IPL 2026 Eliminator: ಸನ್‌ರೈಸರ್ಸ್, ರಾಯಲ್ಸ್ ಎಲಿಮಿನೇಟರ್ ಫೈಟ್
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಜಯ ಸಾಧಿಸಿದ ತಂಡ ಎರಡನೇ ಕ್ವಾಲಿಫೈಯರ್ ನಲ್ಲಿ ಆಡಲಿದೆ. ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರ ದಂಡೇ ಇದ್ದು ರೋಚಕತೆ ಹೆಚ್ಚಿಸಿದೆ.
ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದೊಂದಿಗೆ ಎಲಿಮಿನೇಟರ್ ಪಂದ್ಯವನ್ನು ಪ್ರವೇಶಿಸಿರುವ ಎಸ್‌ಆರ್‌ಎಚ್ ಭರ್ಜರಿ ಫಾರ್ಮ್‌ನಲ್ಲಿದೆ. ಇನ್ನು ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಭರ್ಜರಿ ಜಯ ಸಾಧಿಸಿ, ನಾಲ್ಕನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿದೆ. ನ್ಯೂ ಚಂಡೀಗಢ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಅಬ್ಬರಿಸಲು ಎರಡೂ ತಂಡಗಳ ಬ್ಯಾಟರ್‌ಗಳು ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಉಭಯ ತಂಡಗಳು ಈಗಾಗಲೇ ಐಪಿಎಲ್‌ನಲ್ಲಿ ಒಟ್ಟು 23 ಪಂದ್ಯಗಳಲ್ಲಿ ಕಾದಾಟ ನಡೆಸಿದ್ದು, ಎಸ್‌ಆರ್‌ಎಚ್ 14 ಪಂದ್ಯಗಳಲ್ಲಿ ಜಯ ಸಾಧಿಸಿದೆ. ರಾಜಸ್ಥಾನ್ ರಾಯಲ್ಸ್ 9 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. 19ನೇ ಆವೃತ್ತಿಯ ಐಪಿಎಲ್‌ನ ಲೀಗ್ ಹಂತದಲ್ಲಿ ಎರಡೂ ತಂಡಗಳು ಈ ಮೊದಲೇ ಎರಡು ಬಾರಿ ಮುಖಾಮುಖಿಯಾಗಿದ್ದು, ಎರಡೂ ಪಂದ್ಯಗಳನ್ನು ಎಸ್‌ಆರ್‌ಎಚ್ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಸೇಡು ತೀರಿಸಿಕೊಳ್ಳುವ ಆಸೆಯನ್ನು ಆರ್‌ಆರ್ ಹೊಂದಿದೆ.
ವೈಭವ್ ಆಕರ್ಷಣೆ
ರಾಜಸ್ಥಾನ್ ರಾಯಲ್ಸ್ ತಂಡದ ಪರ ಆರಂಭಿಕರಾಗಿ ಕಣಕ್ಕೆ ಇಳಿಯುವ 15 ವರ್ಷ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಇನಿಂಗ್ಸ್ ಆರಂಭಿಸಲಿದ್ದಾರೆ. ಉಭಯ ಆಟಗಾರರು ದೊಡ್ಡ ಹೊಡೆತಗಳನ್ನು ಬಾರಿಸುವ ಕ್ಷಮತೆಯನ್ನು ಹೊಂದಿರುವ ಆಟಗಾರರು. ಅದರಲ್ಲೂ ವೈಭವ್ ಸೂರ್ಯವಂಶಿ ಸ್ಟಾರ್ ವೇಗದ ಬೌಲರ್‌ಗಳನ್ನೇ ದಂಡಿಸಿ ಸುದ್ದಿಯಾಗಿದ್ದಾರೆ. ಇವರ ಹಾಗೂ ಎಸ್‌ಆರ್‌ಎಚ್ ತಂಡದ ವೇಗದ ಬೌಲರ್‌ಗಳ ಕಾಳಗ ಎಲ್ಲರ ಆಕರ್ಷಣೆ ಹೆಚ್ಚಿಸಿದೆ. ಮಧ್ಯಮ ಕ್ರಮಾಂಕದಲ್ಲಿ ರಿಯಾನ್ ಪರಾಗ್, ಧ್ರುವ್ ಜುರೇಲ್ ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾಗಬೇಕಿದೆ.
