ಪಂಜಾಬ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವಣ ಕಾಳಗದಲ್ಲಿ ಶ್ರೇಯಸ್ ಪಡೆ ಜಯ ಸಾಧಿಸಿದೆ. ಬಹು ನಿರೀಕ್ಷಿಯನ್ನು ಈ ಪಂದ್ಯ ಹುಟ್ಟಿಸಿತ್ತು. ಇದಕ್ಕೆ ಕಾರಣ ಉಭಯ ತಂಡಗಳ ನಾಯಕ ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ದುಬಾರಿ ಬೆಲೆಗೆ ಸೇಲ್ ಆಗಿದ್ದರು. ಹೀಗಾಗಿ ಇವರಿಬ್ಬರಲ್ಲಿ ಯಾರು ಬೆಸ್ಟ್ ಎಂಬ ಲೆಕ್ಕಾಚಾರಕ್ಕೆ ಉತ್ತರ ಹುಡುಕುವ ಕೆಲಸಕ್ಕೆ ಅಭಿಮಾನಿಗಳು ಮುಂದಾಗಿದ್ದರು.
ಲಕ್ನೋನಲ್ಲಿ ನಡೆದ 18ನೇ ಆವೃತ್ತಿಯ 13ನೇ ಪಂದ್ಯದಲ್ಲಿ ಆತಿಥೇಯ ತಂಡ ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆಯಿತು. ಆದರೆ ಈ ವೇಳೆ ಭರವಸೆಯ ಬ್ಯಾಟರ್ ಮಿಚೆಲ್ ಮಾರ್ಷ್ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಆದರೆ ಮಧ್ಯಮ ಕ್ರಮಾಂಕದ ನಿಕೋಲಸ್ ಪೂರನ್ ಹಾಗೂ ಆರಂಭಿಕ ಐಡೇನ್ ಮಾರ್ಕ್ರಮ್ ಜೊತೆಗೂಡಿ ತಂಡಕ್ಕೆ ಆಧಾರವಾದರು. ಈ ಜೊಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡುವ ಜವಾಬ್ದಾರಿಯನ್ನು ಹೊತ್ತಿಕೊಂಡಿತು. ಆದರೆ ಮಾರ್ಕ್ರಮ್ 28 ರನ್‌ಗಳಿಗೆ ಆಟ ಮುಗಿಸಿದರು.

ನಿಕೋಲಸ್ ಪೂರನ್ ಪ್ರಸಕ್ತ ಐಪಿಎಲ್‌ನಲ್ಲಿ ಮೂರನೇ ಅರ್ಧಶತಕದತ್ತ ದಾಪು ಗಾಲು ಇಟ್ಟಾಗ ಸಂಯಮ ಕಳೆದುಕೊಂಡರು. ಇವರು 30 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಹಾಯದಿಂದ 44 ರನ್ ಬಾರಿಸಿ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ಆಯುಷ್ ಬದೋನಿ 41, ಅಬ್ದುಲ್ ಸಮದ್ 27, ಡೇವಿಡ್ ಮಿಲ್ಲರ್ 19 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಸಿದರು. ಪರಿಣಾಮ ಎಲ್‌ಎಸ್‌ಜಿ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಸೇರಿಸಿತು.
ಸ್ಪರ್ಧಾತ್ಮಕ ಮೊತ್ತವನ್ನು ಹಿಂಬಾಲಿಸಿದ ಲಕ್ನೋ ತಂಡದ ಆರಂಭ ಸಹ ಕಳಪೆಯಾಗಿತ್ತು. ಭರವಸೆಯ ಆಟಗಾರ ಪ್ರೀಯಾಂಶ್ ಆರ್ಯ 8 ರನ್‌ಗಳಿಸಿ ಔಟ್ ಆದರು. ಇನ್ನು ಪ್ರಭ್ಸಿಮ್ರಾನ್ ಸಿಂಗ್ ಹಾಗೂ ಶ್ರೇಯಸ್ ಅಯ್ಯರ್ ತಮ್ಮ ತಂಡಕ್ಕೆ ಅರ್ಧಶತಕ ಜೊತೆಯಾಟವನ್ನು ನೀಡಿದರು. ಪ್ರಭ್ಸಿಮ್ರಾನ್ ಸಿಂಗ್ 9 ಬೌಂಡರಿ, 3 ಸಿಕ್ಸರ್ ಸಹಾಯದಿಂದ 69 ರನ್ ಸಿಡಿಸಿ ಔಟ್ ಆದರು. ಶ್ರೇಯಸ್ ಅಯ್ಯರ್ ಟೂರ್ನಿಯಲ್ಲಿ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಬಾರಿಸಿದರು. ಇವರು ಅಜೇಯ 52 ರನ್ ಸಿಡಿಸಿದರೆ, ನೆಹಲ್ ವಧೆರಾ ಅಜೇಯ 43 ರನ್‌ಗಳಿಸಿ ಗೆಲುವಿನಲ್ಲಿ ಮಿಂಚಿದರು.
ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಮೂರು ವಿಕೆಟ್ ಪಡೆದು ಮಿಂಚಿದರೆ, ಬ್ಯಾಟರ್‌ಗಳು ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದರು. ಆದರೆ ಪಂದ್ಯದ ಗತಿಯನ್ನೇ ಬದಲಿಸಿದ ಕ್ಷಣ ಎಂದರೆ ಎಲ್‌ಎಸ್‌ಜಿ ತಂಡದ ಸ್ಪೋಟಕ ಆಟಗಾರ ನಿಕೋಲಸ್ ಪೂರನ್ ಅವರನ್ನು ಪೆವಿಲಿಯನ್‌ಗೆ ಅಟ್ಟಿದ್ದು. ಪ್ರಸಕ್ತ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿರುವ ಹಿರಿಮೆ ಹೊಂದಿರುವ ನಿಕೋಲಸ್ 44 ರನ್ ಬಾರಿಸಿದ್ದಾಗ, ಸ್ಪಿನ್ ಬೌಲರ್ ಯುಜುವೇಂದ್ರ ಚಹಾಲ್ ಎಸೆದ ಗೂಗ್ಲಿ ಎಸೆತವನ್ನು ಲಾಂಗ್ ಆಫ್ ಮೇಲೆ ಬಾರಿಸಲು ಹೋಗಿ ಮ್ಯಾಕ್ಸ್‌ವೆಲ್ ಕ್ಯಾಚ್ ನೀಡಿದರು.