ಎಲ್‌ಎಸ್‌ಜಿ ಪರ ಪದಾರ್ಪಣೆ ಮಾಡಿದ ಮಗ ಅರ್ಜುನ್‌ಗೆ ಸಚಿನ್ ತೆಂಡೂಲ್ಕರ್ ಭಾವುಕ ಸಂದೇಶ
ಮುಂಬೈ: ಲಕ್ನೋ ಸೂಪರ್ ಜೈಂಟ್ಸ್ ಪರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ (ಐಪಿಎಲ್) ಪದಾರ್ಪಣೆ ಮಾಡಿದ ಅರ್ಜುನ್ ತೆಂಡೂಲ್ಕರ್‌ಗೆ, ತಂದೆ ಸಚಿನ್ ತೆಂಡೂಲ್ಕರ್ ಮತ್ತು ಸಹೋದರಿ ಸಾರಾ ತೆಂಡೂಲ್ಕರ್ ಶುಭಾಶಯ ಕೋರಿದ್ದಾರೆ. ಐಪಿಎಲ್ 2026ರ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಮೂಲಕ ಅರ್ಜುನ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಆಡುವ ಅವಕಾಶ ಲಭಿಸಿತು.
ಎಕಾನಾ ಕ್ರೀಡಾಂಗಣದಲ್ಲಿ ನಡೆದ ಆ ಪಂದ್ಯದಲ್ಲಿ, ಅರ್ಜುನ್ ತಮ್ಮ ನಾಲ್ಕು ಓವರ್‌ಗಳಲ್ಲಿ 36 ರನ್ ನೀಡಿದರು. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು, ಜವಾಬ್ದಾರಿಯುತ ಬೌಲಿಂಗ್ ಪ್ರದರ್ಶಿಸಿದ ಅವರು, ಪ್ರಭಸಿಮ್ರಾನ್ ಸಿಂಗ್ ಅವರನ್ನು ಯಾರ್ಕರ್ ಮೂಲಕ ಔಟ್ ಮಾಡಿದರು. ಅಲ್ಲದೆ ಎಲ್‌ಎಸ್‌ಜಿ ಪರ ಐಪಿಎಲ್‌ನಲ್ಲಿ ತಮ್ಮ ವಿಕೆಟ್ ಖಾತೆಯನ್ನು ಓಪನ್ ಮಾಡಿದರು. ಎಡಗೈ ಬೌಲರ್ ಅರ್ಜುನ್ ತಮ್ಮ ಪ್ರದರ್ಶನದಿಂದ ಪ್ರಭಾವ ಬೀರಿದರು.

ಸೋದರ ಅರ್ಜುನ್ ತೆಂಡೂಲ್ಕರ್ ಅವರ ಚೊಚ್ಚಲ ಪಂದ್ಯಕ್ಕೆ ಸಾರಾ ತೆಂಡೂಲ್ಕರ್ ಶುಭಕೋರಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ "ನನ್ನ ಪ್ರೀತಿಯ ಸಹೋದರ, ನೀನು ಉತ್ತಮ ಪ್ರದರ್ಶನ ನೀಡಿದ್ದೀಯಾ. ನಿನ್ನ ಕಠಿಣ ಪರಿಶ್ರಮ, ಒತ್ತಡ ನಿಭಾಯಿಸುವ ಸಾಮರ್ಥ್ಯ ಮತ್ತು ತಾಳ್ಮೆಯ ಬಗ್ಗೆ ನನಗೆ ಹೆಮ್ಮೆ ಇದೆ. ನಿನ್ನನ್ನು ಸದಾ ಪ್ರೀತಿಸುತ್ತೇನೆ" ಎಂದು ಬರೆದಿದ್ದಾರೆ.
ಸಚಿನ್ ಬರೆದಿದ್ದು ಇಷ್ಟು...