ವೇಗದ ಬೌಲರ್‌ಗಳಾಗಿ ಜೋಫ್ರಾ ಆರ್ಚರ್ ಹಾಗೂ ನಂಡ್ರೆ ಬರ್ಗರ್ ಪವರ್ ಪ್ಲೇನಲ್ಲಿ ಬಿಗುವಿನ ದಾಳಿ ನಡೆಸುವ ಕ್ಷಮತೆ ಹೊಂದಿದ್ದಾರೆ. ಮಧ್ಯದ ಓವರ್‌ಗಳಲ್ಲಿ ಬ್ರಿಜೇಶ್ ಶರ್ಮಾ, ದಸುನ್ ಶನಕ ಹಾಗೂ ಕನ್ನಡಿಗ ಯಶ್ ರಾಜ್ ಪುಂಜಾ ಬಿಗುವಿನ ದಾಳಿ ನಡೆಸಿ ತಂಡಕ್ಕೆ ಆಧಾರವಾಗಬಲ್ಲರು.
ಕ್ಲಾಸೆನ್ ಬಲ
ಎಸ್‌ಆರ್‌ಎಚ್ ತಂಡದಲ್ಲೂ ಸ್ಫೋಟಕ ಬ್ಯಾಟರ್‌ಗಳ ದಂಡೇ ಇದೆ. ಆರಂಭಿಕರಾಗಿ ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಬಿಗ್ ಇನಿಂಗ್ಸ್ ಕಟ್ಟುವ ಅನಿವಾರ್ಯತೆ ಇದೆ. ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್, ಹೆನ್ರಿಕ್ ಕ್ಲಾಸೆನ್ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡುತ್ತಿದ್ದಾರೆ. ಉಳಿದ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ನೀಡಿದಲ್ಲಿ ದೊಡ್ಡ ಗೆಲುವಿನ ಕನಸು ನನಸಾಗುತ್ತದೆ.

ಬೌಲಿಂಗ್ ವಿಭಾಗದಲ್ಲಿ ಇಶಾನ್ ಮಲಿಂಗ್, ಪ್ಯಾಟ್ ಕಮಿನ್ಸ್ ಆರಂಭದಲ್ಲಿ ಎದುರಾಳಿ ಬ್ಯಾಟರ್‌ಗಳ ರನ್ ದಾಹಕ್ಕೆ ಬ್ರೇಕ್ ಹಾಕುವ ಕ್ಷಮತೆ ಹೊಂದಿದ್ದಾರೆ. ಡೆತ್ ಓವರ್‌ಗಳಲ್ಲಿ ತಮ್ಮ ಸ್ಲೋವರ್ ಒನ್‌ಗಳ ಮೂಲಕ ಕಾಡಲು ಸಕೀಬ್ ಹುಸೇನ್ ಸಿದ್ಧರಾಗಿದ್ದಾರೆ. ಶಿವಂಗ್ ಕುಮಾರ್ ಈ ಆವೃತ್ತಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಇವರ ಮೇಲೆ ಒತ್ತಡ ಹೆಚ್ಚಿದೆ. ಒತ್ತಡವನ್ನು ಮೆಟ್ಟಿನಿಲ್ಲೋದು ಯಾರು ಎಂಬ ಪ್ರಶ್ನೆಗೆ ಬುಧವಾರ ರಾತ್ರಿಯ ವೇಳೆಗೆ ಉತ್ತರ ಸಿಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications