RCB ಅಭಿಮಾನಿಗಳಿಗೆ ಸರ್ಕಾರದ ಸಿಹಿ ಸುದ್ದಿ: ಐಪಿಎಲ್‌ಗೆ ಚಿನ್ನಸ್ವಾಮಿ ಆತಿಥ್ಯ
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಪಂದ್ಯಗಳು ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತದಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಐತಿಹಾಸಿಕ ಚಿನ್ನಸ್ವಾಮಿ ಮೈದಾನದಲ್ಲಿ ಅಂತಾರಾಷ್ಟ್ರೀಯ ಹಾಗೂ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ರಾಜ್ಯ ಗೃಹ ಇಲಾಖೆ ಅಧಿಕೃತವಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್‌ಸಿಎ)ಗೆ ಅನುಮತಿ ನೀಡಿದೆ. ಈ ಮೂಲಕ ಸರ್ಕಾರ ಆರ್‌ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ.
ನ್ಯಾಯಮೂರ್ತಿ ಕುನ್ಹಾ ವರದಿಯಲ್ಲಿನ ಅಂಶಗಳನ್ನು ಜಾರಿಗೆ ತಂದು ಕ್ರಿಕೆಟ್ ಪಂದ್ಯಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಸರ್ಕಾರ ಈಗಾಗಲೇ ಸೂಚಿಸಿರುವ ಷರತ್ತುಗಳನ್ನು ನಿಯಮಗಳನ್ನು ಪಾಲಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಇನ್ನು ರಾಜ್ಯ ಸರ್ಕಾರ ನಿಗದಿ ಮಾಡುವ ಕ್ರಮಗಳನ್ನು ಜಾರಿಗೆ ತರಲು ಕೆಎಸ್‌ಸಿಎ ಸಿದ್ಧವಾಗಿದೆ ಎಂದು ಕೆಎಸ್‌ಸಿಎ ಅಧಿಕೃತ ವಕ್ತಾರ ವಿನಯ್ ಮೃತ್ಯುಂಜಯ ದೃಢಪಡಿಸಿದ್ದಾರೆ.

ಸರ್ಕಾರ ವಿಧಿಸಿರುವ ಎಲ್ಲಾ ಷರತ್ತುಗಳನ್ನು ಪೂರೈಸುವ ವಿಶ್ವಾಸವನ್ನು ಕೆಎಸ್‌ಸಿಎ (KSCA) ಹೊಂದಿದೆ. ಸಂಸ್ಥೆಯು ಈಗಾಗಲೇ ತಜ್ಞ ಸಮಿತಿಯ ಮುಂದೆ ಅನುಸರಿಸಬಹುದಾದ ಮಾರ್ಗಸೂಚಿಯನ್ನು ತಿಳಿಸಿದೆ. ಸುರಕ್ಷತೆ, ಭದ್ರತೆ ಮತ್ತು ಜನಸಂದಣಿ ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸಂಸ್ಥೆ ಸಂಪೂರ್ಣ ಬದ್ಧವಾಗಿದೆ ಎಂದು ಕೆಎಸ್‌ಸಿಎ ತಿಳಿಸಿದೆ.
ನಿಷೇಧಕ್ಕೆ ಕಾರಣ ಏನು?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಆರ್‌ಸಿಬಿ ಕಪ್ ಗೆದ್ದ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ಅಲ್ಲದೆ ಆರ್‌ಸಿಬಿ ಮ್ಯಾನೇಜ್ಮೆಂಟ್ ಸಹ ಅಭಿಮಾನಿಗಳೊಂದಿಗೆ ಕಪ್ ಗೆಲುವಿನ ಸಂಭ್ರಮವನ್ನು ಸಂಭ್ರಮಿಸುವುದಾಗಿ ತಿಳಿಸಿತ್ತು. ಈ ವೇಳೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಮೈದಾನಕ್ಕೆ ಬರಲು ಆರಂಭಿಸಿದರು. ಚಿನ್ನಸ್ವಾಮಿ ಮೈದಾನದಲ್ಲಿ ಇರುವ ಸ್ಥಳಗಳಿಗಿಂತ ಹೆಚ್ಚಿನ ಅಭಿಮಾನಿಗಳು ಮೈದಾನದತ್ತ ದಾಪುಗಾಲು ಇಟ್ಟರು. ಈ ವೇಳೆ ಅಭಿಮಾನಿಗಳ ನೂಕುನುಗ್ಗಲು ಸಂಭವಿಸಿ 11 ಜನ ಸಾವನ್ನಪ್ಪಿದರು.

ಈ ಘಟನೆಯಿಂದಾಗಿ ಎಂ ಚಿನ್ನಸ್ವಾಮಿ ಮೈದಾನ ದೊಡ್ಡ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ಸೂಕ್ತವಲ್ಲ ಎಂದು ಸರ್ಕಾರ ನೇಮಿಸಿದ್ದ ತನಿಖಾ ಸಮಿತಿ ತಿಳಿಸಿತ್ತು. ಇದಾದ ಬಳಿಕ ಚಿನ್ನಸ್ವಾಮಿ ಮೈದಾನ ಮಹಿಳಾ ಏಕದಿನ ವಿಶ್ವಕಪ್ ಆತಿಥ್ಯ, ದೇಶೀಯ ಕ್ರಿಕೆಟ್ ಟೂರ್ನಿಗಳ ಆತಿಥ್ಯದಿಂದ ವಂಚಿತವಾಗಿತ್ತು.
ಸರ್ಕಾರ ನೇಮಿಸಿದ್ದ ತನಿಖಾ ಸಂಸ್ಥೆ ಒಟ್ಟು 17 ಷರತ್ತುಗಳನ್ನು ವಿಧಿಸಿತ್ತು. ಈ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅನಿವಾರ್ಯ ಎಂದು ಸಹ ಸೂಚಿಸಿತ್ತು. ಸರ್ಕಾರ ಸೂಚಿಸಿರುವ ಎಲ್ಲ ಷರತ್ತುಗಳಿಗೆ ನಾವು ಬದ್ಧರಾಗಿದ್ದೇವೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ತಿಳಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications