ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) ಬೆಂಗಳೂರಿನಲ್ಲಿ ಮಾರ್ಚ್ 28 ರಂದು ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಟ ನಡೆಸಲಿವೆ. ಈ ವೇಳೆ ಎಲ್ಲರ ಕಣ್ಣುಗಳು ತಮ್ಮ ತಮ್ಮ ನೆಚ್ಚಿನ ಆಟಗಾರರ ಮೇಲೆ ನೆಟ್ಟಿರುತ್ತವೆ. ಆದರೆ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳ ಚಿತ್ತ ಸ್ಥಳೀಯ ಪ್ರತಿಭೆಗಳ ಮೇಲೆ ನೆಟ್ಟರಲಿವೆ.
ಆರಂಭದಿಂದಲೂ ಕರ್ನಾಟಕದ ಸ್ಟಾರ್ ಆಟಗಾರರು ಐಪಿಎಲ್‌ನ ವಿವಿಧ ಫ್ರಾಂಚೈಸಿಗಳ ಪರ ಆಡಿ ಸೈ ಎನಿಸಿಕೊಂಡಿದ್ದಾರೆ. ಈ ವೇಳೆ ಹಿರಿಯ ಆಟಗಾರರು ತಮ್ಮ ಅನುಭವವನ್ನು ತಂಡಕ್ಕೆ ಧಾರೆ ಎರೆದರೆ, ಯುವ ಆಟಗಾರರು ಶ್ರೀಮಂತ ಲೀಗ್‌ನಲ್ಲಿ ಅಬ್ಬರಿಸಿ ತಮ್ಮ ಛಾಪು ಮೂಡಿಸಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಮಿಂಚಲು ಸಜ್ಜಾಗಿರುವ ಕರ್ನಾಟಕದ ಆಟಗಾರರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕರ್ನಾಟಕದ ಇಬ್ಬರು ಆಟಗಾರರು ಇದ್ದಾರೆ. ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ಈ ತಂಡದ ಬ್ಯಾಟಿಂಗ್‌ಗೆ ಆನೆ ಬಲ ತಂದಿರುವ ಆಟಗಾರ. ಇವರು ಆರಂಭದಿಂದಲೂ ಬಿಗ್ ಹಿಟ್ ಬಾರಿಸಲು ಹೆಸರುವಾಸಿ. ಪವರ್ ಪ್ಲೇಗಳಲ್ಲಿ ಪವರ್ ಫುಲ್ ಆಟವನ್ನು ಆಡುವುದು ರಾಹುಲ್‌ಗೆ ನೀರು ಕುಡಿದಷ್ಟೇ ಸುಲಭ. ಹೀಗಾಗಿ ಡೆಲ್ಲಿ ತಂಡ ಇವರ ಮೇಲೆ ಭರವಸೆ ಹೆಚ್ಚಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಇರುವ ಇನ್ನೊಬ್ಬ ಕನ್ನಡಿ ಎಂದರೆ ಕರುಣ್ ನಾಯರ್. ಕಳೆದ ಆವೃತ್ತಿಯ ಐಪಿಎಲ್ ಹರಾಜಿನಲ್ಲಿ ಇವರನ್ನು ಡೆಲ್ಲಿ ಕ್ಯಾಪಿಟಲ್ಸ್ 10 ಲಕ್ಷ ರೂ. ನೀಡಿ ಖರೀದಿ ಮಾಡಿತ್ತು. 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಇವರು ಸ್ಥಿರ ಪ್ರದರ್ಶನವನ್ನು ನೀಡಿದ್ದರಿಂದ ತಂಡ ಇವರನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿತ್ತು. ಈ ಆವೃತ್ತಿಯಲ್ಲಿ ಕರುಣ್‌ಗೆ ತಂಡದಲ್ಲಿ ಆಡುವ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.
