ಕಳೆದ ಬಾರಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವನ್ನು ಐಪಿಎಲ್ ಚಾಂಪಿಯನ್ ಮಾಡುವಲ್ಲಿ ಶ್ರೇಯಸ್ ಅಯ್ಯರ್ ಪ್ರಮುಖ ಪಾತ್ರವಹಿಸಿದ್ದರು. ಆದರೆ ಮುಂಬರುವ ಐಪಿಎಲ್ 2025ರ ಟೂರ್ನಿಗೆ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಉಳಿಸಿಕೊಂಡಿಲ್ಲ.
ಕೆಕೆಆರ್ ತಮ್ಮ ಚಾಂಪಿಯನ್ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಮುಂದಿನ ಐಪಿಎಲ್ ಆವೃತ್ತಿಗೆ ಏಕೆ ಉಳಿಸಿಕೊಂಡಿಲ್ಲ ಎಂಬುದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಆರಂಭದಲ್ಲಿ ಕೆಕೆಆರ್ ಫ್ರಾಂಚೈಸಿ ಶ್ರೇಯಸ್ ಅಯ್ಯರ್ ಅವರನ್ನು ಕೈಬಿಟ್ಟಿದ್ದು ಏಕೆ ಎಂಬುದಕ್ಕೆ ಸ್ಪಷ್ಟನೆ ಸಿಕ್ಕಿರಲಿಲ್ಲ. ಇದೀಗ ಕೆಕೆಆರ್ ಸಿಇಒ ವೆಂಕಿ ಮೈಸೂರು ಅವರು ಐಪಿಎಲ್ 2025ರ ಮೆಗಾ ಹರಾಜಿಗೆ ಮುನ್ನ ಶ್ರೇಯಸ್ ಅಯ್ಯರ್ ಅವರನ್ನು ಉಳಿಸಿಕೊಳ್ಳದಕ್ಕೆ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಕೆಕೆಆರ್ ಸಿಇಒ ಮೈಸೂರು ವೆಂಕಿ, ಐಪಿಎಲ್ 2025ರ ಟೂರ್ನಿಗಾಗಿ ಕೆಕೆಆರ್ ಉಳಿಸಿಕೊಡಿರುವ ಆಟಗಾರ ಪಟ್ಟಿಯಲ್ಲಿ ಶ್ರೇಯಸ್ ಅಯ್ಯರ್ ಮೊದಲ ಆಯ್ಕೆಯಾಗಿದ್ದರು. ಅವರು ನಮ್ಮ ತಂಡದ ನಾಯಕ. ಹೀಗಾಗಿ ನಾಯಕನ ಸುತ್ತ ಬಲಿಷ್ಠ ತಂಡವನ್ನು ಕಟ್ಟಬೇಕು. ಅವರು ಉತ್ತಮ ನಾಯಕನಾಗಿರುವ ಕಾರಣದಿಂದಲೇ ನಾವು 2022ರ ಐಪಿಎಲ್ ಅವೃತಿಯಲ್ಲಿ ತಂಡಕ್ಕೆ ಆಯ್ಕೆ ಮಾಡಿದ್ದೇವು. ಆದರೆ ರಿಟೇನ್ ಪ್ರಕ್ರಿಯೆಗೆ ಪರಸ್ಪರ ಒಪ್ಪಿಗೆ ಅಗತ್ಯವಿದ್ದು, ಶ್ರೇಯಸ್ ಅಯ್ಯರ್ ಕಡೆಯಿಂದ ಯಾವುದೇ ಒಪ್ಪಿಗೆ ಸಿಗಲಿಲ್ಲ. ಹೀಗಾಗಿ ಕೆಕೆಆರ್ ಫ್ರಾಂಚೈಸಿಯಿಂದ ಏನನ್ನು ಮಾಡಲು ಸಾಧ್ಯವಾಗದೆ ಅವರನ್ನು ಕೈ ಬಿಡಬೇಕಾಯಿತು ಎಂದು ಹೇಳಿದ್ದಾರೆ.
ಶ್ರೇಯಸ್ ಅವರೊಂದಿಗೆ ಉತ್ತಮ ವೈಯಕ್ತಿಕ ಬಾಂಧವ್ಯವನ್ನು ಹೊಂದಿದ್ದರೂ, ಅವರು ಹರಾಜಿನಲ್ಲಿ ತಮ್ಮ ಮೌಲ್ಯವನ್ನು ಪರೀಕ್ಷಿಸಲು ಬಯಸಿದ್ದರು. ಅದರಿಂದ ಅವರ ನಿರ್ಧಾರವನ್ನು ನಾವು ಬೆಂಬಲಿಸುತ್ತೇವೆ ಎಂದು ಕೆಕೆಆರ್ ಸಿಇಒ ತಿಳಿಸಿದ್ದಾರೆ.
ಗುರುವಾರ ಬಿಡುಗಡೆ ಮಾಡಿದ ಐಪಿಎಲ್ 2025ರ ರಿಟೇನ್ ಪಟ್ಟಿಯಲ್ಲಿ ಕೆಕೆಆರ್ ಆರು ಆಟಗಾರರನ್ನು ಉಳಿಸಿಕೊಂಡಿದೆ. ರಿಂಕು ಸಿಂಗ್ (13 ಕೋಟಿ ರೂ.), ಸುನಿಲ್ ನರೈನ್ (12 ಕೋಟಿ ರೂ.), ಆಂಡ್ರೆ ರಸೆಲ್ (ರೂ. 12 ಕೋಟಿ), ವರುಣ್ ಚಕ್ರವರ್ತಿ (12 ಕೋಟಿ ರೂ.), ಹರ್ಷಿತ್ ರಾಣಾ (ರೂ. 4 ಕೋಟಿ) ಮತ್ತು ರಮಣದೀಪ್ ಸಿಂಗ್ (ರೂ. 4 ಕೋಟಿ) ಅವರನ್ನು ಕೆಕೆಆರ್ ರಿಟೇನ್ ಮಾಡಿಕೊಂಡಿದೆ.