ಐಪಿಎಲ್ 2025 ರ 8ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 50 ರನ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಆರ್‌ಸಿಬಿ ಇತಿಹಾಸ ನಿರ್ಮಿಸಿದೆ. ಐಪಿಎಲ್ 2008 ರ ನಂತರ ಚೆಪಾಕ್ ಕ್ರೀಡಾಂಗಣದಲ್ಲಿ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗಳಿಸಿದ ಮೊದಲ ಗೆಲುವು ಇದಾಗಿದೆ. ಈ ಗೆಲುವಿನಲ್ಲಿ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಮತ್ತು ವೇಗದ ಬೌಲರ್ ಜೋಶ್ ಹೇಜಲ್‌ವುಡ್ ಪ್ರಮುಖ ಕೊಡುಗೆ ನೀಡಿದ್ದಾರೆ. ಇದಲ್ಲದೆ, ಆಲ್‌ರೌಂಡರ್ ಟಿಮ್ ಡೇವಿಡ್ ಕೂಡ ಆರ್‌ಸಿಬಿ ಫ್ಯಾನ್ಸ್ ಮನ ಗೆದ್ದಿದ್ದಾರೆ.
ಟಿಮ್ ಡೇವಿಡ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿ ಕೇವಲ 8 ಎಸೆತಗಳಲ್ಲಿ ಅಜೇಯ 22 ರನ್ ಗಳಿಸಿದರು. ಸ್ಯಾಮ್ ಕರನ್ ಎಸೆದ ಕೊನೆಯವ 20ನೇ ಓವರ್‍ನಲ್ಲಿ ಡೇವಿಡ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಈ ಮೂಲಕ ಆರ್‍ಸಿಬಿ ಅಭಿಮಾನಿಗಳನ್ನು ರಂಜಿಸಿದರು.

ಸ್ಯಾಮ್ ಕರನ್ ಕೊನೆಯ ಓವರ್‍ನ ಮೊದಲೆರಡು ಎಸೆತಗಳಲ್ಲಿ ಟಿಮ್ ಡೇವಿಡ್ ರನ್ ಗಳಿಸಲು ಅವಕಾಶ ನೀಡಲಿಲ್ಲ. ಮ್ ಕರನ್ ಡೇವಿಡ್ ನೋಡಿ ವ್ಯಂಗ್ಯವಾಗಿ ನಕ್ಕರು. ಈ ಬಗ್ಗೆ ತಲೆ ಕೆಡಿಸಿಕೊಳ್ಳದ ಡೇವಿಡ್ ಮೂರನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದರು. ಇಷ್ಟಕ್ಕೂ ಸುಮ್ಮನಾಗದ ಡೇವಿಡ್ ನಂತರದ ಎರಡು ಎಸೆತಗಳನ್ನು ಸಿಕ್ಸರ್ ಕಡೆಗೆ ಕಳುಹಿಸಿದರು. ಈ ಮೂಲಕ ಐಪಿಎಲ್ ಡೆತ್ ಓವರ್‍ಗಳಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಮಾಡಿದರು. ಈವರೆಗೆ ಐಪಿಎಲ್ ಡೆತ್ ಓವರ್‍ಗಳಲ್ಲಿ ಡೇವಿಡ್ ಒಟ್ಟು 28 ಸಿಕ್ಸರ್ ಬಾರಿಸಿದ್ದಾರೆ.
ಟಿಮ್ ಡೇವಿಡ್ ಅವರು ಲಿವಿಂಗ್‌ಸ್ಟೋನ್ ಬದಲಿಗೆ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದರೆ, ಆರ್‍ಸಿಬಿ ತಂಡದ ಸ್ಕೋರ್ 220 ದಾಟುತ್ತಿತ್ತು. ಸಿಕ್ಕ 8 ಎಸೆತಗಳಲ್ಲಿ ಡೇವಿಡ್ ತಮ್ಮ ಪವರ್ ಹಿಟ್ಟಿಂಗ್ ಮೂಲಕ ರನ್ ಗಳಿಸಿದರು. ಐಪಿಎಲ್ 2025 ರಲ್ಲಿ ಟಿಮ್ ಡೇವಿಡ್ ತಮ್ಮ ಸ್ಥಿರ ಪ್ರದರ್ಶನವನ್ನು ಮುಂದುವರೆಸಿದರೆ, ಆರ್‍ಸಿಬಿ ಚಾಂಪಿಯನ್ ಆಗುವುದರಲ್ಲಿ ಅನುಮಾನವೇ ಇಲ್ಲ.
ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟಿಂಗ್ ಆಲ್‌ರೌಂಡರ್ ಟಿಮ್ ಡೇವಿಡ್ ಅವರನ್ನು ಆರ್‍ಸಿಬಿ 3 ಕೋಟಿ ರೂ.ಗಳಿಗೆ ಬಿಡ್ ಮಾಡಿತ್ತು. ಡೇವಿಡ್ ಆರ್‍ಸಿಬಿ ಪರ ತನ್ನ ಎರಡನೇ ಪಂದ್ಯದಲ್ಲಿಯೂ ಫ್ರಾಂಚೈಸಿ ಇಟ್ಟ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.
ಟಾಸ್ ಸೋತು ಆರ್‍ಸಿಬಿ ಪರ ವಿರಾಟ್ ಕೊಹ್ಲಿ ಮತ್ತು ಫಿಟ್ ಸಾಲ್ಟ್ ಮೊದಲು ಇನ್ನಿಂಗ್ಸ್ ಆರಂಭಿಸಿದರು. ಇಬ್ಬರೂ ಮೊದಲ ವಿಕೆಟ್‌ಗೆ 4.6 ಓವರ್‌ಗಳಲ್ಲಿ 45 ರನ್‌ಗಳನ್ನು ಸೇರಿಸಿದರು. ಫಿಲ್ ಸಾಲ್ಟ್ (32) ಮತ್ತು ವಿರಾಟ್ ಕೊಹ್ಲಿ (31) ತಂಡಕ್ಕೆ ಉತ್ತಮ ಆರಂಭ ನೀಡಿದರು. ಆರ್‌ಸಿಬಿ ಪರ ನಾಯಕ ರಜತ್ ಪಾಟಿದಾರ್ ಅತಿ ಹೆಚ್ಚು ರನ್ ಗಳಿಸಿದರು. ಅವರು 32 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 51 ರನ್ ಗಳಿಸಿದರು. ನಾಯಕನ ಆಟವಾಡಿದ ರಜತ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.