ಅರ್ಜುನ್ ತಂದೆ ಸಚಿನ್ ತೆಂಡೂಲ್ಕರ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಹಂಚಿಕೊಂಡಿದ್ದಾರೆ. ಸೀಸನ್‌ನ ಕೊನೆಯ ಲೀಗ್ ಪಂದ್ಯದವರೆಗೂ ಅವಕಾಶಕ್ಕಾಗಿ ಕಾದು, ತಾಳ್ಮೆಯನ್ನು ತೋರಿದ್ದ ಅರ್ಜುನ್ ಅವರನ್ನು ಸಚಿನ್ ಶ್ಲಾಘಿಸಿದರು. ಚೆನ್ನಾಗಿ ಆಡಿದೆ ಅರ್ಜುನ್. ಈ ಸೀಸನ್‌ನಲ್ಲಿ ನೀನು ನಿನ್ನನ್ನು ನಿಭಾಯಿಸಿದ ರೀತಿ ಬಗ್ಗೆ ನನಗೆ ಹೆಮ್ಮೆ ಇದೆ ಎಂದೂ ಸಚಿನ್ ತಮ್ಮ ಪೋಸ್ಟ್‌ನಲ್ಲಿ ಸೇರಿಸಿದ್ದಾರೆ. ಕ್ರಿಕೆಟ್ ಪ್ರತಿಭೆಯ ಜೊತೆಗೆ ತಾಳ್ಮೆಯನ್ನೂ ಪರೀಕ್ಷಿಸುತ್ತದೆ. ನೀನು ಇವೆರಡನ್ನೂ ಉತ್ತಮವಾಗಿ ನಿಭಾಯಿಸಿದೆ. ಯಾವಾಗಲೂ ಆಟದ ಮೇಲಿನ ನಿನ್ನ ಪ್ರೀತಿಯನ್ನು ಕಾಪಾಡಿಕೋ. ನಿನ್ನನ್ನು ನಾನು ಸದಾ ಪ್ರೀತಿಸುತ್ತೇನೆ," ಎಂದು ಮಾಸ್ಟರ್ ಬ್ಲಾಸ್ಟರ್ ತಮ್ಮ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.
ಪವರ್‌ಪ್ಲೇ ನಂತರ ಕ್ಯಾಪ್ಟನ್ ರಿಷಭ್ ಪಂತ್ ಅರ್ಜುನ್‌ರನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರು. ಅರ್ಜುನ್ ಬಿಗಿಯಾದ ಬೌಲಿಂಗ್ ಮತ್ತು ಬೌನ್ಸರ್‌ಗಳೊಂದಿಗೆ ಭರವಸೆ ಮೂಡಿಸಿದರು. ಇವರ ಮೊದಲ ಓವರ್‌ನಲ್ಲಿ ಪ್ರಭ್‌ಸಿಮ್ರನ್ ಅವರ ಕ್ಯಾಚ್‌ನ್ನು ರಿಷಭ್ ಪಂತ್ ಕೈ ಚೆಲ್ಲಿದರು. ಆಗಲೂ ಅರ್ಜುನ್ ಶಾಂತವಾಗಿ ವರ್ತಿಸಿದರು. ಬಳಿಕ ಇವರ ಎಸೆತದಲ್ಲಿ ಪಂಜಾಬ್ ಓಪನರ್ ಔಟ್ ಆದರು. ಈ ಸೀಸನ್‌ನಲ್ಲಿ ಅರ್ಜುನ್ ತೆಂಡೂಲ್ಕರ್ ಅವರ ಐಪಿಎಲ್ ಪಯಣ ವೃತ್ತಿಜೀವನಕ್ಕೆ ಮಹತ್ವದ ತಿರುವು ನೀಡಿದೆ. ಮುಂಬೈ ಇಂಡಿಯನ್ಸ್‌ನಿಂದ ಲಕ್ನೋ ಸೂಪರ್ ಜೈಂಟ್ಸ್‌ಗೆ ವರ್ಗಾವಣೆಗೊಂಡ ನಂತರ, ಇದು ಅವರ ಮೊದಲ ಐಪಿಎಲ್ ಸೀಸನ್ ಆಗಿದೆ. ಎಲ್‌ಎಸ್‌ಜಿ ಈ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದು, ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications