ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಆವೃತ್ತಿ ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಐಪಿಎಲ್ 2025ರ ಫೈನಲ್ ಪಂದ್ಯ ಮೇ 25 ರಂದು ನಡೆಯಲಿದೆ. ಐಪಿಎಲ್ 18ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಖುವ ನಿರೀಕ್ಷೆಯಲ್ಲಿದೆ. ಆದರೆ ಕೆಕೆಆರ್ ತಂಡವನ್ನು ಚಾಂಪಿಯನ್ ಮಾಡಿದ ಶ್ರೇಯಸ್ ಅಯ್ಯರ್ ಈಗ ಪಂಜಾಬ್ ಕಿಂಗ್ಸ್‌ನ ನಾಯಕರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೆಕೆಆರ್ ಹೊಸ ನಾಯಕನ ಹುಡುಕಾಟದಲ್ಲಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಇನ್ನೂ ತನ್ನ ಹೊಸ ನಾಯಕನನ್ನು ಘೋಷಿಸಿಲ್ಲ. ತಂಡದಲ್ಲಿ ನಾಯಕತ್ವ ರೇಸ್‌ನಲ್ಲಿ ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ಸುನಿಲ್ ನರೈನ್, ಆಂಡ್ರೆ ರಸೆಲ್ ಮತ್ತು ರಿಂಕು ಸಿಂಗ್ ಇದ್ದಾರೆ. ಈ ಎಲ್ಲದರ ಪೈಕಿ, ರಹಾನೆ ಮತ್ತು ವೆಂಕಟೇಶ್ ಅಯ್ಯರ್ ಅವರ ಹೆಸರುಗಳು ನಾಯಕತ್ವದ ರೇಸ್‌ನಲ್ಲಿ ಮುಂಚೂಣಿಯಲ್ಲಿವೆ. ಇದೀಗ ಕೆಕೆಆರ್ ನಾಯಕತ್ವದ ಬಗ್ಗೆ ವೆಂಕಟೇಶ್ ಅಯ್ಯರ್ ಹೇಳಿಕೆ ಮುನ್ನೆಲೆಗೆ ಬಂದಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ವೆಂಕಟೇಶ್ ಅಯ್ಯರ್ ಅವರನ್ನು ಉಳಿಸಿಕೊಂಡಿರಲಿಲ್ಲ. ಇದಾದ ನಂತರ ಅವರನ್ನು ಹರಾಜಿನಲ್ಲಿ 23.75 ಕೋಟಿ ರೂ.ಗಳ ಬೃಹತ್ ಮೊತ್ತಕ್ಕೆ ಬಿಡ್ ಮಾಡಲಾಯಿತು.
ಸಂದರ್ಶನವೊಂದರಲ್ಲಿ ಕೆಕೆಆರ್ ತಂಡದ ನಾಯಕತ್ವದ ಬಗ್ಗೆ ವೆಂಕಟೇಶ್ ಅಯ್ಯರ್ ಮಾತನಾಡಿದ್ದಾರೆ. ನಾಯಕತ್ವವು ಕೇವಲ ಒಂದು ಸ್ಥಾನ ಎಂದು ನಾನು ಯಾವಾಗಲೂ ಹೇಳಿದ್ದೇನೆ. ನಾನು ನಾಯಕತ್ವವನ್ನು ನಂಬುತ್ತೇನೆ. ಇದು ದೊಡ್ಡ ಪಾತ್ರ. ಕೆಲವೊಮ್ಮೆ ನೀವು ನಾಯಕನಲ್ಲದಿದ್ದರೂ ಸಹ ಡ್ರೆಸ್ಸಿಂಗ್ ರೂಮ್‌ನ ನಾಯಕರಾಗಬಹುದು. ಇದಕ್ಕೆ ನೀವು ಒಂದು ಉದಾಹರಣೆಯನ್ನು ತೋರಿಸಬೇಕು. ನೀವು ಮೈದಾನದಲ್ಲಿ ಮತ್ತು ಹೊರಗೆ ಉತ್ತಮ ಮಾದರಿಯಾಗಿರಬೇಕು ಎಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ನಾನು ಮಧ್ಯಪ್ರದೇಶ ತಂಡದ ನಾಯಕನಲ್ಲ, ಆದರೆ ನಾನು ಅಲ್ಲಿಯೂ ಅದನ್ನೇ ಮಾಡುತ್ತಿದ್ದೇನೆ. ನನ್ನ ಅಭಿಪ್ರಾಯವನ್ನು ಅಲ್ಲಿ ಮೆಚ್ಚುಗೆ ಸಿಗುತ್ತಿದೆ. ನಾನು ಯಾವಾಗಲೂ ಅಂತಹ ವ್ಯಕ್ತಿಯಾಗಬೇಕೆಂದು ಬಯಸುತ್ತಿದ್ದೆ. ನಾಯಕತ್ವ ನನಗೆ ಬಂದರೆ, ನಾನು ಖಂಡಿತವಾಗಿಯೂ ಅದನ್ನು ವಹಿಸಿಕೊಳ್ಳುತ್ತೇನೆ. ನಾನು ಈ ಪಾತ್ರವನ್ನು ಒಪ್ಪಿಕೊಳ್ಳದಿರಲು ಯಾವುದೇ ಕಾರಣವಿಲ್ಲ ಎಂದು ಕೆಕೆಆರ್ ತಂಡದ ನಾಯಕತ್ವ ವಹಿಸಿಕೊಳ್ಳಲು ವೆಂಕಟೇಶ್ ಅಯ್ಯರ್ ರೆಡಿ ಎಂದಿದ್ದಾರೆ.
ವೆಂಕಟೇಶ್ ಅಯ್ಯರ್ 2021 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಅಂದಿನಿಂದ ಅವರು 51 ಪಂದ್ಯಗಳಲ್ಲಿ 137 ರ ಸ್ಟ್ರೈಕ್ ರೇಟ್‌ನಲ್ಲಿ 1326 ರನ್‌ಗಳನ್ನು ಗಳಿಸಿದ್ದಾರೆ. ಎಲ್ಲಾ ಕ್ರಮಾಂದಲ್ಲಿಯೂ ಬ್ಯಾಟಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರು ಐಪಿಎಲ್‌ನಲ್ಲಿ 3 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ಈಗ ಐಪಿಎಲ್ 2025 ರಲ್ಲಿ ಅವರು ಕೆಕೆಆರ್ ಪರ ಭರ್ಜರಿ ಪ್ರದರ್ಶನ ನೀಡುವ ಉತ್ಸಾಹದಲ್ಲಿದ್ದಾರೆ.