ಐಪಿಎಲ್ 18ನೇ ಸೀಸನ್ ಆರಂಭವಾಗಲು ಕೇವಲ 4 ದಿನಗಳು ಮಾತ್ರ ಬಾಕಿ ಇವೆ. ಈ ಬಾರಿಯೂ ಐಪಿಎಲ್ ಜ್ವರ ಹೆಚ್ಚಾಗಿದೆ. ಪ್ರತಿ ವರ್ಷ ಅನೇಕ ಆಟಗಾರರು ರಾತ್ರೋರಾತ್ರಿ ಜಿರೋದಿಂದ ಹೀರೋ ಆಗಿ ಬದಲಾಗುತ್ತಾರೆ. ಆದರೆ ಇಲ್ಲೊಬ್ಬ ಆಟಗಾರನ ವೃತ್ತಿಜೀವನ ವಿಭಿನ್ನವಾಗಿದೆ. ಕುತೂಹಲಕಾರಿ ವಿಷಯವೆಂದರೆ ಈ ಅಪಾಯಕಾರಿ ಬ್ಯಾಟರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿದ್ದಾರೆ. ಈ ಬ್ಯಾಟರ್ ದ್ವಿಶತಕ ಅಥವಾ ತ್ರಿಶತಕ ಗಳಿಸಲಿಲ್ಲ, ಆದರೆ ಒಂದು ಇನ್ನಿಂಗ್ಸ್‌ನಲ್ಲಿ 585 ರನ್‌ಗಳ ಬೃಹತ್ ಇನ್ನಿಂಗ್ಸ್ ಆಡಿ ಎಲ್ಲಾ ದಾಖಲೆಗಳನ್ನು ಮುರಿದಿದ್ದಾರೆ. ಈ ಸ್ಟಾರ್ ಯುವ ಬ್ಯಾಟರ್ ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಸ್ ಗೇಲ್ ಗಿಂತ ಅಪಾಯಕಾರಿಯಾಗಿದ್ದಾರೆ.
ಆರ್‍ಸಿಬಿ ತಂಡದಲ್ಲಿರುವ ಈ ಸ್ಟಾರ್ ಬ್ಯಾಟರ್ ಬೇರೆ ಯಾರು ಅಲ್ಲ, 19 ವರ್ಷದ ಸ್ವಸ್ತಿಕ್ ಚಿಕಾರ. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಆರ್‍ಸಿಬಿ ಫ್ರಾಂಚೈಸಿ ಸ್ವಸ್ತಿಕ್ ಚಿಕಾರ ಅವರನ್ನು 30 ಲಕ್ಷ ರೂ.ಗೆ ಖರೀದಿಸಿತು.

ಸ್ವಸ್ತಿಕ್ ಚಿಕಾರ ತಮ್ಮ 14 ವರ್ಷ ವಯಸ್ಸಿನಲ್ಲಿ 585 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ಸದ್ದು ಮಾಡಿದ್ದರು. ಈ ಸಾಧನೆ ಮಾಡಿದ ನಂತರ ಅವರು ಬೆಳಕಿಗೆ ಬಂದರು. ಡಿಸೆಂಬರ್ 2019 ರಲ್ಲಿ ಗೋರಖ್‌ಪುರದ ಮಹಿ ಕ್ರಿಕೆಟ್ ಅಕಾಡೆಮಿ ಮತ್ತು ಎಸಿಇ ಕ್ರಿಕೆಟ್ ಅಕಾಡೆಮಿ ನಡುವಿನ 40 ಓವರ್‌ಗಳ ಪಂದ್ಯದಲ್ಲಿ ಸ್ವಸ್ತಿಕ್ ಅಮೋಘ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದರು. ಮಹಿ ಕ್ರಿಕೆಟ್ ಅಕಾಡೆಮಿ ಪರ ಕಣಕ್ಕಿಳಿದಿದ್ದ ಸ್ವಸ್ತಿಕ್ 167 ಎಸೆತಗಳಲ್ಲಿ 52 ಸಿಕ್ಸರ್ ಮತ್ತು 55 ಬೌಂಡರಿಗಳ ಸಹಾಯದಿಂದ 585 ರನ್ ಬಾರಿಸಿದ್ದರು.
ಹೀಗಾಗಿ ಮಹಿ ಕ್ರಿಕೆಟ್ ಅಕಾಡೆಮಿ ಒಟ್ಟು 704 ರನ್ ಗಳಿಸಿ ಪಂದ್ಯವನ್ನು 355 ರನ್‌ಗಳಿಂದ ಗೆದ್ದುಕೊಂಡಿತು. ಈ ಸ್ಫೋಟಕ ಇನ್ನಿಂಗ್ಸ್ ನಂತರ, ಎಲ್ಲರ ಗಮನ ಈ ಆಟಗಾರನ ಮೇಲೆ ಬಿತ್ತು. ಐಪಿಎಲ್ ಹರಾಜಿನಲ್ಲಿ ಸ್ವಸ್ತಿಕ್ ಅವರನ್ನು ಆರ್‌ಸಿಬಿ 30 ಲಕ್ಷ ರೂ.ಗೆ ಬಿಡ್ ಮಾಡಿತು.
ಸ್ವಸ್ತಿಕ್ ಅವರ ಇತ್ತೀಚಿನ ಫಾರ್ಮ್ ನೋಡಿದರೆ, ಅದರಲ್ಲಿ ವಿಶೇಷವೇನೂ ಇಲ್ಲ. ಇತ್ತೀಚೆಗೆ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅವರು ರನ್ ಗಳಿಸಲು ಸಾಕಷ್ಟು ಕಷ್ಟಪಟ್ಟರು. ಕಳೆದ 5 ಪಂದ್ಯಗಳಲ್ಲಿ ಅವರು 21, 5, 0, 7 ಮತ್ತು 3 ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದರು. ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಅವರ ಮೇಲೆ ಬೆಟ್ ಹಾಕಿತು. ಈಗ ಅವರಿಗೆ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಲು ಅವಕಾಶ ಸಿಗುತ್ತದೆಯೋ? ಇಲ್ಲವೋ? ಎಂಬುದನ್ನು ಕಾದು ನೋಡಬೇಕಾಗಿದೆ.
ಆರ್‍ಸಿಬಿ ತಂಡದಲ್ಲಿ ಸ್ಟಾರ್ ಆಟಗಾರರ ದಂಡೆಯಿದೆ. ಇಂತಹ ಸಂದರ್ಭದಲ್ಲಿ ಆರ್‍ಸಿಬಿ ಪರ ಪ್ಲೇಯಿಂಗ್-11 ರಲ್ಲಿ ಸ್ವಸ್ತಿಕ್ ಸ್ಥಾನ ಪಡೆಯುವುದು ಅಸಾಧ್ಯವಾಗಿದೆ. ಆದರೆ, ತಂಡದ ಸಂಯೋಜನೆ ಮಾಡುವಾಗ ನಾಯಕ ಮತ್ತು ಮ್ಯಾನೇಜ್ಮೆಂಟ್ ನಿರ್ಧಾರ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.