ಆರ್‌ಸಿಬಿ ತಂಡದಲ್ಲಿರುವ ಏಕೈಕ ಕನ್ನಡಿಗ ಆಟಗಾರ ದೇವದತ್ ಪಡಿಕ್ಕಲ್ ಅವರ ಮೇಲೂ ಎಲ್ಲರ ಕಣ್ಣುಗಳು ನೆಟ್ಟಿವೆ. ಇವರು ಆರ್‌ಸಿಬಿ ತಂಡದ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿದ್ದಾರೆ. ಗಾಯದ ಸಮಸ್ಯೆಯ ಕಾರಣದಿಂದ ಇವರು ಕಳೆದ ಆವೃತ್ತಿಯ ಮಹತ್ವದ ಘಟ್ಟದಲ್ಲಿ ತಂಡದಿಂದ ಹೊರ ನಡೆದಿದ್ದರು. ಈ ಬಾರಿಯ ದೇಶೀಯ ಟೂರ್ನಿಯಲ್ಲಿ ಇವರು ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿದ್ದರಿಂದ ಇವರ ಮೇಲೆ ಭರವಸೆ ಹೆಚ್ಚಿದೆ.
ಗುಜರಾತ್ ಟೈಟಾನ್ಸ್ ಪರ ಕಣಕ್ಕೆ ಇಳಿಯುವ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ. ಕಳೆದ ಆವೃತ್ತಿಯಲ್ಲಿ ಇವರು ಬಿಗುವಿನ ದಾಳಿ ನಡೆಸಿ ರನ್ ದಾಹಕ್ಕೆ ಬ್ರೇಕ್ ಹಾಕಿದ್ದರು. ಅಲ್ಲದೆ ಪರ್ಪಲ್ ಕ್ಯಾಪ್ ಪಡೆದು ಬೀಗಿದ್ದರು. ಹೀಗಾಗಿ ಈ ಬಾರಿಯ ಐಪಿಎಲ್‌ನಲ್ಲೂ ಇವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಆರ್‌ಸಿಬಿ ಪರ ವೈಶಾಕ್ ವಿಜಯ್‌ಕುಮಾರ್ ಐಪಿಎಲ್ ವೃತ್ತಿ ಜೀವನ ಆರಂಭಿಸಿದರು. ಆದರೆ ಆರ್‌ಸಿಬಿ ಇವರನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿತ್ತು. ಇವರಲ್ಲಿನ ಕ್ಷಮತೆ ಗುರುತಿಸಿದ ಪಂಜಾಬ್ ಕಿಂಗ್ಸ್ ವೇಗದ ಬೌಲರ್‌ಗೆ ಮಣೆ ಹಾಕಿತ್ತು. ಕಿಂಗ್ಸ್ ಪರ ಈ ಬಾರಿಯೂ ಇವರು ಕಣಕ್ಕೆ ಇಳಿಯಲಿದ್ದಾರೆ. ಇದೇ ತಂಡದ ಪರ ಪ್ರವೀಣ್ ದುಬೆ ಕಣಕ್ಕೆ ಇಳಿಯಲಿದ್ದಾರೆ.

ಇನ್ನುಳಿದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಸ್ಪಿನ್ ಬೌಲರ್ ಶ್ರೇಯಸ್ ಅಯ್ಯರ್ ಕಣಕ್ಕೆ ಇಳಿಯಬಹುದು. ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಸ್ಮರಣ್ ರವಿಚಂದ್ರನ್ ಅವರಿಗೆ ಈ ಬಾರಿ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಇದಕ್ಕೆ ಕಾರಣ ಈ ಬಾರಿಯ ದೇಶೀಯ ಟೂರ್ನಿಯಲ್ಲಿ ಇವರು ನೀಡಿದ ಅಮೋಘ ಪ್ರದರ್ಶನ. ಇನ್ನು ಕರ್ನಾಟಕದ ಅನುಭವಿ ಬ್ಯಾಟರ್ ಮನೀಷ್ ಪಾಂಡೆ ಕೆಕೆಆರ್ ಪರ ಅಬ್ಬರಿಸಲು ಸಜ್ಜಾಗಿದ್ದಾರೆ.