ಐಪಿಎಲ್ 2025 ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ರದರ್ಶನ ಇಲ್ಲಿಯವರೆಗೆ ಉತ್ತಮವಾಗಿಲ್ಲ. ಐದು ಬಾರಿ ಪ್ರಶಸ್ತಿ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡವು ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋಲನ್ನು ಎದುರಿಸಿದೆ. ಈಗ, ಸೋಮವಾರ ವಾಂಖೆಡೆ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುಂಬೈ ಇಂಡಿಯನ್ಸ್ ಎದುರಿಸಲಿದೆ. ಈ ಪಂದ್ಯ ಹಾರ್ದಿಕ್ ಪಾಂಡ್ಯ ಪಡೆಗೆ ಅಗ್ನಿ ಪರೀಕ್ಷೆ ಆಗಿದೆ. ತವರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಲು ಮುಂಬೈ ಇಂಡಿಯನ್ಸ್ ತಂತ್ರ ರೂಪಿಸಿದೆ.
ಐಪಿಎಲ್‌ನಲ್ಲಿ ಯಾವಾಗಲೂ ನಿಧಾನಗತಿಯ ಆರಂಭವನ್ನು ಹೊಂದಿರುವ ಮುಂಬೈ ಇಂಡಿಯನ್ಸ್, ನಾಲ್ಕು ಪಂದ್ಯಗಳಲ್ಲಿ ಮೂರು ಸೋಲುಗಳ ನಂತರ ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಆದರೆ ಜಸ್ಪ್ರೀತ್ ಬುಮ್ರಾ ಅವರ ಆಗಮನದಿಂದ ಮುಂಬೈ ಇಂಡಿಯನ್ಸ್ ಅದೃಷ್ಟ ಬದಲಾಗುವ ನಿರೀಕ್ಷೆಯಿದೆ.

ರಜತ್ ಪಾಟಿದಾರ್ ಮುನ್ನಡೆಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2025 ರಲ್ಲಿ ವಿಭಿನ್ನವಾಗಿ ಕಾಣಿಸುತ್ತಿದೆ. ಹೊಸ ಬಲಿಷ್ಠ ಆರ್‌ಸಿಬಿ ತಂಡವು ಆಡಿರುವ ಮೂರು ಪಂದ್ಯಗಳಲ್ಲಿ 2 ರಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಕೊನೆಯ ಪಂದ್ಯವನ್ನು ತವರಿನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಆರ್‌ಸಿಬಿ ಸೋತಿದೆ. ಆದರೆ ಆರ್‌ಸಿಬಿ ತಂಡದಲ್ಲಿ ಪಂದ್ಯದ ಗತಿಯನ್ನೇ ಬದಲಾಯಿಸಬಲ್ಲ ಎಲ್ಲ ರೀತಿಯ ಆಟಗಾರರಿದ್ದಾರೆ. ಹೀಗಾಗಿ ಇಂದು ತವರಿನಲ್ಲಿ ಆರ್‌ಸಿಬಿ ತಂಡವನ್ನು ಎದುರಿಸುವುದು ಮುಂಬೈ ಇಂಡಿಯನ್ಸ್‌ಗೆ ಸವಾಲಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ತಂಡದ ಕೋಚ್ ಮಹೇಲ ಜಯವರ್ಧನೆ ಪ್ರತಿಕಾ ಗೋಷ್ಠಿ ನಡೆಸಿದ್ದಾರೆ. ಈ ವೇಳೆ ಅವರು, ತಮ್ಮ ತಂಡದ ಸಾಮರ್ಥ್ಯವನ್ನು ಬಗ್ಗೆ ಮಾತನಾಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡವು ಟಾಪ್ ಆರ್ಡರ್‍ನಲ್ಲಿ ಹೆಚ್ಚು ಬ್ಯಾಟರ್‍ಗಳನ್ನು ಹೊಂದಿಲ್ಲ. ಆದರೆ ಅವರ ಅನುಭವವು ಇತರರಿಂದ ಪ್ರತ್ಯೇಕಿಸುತ್ತದೆ ಎಂದಿದ್ದಾರೆ.
