ಇನ್ನೇನು ಕೆಲವೇ ದಿನಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾಗಲಿದೆ. ಈ ಲೀಗ್‌ಗಾಗಿ ಎಲ್ಲ ತಂಡಗಳು ಭರ್ಜರಿ ತಯಾರಿ ನಡೆಸಿವೆ. ಐದು ಬಾರಿ ಐಪಿಎಲ್ ಚಾಂಪಿಯನ್ ತಂಡ ಮುಂಬೈ ಇಂಡಿಯನ್ಸ್ ಸಹ ಮತ್ತೊಮ್ಮೆ ಪ್ರಶಸ್ತಿ ಎತ್ತುವ ನಿಟ್ಟಿನಲ್ಲಿ ಮೈದಾನದಲ್ಲಿ ಬೆವರು ಹರಿಸುತ್ತಿದೆ. ಮುಂಬೈ ಇಂಡಿಯನ್ಸ್ ತಂಡದ ಸಂಯೋಜನೆಯ ಬಗ್ಗೆ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಸಂಯೋಜನೆಯ ಬಗ್ಗೆ ಹರ್ಭಜನ್ ಸಿಂಗ್ ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ. ಮುಂಬೈ ತಂಡದ ದಕ್ಷಿಣ ಆಫ್ರಿಕಾದ ರಯಾನ್ ರಿಕಲ್ಟನ್ ಮತ್ತು ಕ್ವಿಂಟನ್ ಡಿ ಕಾಕ್ ಇಬ್ಬರನ್ನೂ ಒಟ್ಟಾಗಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸೇರಿಸಿಕೊಳ್ಳುವುದು ಕಷ್ಟ. ಈ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ತಂಡದಲ್ಲಿ ಅವಕಾಶ ನೀಡಲಿದೆ ಎಂದು ತಿಳಿಸಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಜೊತೆಗೆ ಮಾತನಾಡಿರುವ ಹರ್ಭಜನ್ ಸಿಂಗ್, ತಂಡದಲ್ಲಿ ಈಗಾಗಲೇ ಹಲವು ಭಾರತೀಯ ಬ್ಯಾಟರ್‌ಗಳನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಲೈನ್ ಅಪ್ ಬಹುತೇಕ ಖಚಿತವಾಗಿದೆ ಎಂದು ಭಜ್ಜಿ ತಿಳಿಸಿದ್ದಾರೆ. ಆರಂಭಿಕರಾಗಿ ಅನುಭವಿ ರೋಹಿತ್ ಶರ್ಮಾ ಆಡುವುದು ಫಿಕ್ಸ್. ಇವರೊಂದಿಗೆ ರಯಾನ್ ರಿಕಲ್ಟನ್ ಅಥವಾ ಡಿಕಾಕ್ ಇಬ್ಬರಲ್ಲಿ ಒಬ್ಬರು ಇನಿಂಗ್ಸ್ ಆರಂಭಿಸಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಬಲವಾದ ಆಯ್ಕೆಗಳು ಇವೆ. ಅವರಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಮುಂಬೈ ತಂಡದ ಬ್ಯಾಟಿಂಗ್ ಬಲ ತುಂಬಲಿದ್ದಾರೆ. ರಿಕಲ್ಟನ್ ಮತ್ತು ಡಿ ಕಾಕ್ ಅವರನ್ನು ಒಟ್ಟಿಗೆ ಆಡಿಸುವುದು ಕಷ್ಟ ಎಂದು ತಿಳಿಸಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಪಿನ್ ಬೌಲರ್‌ಗಳ ದಂಡೇ ಇದೆ. ಅಲ್ಲಾ ಗಜನ್‌ಫರ್ ಮತ್ತು ಮಿಚೆಲ್ ಸ್ಯಾಂಟ್ನರ್ ತಂಡದ ಸ್ಪಿನ್ ವಿಭಾಗಕ್ಕೆ ಬಲ ತುಂಬ ಬಲ್ಲ ಆಟಗಾರರು. ಮುಂಬೈ ಗಜನ್‌ಫರ್ ಅವರಿಗೆ ಹೆಚ್ಚಿನ ಅವಕಾಶವನ್ನು ನೀಡಬಹುದು. ಇವರನ್ನು ಅನೆಕ ಬ್ಯಾಟರ್‌ಗಳು ನೋಡದೇ ಇರುವುದೇ ಅವರ ಶಕ್ತಿ ಆಗಿರಲಿದೆ. ಕೆಲವು ಸಂದರ್ಭಗಳಲ್ಲಿ ಸ್ಯಾಂಟ್ನರ್‌ಗೆ ಅವಕಾಶ ಸಿಗಬಹುದು. ಚೆನ್ನೈನಂತಹ ಸ್ಪಿನ್ ಸ್ನೇಹಿ ವಿಕೆಟ್‌ನಲ್ಲಿ ಸ್ಯಾಂಟ್ನರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು ಎಂದು ಹರ್ಭಜನ್ ನಂಬಿದ್ದಾರೆ.

ಮುಂಬೈ ತಂಡ ತನ್ನ ಮೊದಲ ಪಂದ್ಯವನ್ನು ಮಾರ್ಚ್ 29ರ ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಕಣಕ್ಕೆ ಇಳಿಯಲಿದೆ. ಎರಡನೇ ಪಂದ್ಯ ಏಪ್ರಿಲ್ 4 ರಂದು ನವದೆಹಲಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ, ಮೂರನೇ ಪಂದ್ಯವನ್ನು ಗುವಾಹಟಿಯಲ್ಲಿ ಏಪ್ರಿಲ್ 7 ರಂದು ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ, ನಾಲ್ಕನೇ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮುಂಬೈನಲ್ಲಿ ಆಡಲಿದೆ.