್ಮ ತಂಡ ಖರೀದಿಸಿದ ಆಟಗಾರರು ಹೇಗೆ ಆಡುತ್ತಾರೆ ಎಂಬ ಲೆಕ್ಕಾಚಾರ ಹಾಕಿಕೊಂಡಿದ್ದರು.
ಮೊದಲೆರಡು ಪಂದ್ಯಗಳಲ್ಲಿ ಮಂಕಾಗಿದ್ದ ಇಂಗ್ಲೆಂಡ್ ತಂಡದ ಭರವಸೆಯ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಮೂರನೇ ಪಂದ್ಯದಲ್ಲಿ ಲಯಕ್ಕೆ ಮರಳಿದರು. ಅಲ್ಲಿ ರಾಜ್‌ಕೋಟ್‌ನಲ್ಲಿ ಪಂದ್ಯ ನಡೆಯುತ್ತಿದ್ದರೆ, ಸೆಲೆಬ್ರೇಷನ್ ಮಾತ್ರ ಬೆಂಗಳೂರಿನಲ್ಲಿ ನಡೆದಿತ್ತು. ಲಿಯಾಮ್ ಈ ಪಂದ್ಯದಲ್ಲಿ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಆದರೆ ತಾವು ಯಾವ ರೀತಿ ಆಡಬಲ್ಲೇ ಎಂಬುದನ್ನು ಅಭಿಮಾನಿಗಳಿಗೆ ತೋರಿಸಿದರು. ಕಳೆದ ಎರಡು ಪಂದ್ಯಗಳಲ್ಲಿ ಮಂಕಾಗಿದ್ದ ಲಿಯಾಮ್ ಬ್ಯಾಟ್ ರಾಜ್‌ಕೋಟ್‌ನಲ್ಲಿ ಅಬ್ಬರಿಸಿತು.

ಇಂಗ್ಲೆಂಡ್ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಲಿಯಾಮ್ ಲಿವಿಂಗ್ ಸ್ಟೋನ್ ತಮ್ಮ ನೈಜ ಶೈಲಿಯಲ್ಲಿ ಬ್ಯಾಟ್ ಮಾಡಿದರು. ಇವರು 24 ಎಸೆತಗಳಲ್ಲಿ 1 ಬೌಂಡರಿ, 5 ಸಿಕ್ಸರ್ ಸಹಾಯದಿಂದ 43 ರನ್ ಬಾರಿಸಿ ಅಬ್ಬರಿಸಿದರು. ಇವರು ಸ್ಪಿನ್ ಬೌಲರ್ ಆಗಿರಲಿ, ವೇಗದ ಬೌಲರ್‌ಗಳೇ ಆಗಿರಲಿ ಅವರ ವಿರುದ್ಧ ದೊಡ್ಡ ಹೊಡೆತ ಬಾರಿಸಬಲ್ಲೇ ಎಂಬುದನ್ನು ಸಾಬೀತು ಪಡಿಸಿದರು. ಈ ಮೂಲಕ ಆರ್‌ಸಿಬಿ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸಿದರು. ಇವರು ಬರೀ ಬ್ಯಾಟಿಂಗ್‌ನಲ್ಲಿ ಅಷ್ಟೇ ಅಲ್ಲ ಬೌಲಿಂಗ್‌ನಲ್ಲೂ ತಂಡಕ್ಕೆ ನೆರವಾಗಬಲ್ಲ ಪ್ಲೇಯರ್ ಎಂಬುದನ್ನು ಚೆನ್ನೈನಲ್ಲಿ ಸಾಬೀತು ಪಡಿಸಿದ್ದರು. ಮಿಡ್ಲ್ ಓವರ್‌ನಲ್ಲಿ ಬೌಲಿಂಗ್ ನಡೆಸಿ ವಿಕೆಟ್ ಬೇಟೆಯಾಡಿದ್ದರು.
ಸೌದಿಯಲ್ಲಿ ನಡೆದ ಮೆಗಾ ಹರಾಜಿನಲ್ಲಿ ಲಿಯಾಮ್ ಲಿವಿಂಗ್ ಸ್ಟೋನ್ ಅವರನ್ನು ಆರ್‌ಸಿಬಿ ತಂಡ ಖರೀದಿಸುವಲ್ಲಿ ಯಶಸ್ವಿಯಾಯಿತು. ಇವರನ್ನು ಪಂಜಾಬ್ ಕಿಂಗ್ಸ್ ಉಳಿಸಿಕೊಳ್ಳುವಲ್ಲಿ ವಿಫಲವಾಗಿತ್ತು. ಈ ಸ್ಟಾರ್ ಆಲ್‌ರೌಂಡರ್ ಲಿಯಾಮ್ 2 ಕೋಟಿ ರೂ. ಮುಲ ಬೆಲೆಯೊಂದಿಗೆ ಐಪಿಎಲ್ ಮೆಗಾ ಹರಾಜು ಅಂಗಳ ಪ್ರವೇಶಿಸಿದರು. ಆದರೆ ಇವರಿಗೆ 8.75 ಕೋಟಿ ರೂ. ನೀಡಿ ಆರ್‌ಸಿಬಿ ತಮ್ಮ ತಂಡಕ್ಕೆ ಬರಮಾಡಿಕೊಂಡಿತು. ಇವರು ಮುಂಬರುವ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಲು ಸಿದ್ಧರಾಗಿದ್ದಾರೆ.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 171 ರನ್ ಕಲೆ ಹಾಕಿತು. ಪ್ರವಾಸಿ ತಂಡದ ಪರ ಬೆನ್ ಡೆಕಟ್ 28 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಹಾಯದಿಂದ 51 ರನ್ ಬಾರಿಸಿ ಔಟ್ ಆದರು. ಭಾರತದ ಪರ ವರುಣ್ ಚಕ್ರವರ್ತಿ ಮನಮೋಹಕ ಬೌಲಿಂಗ್ ನಡೆಸಿದರು. ಇವರು 4 ಓವರ್ ಬೌಲಿಂಗ್ ಮಾಡಿ 24 ರನ್ ನೀಡಿ 5 ವಿಕೆಟ್ ಪಡೆದರು.