ನಮ್ಮಲ್ಲಿ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ತಿಲಕ್ ಮತ್ತು ಹಾರ್ದಿಕ್ ಪಾಂಡ್ಯರಂತಹ ಆಟಗಾರರಿದ್ದಾರೆ. ಅವರು ನಮಗೆ ಸ್ಟಾರ್ ಆಟಗಾರರು. ಬಹುಶಃ ನಮ್ಮಲ್ಲಿರುವ ಅನುಭವವು ಇತರ ಕೆಲವು ತಂಡಗಳಿಗೆ ಇಲ್ಲದಿರಬಹುದು. ನಮ್ಮಲ್ಲಿ ಅಗ್ರ ಕ್ರಮಾಂಕದಲ್ಲಿ ಅಷ್ಟೊಂದು ಅನುಭವಿ ಆಟಗಾರರು ಇಲ್ಲ. ಅಗ್ರ ಕ್ರಮಾಂಕದಲ್ಲಿ ಹಾಗೂ ತಂಡದಲ್ಲಿ ನಮ್ಮಲ್ಲಿ ಸಾಕಷ್ಟು ಆಟಗಾರರಿದ್ದಾರೆ ಎಂದು ತಮ್ಮ ತಂಡದ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಮಹೇಲಾ ಜಯವರ್ಧನೆ ತಿಳಿಸಿದ್ದಾರೆ.
ನಾವು ಯಾವುದೇ ತಂಡವನ್ನು ಸೋಲಿಸುವ ಸಾಮರ್ಥ್ಯವನ್ನು ಹೊಂದಿದ್ದೇವೆ. ಕೆಲವು ಸಂದರ್ಭಗಳಲ್ಲಿ ನಾವು ಸ್ವಲ್ಪ ಹೆಚ್ಚು ಆಕ್ರಮಣಕಾರಿ ಆಗಿರಬೇಕು. ನಾನು ಅದನ್ನು ಬ್ಯಾಟಿಂಗ್ ಮೇಲೆ ಮಾತ್ರ ಹಾಕುತ್ತಿಲ್ಲ. ಏಕೆಂದರೆ ಬೌಲಿಂಗ್‌ನಲ್ಲಿಯೂ ನಾವು ವಿಷಯಗಳನ್ನು ಸ್ವಲ್ಪ ಉತ್ತಮವಾಗಿ ನಿಯಂತ್ರಿಸಬಹುದಿತ್ತು. ಕಳೆದ ವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಆಟ ಪ್ರದರ್ಶಿಸಿದಂತೆ, ಆಟಗಾರರು ತಮ್ಮ ವಿಧಾನದಲ್ಲಿ ಆಕ್ರಮಣಕಾರಿಯಾಗಿ ವರ್ತಿಸಬೇಕು ಎಂದು ಜಯವರ್ಧನೆ ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ರಿಯಾನ್ ರಿಕಲ್ಟನ್ (ವಿಕೆಟ್ ಕೀಪರ್), ವಿಲ್ ಜಾಕ್ಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ರಾಜ್ ಅಂಗದ್ ಬಾವಾ/ಜಸ್ಪ್ರೀತ್ ಬುಮ್ರಾ, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಾಹರ್, ಟ್ರೆಂಟ್ ಬೌಲ್ಟ್.
ಇಂಪ್ಯಾಕ್ಟ್ ಆಟಗಾರ: ವಿಘ್ನೇಶ್ ಪುತ್ತೂರು/ಅಶ್ವನಿ ಕುಮಾರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್, ಯಶ್ ದಯಾಲ್.
ಇಂಪ್ಯಾಕ್ಟ್ ಆಟಗಾರ: ಸುಯಶ್ ಶರ್ಮಾ/ರಾಸಿಖ್ ದಾರ್ ಸಲಾಂ