ಐಪಿಎಲ್ 202ರ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಈ ಬಾರಿ ಒಟ್ಟು 574 ಆಟಗಾರರ ಭವಿಷ್ಯ ಈ 2 ದಿನಗಳಲ್ಲಿ ನಿರ್ಧಾರವಾಗಲಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶುಕ್ರವಾರ 1574 ಆಟಗಾರರ ಆರಂಭಿಕ ಪಟ್ಟಿಯನ್ನು 574ಕ್ಕೆ ಇಳಿಸಿದೆ. ಇದರಲ್ಲಿ 366 ಭಾರತೀಯರು ಮತ್ತು 208 ವಿದೇಶಿ ಕ್ರಿಕೆಟಿಗರಿದ್ದಾರೆ.
ಈ ಬಾರಿಯ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಒಬ್ಬ ಭಾರತೀಯ ಕ್ರಿಕೆಟಿಗ ಬಿಡ್ ಆಗುವ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತಿವೆ. ಐಪಿಎಲ್‌ನ ಎಲ್ಲಾ 10 ಫ್ರಾಂಚೈಸಿಗಳ ಈ ಆಟಗಾರನ ಮೇಲೆ ಬಾಜಿ ಕಟ್ಟುವ ಸಾಧ್ಯತೆ ಕಡಿಮೆ ಇದೆ. ಈ ಆಟಗಾರ ಮಾತ್ರವಲ್ಲ, ಅನೇಕರ ಭವಿಷ್ಯವು ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ನಿರ್ಧಾರವಾಗಲಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಂತೆ ಸ್ಟಾರ್ ಬ್ಯಾಟರ್ ಮನೀಶ್ ಪಾಂಡೆ ಅವರ ಐಪಿಎಲ್ ವೃತ್ತಿಜೀವನವೂ ಕೊನೆಗೊಳ್ಳುವ ಹಂತದಲ್ಲಿದೆ. ಕಳೆದ ಹಲವು ಐಪಿಎಲ್ ಆವೃತ್ತಿಗಳಲ್ಲಿ ಕನ್ನಡಿಗ ಮನೀಶ್ ಪಾಂಡೆ ಅವರ ಪ್ರದರ್ಶನ ತೀರಾ ಕಳಪೆಯಾಗಿದೆ. ಜೊತೆಗೆ ಸರಿಯಾದ ಅವಕಾಶಗಳು ಅವರಿಗೆ ಸಿಕ್ಕಿಲ್ಲ. ಮನೀಶ್ ಪಾಂಡೆ ಐಪಿಎಲ್ 2024 ರಲ್ಲಿ ಕೇವಲ ಒಂದು ಪಂದ್ಯವನ್ನು ಆಡಿದ್ದು, 42 ರನ್ ಗಳಿಸಿದರು. ಐಪಿಎಲ್ 2023 ರಲ್ಲಿ, ಮನೀಶ್ ಪಾಂಡೆ 10 ಪಂದ್ಯಗಳಲ್ಲಿ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಕೇವಲ 160 ರನ್ ಕಲೆ ಹಾಕಿದ್ದರು. ಐಪಿಎಲ್ 2022ರಲ್ಲಿ ಮನೀಶ್ ಪಾಂಡೆ ಆಡಿದ 6 ಪಂದ್ಯಗಳಲ್ಲಿ 88 ರನ್ ಗಳಿಸಿದ್ದರು. ಮನೀಷ್ ಪಾಂಡೆ ಸಿಕ್ಕ ಸುವರ್ಣಾವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಂಡಿಲ್ಲ. ಇಂತಹ ಸಂದರ್ಭದಲ್ಲಿ ಮನೀಶ್ ಪಾಂಡೆ ಭವಿಷ್ಯ ಐಪಿಎಲ್ 2025ರ ಹರಾಜಿನಲ್ಲಿ ನಿರ್ಧಾರವಾಗಲಿದೆ.
ಮನೀಶ್ ಪಾಂಡೆ ತಮ್ಮ ಐಪಿಎಲ್ ವೃತ್ತಿಜೀವನವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ ಪ್ರಾರಂಭಿಸಿದರು. 2009ರಲ್ಲಿ ಐಪಿಎಲ್‌ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟರ್ ಎನಿಸಿಕೊಂಡರು. ಡೆಕ್ಕನ್ ಚಾರ್ಜರ್ಸ್ ( ಸನ್ ರೈಸರ್ಸ್ ಹೈದರಾಬಾದ್) ವಿರುದ್ಧ ಮನೀಷ್ ಪಾಂಡೆ ಕೇವಲ 73 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ ಅಜೇಯ 114 ರನ್ ಗಳಿಸಿದ್ದರು. ಆಗ ಅನಿಲ್ ಕುಂಬ್ಳೆ ಆರ್‌ಸಿಬಿ ನಾಯಕರಾಗಿದ್ದರು. ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಮನೀಶ್ ಪಾಂಡೆ 171 ಪಂದ್ಯಗಳಲ್ಲಿ 29.17 ಸರಾಸರಿಯಲ್ಲಿ 3850 ರನ್ ಗಳಿಸಿದ್ದಾರೆ.
ದೇಶೀ ಕ್ರಿಕೆಟ್ ಮಿಂಚಿದ ಮನೀಷ್ ಪಾಂಡೆ ಟೀಮ್ ಇಂಡಿಯಾಕ್ಕೆ ಭರ್ಜರಿ ಪದಾರ್ಪಣೆ ಮಾಡಿದ್ದರು. 2015ರಲ್ಲಿ ಜಿಂಬಾಬ್ವೆ ವಿರುದ್ಧ 86 ಎಸೆತಗಳಲ್ಲಿ 71 ರನ್ ಗಳಿಸಿದ್ದರು. ಇದಾದ ಮರುವರ್ಷವೇ ಸಿಡ್ನಿಯಲ್ಲಿ 81 ಎಸೆತಗಳಲ್ಲಿ 104 ರನ್ ಗಳಿಸಿ ಭಾರತಕ್ಕೆ ಗೆಲುವು ತಂದು ಕೊಟ್ಟಿದ್ದರು. ಆದರೆ ಇದಾದ ನಂತರ ಅವರು ನಿರಂತರವಾಗಿ ಟೀಮ್ ಇಂಡಿಯಾ ಒಳಗೆ ಮತ್ತು ಹೊರಗೆ ಇರುವಂತ ಪರಿಸ್ಥಿತಿ ನಿರ್ಮಾಣವಾಯಿತು. ಗಾಯವು ಅವರಿಂದಲೂ ಅನೇಕ ದೊಡ್ಡ ಅವಕಾಶಗಳನ್ನು ಕಸಿದುಕೊಂಡಿತು. ಹೀಗಾಗಿ ಅವರು ತಮ್ಮ ಅದ್ಭುತ ಆರಂಭವನ್ನು ದೊಡ್ಡ ವೃತ್ತಿಜೀವನವನ್ನಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಮನೀಶ್ ಪಾಂಡೆ ಇದುವರೆಗೆ ಟೀಮ್ ಇಂಡಿಯಾ ಪರ 39 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 709 ರನ್ ಗಳಿಸಿದ್ದಾರೆ.