IPL 2026 RCB: ಆರ್‌ಸಿಬಿ ಅಭಿಮಾನಿಗಳಿಗೆ ಇಂದೇ ಸಿಹಿಸುದ್ದಿ ಸಾಧ್ಯತೆ: ಜಿ.ಪರಮೇಶ್ವರ್ ಮಹತ್ವದ ಮಾಹಿತಿ
IPL 2026 RCB: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಗೆದ್ದ ಹಿನ್ನೆಲೆ ಬೆಂಗಳೂರಿನಲ್ಲಿ ಸಂಭ್ರಮಾಚರಣೆ ಇಟ್ಟುಕೊಳ್ಳಲಾಗಿತ್ತು. ಈ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿದ ಸಂಭವಿಸಿ 11 ಜನ ಮೃತಪಟ್ಟಿದ್ದರು. ಆಗಿನಿಂದ ಈ ಸ್ಟೇಡಿಯಂನಲ್ಲಿ ಯಾವುದೇ ಪಂದ್ಯಗಳು ನಡೆಸಬಾರದು ಎಂದು ನಿಷೇಧ ಹೊರಡಿಸಲಾಗಿತ್ತು. ಆದರೆ, ಇದೀಗ ಇಲ್ಲಿ ಐಪಿಎಲ್ 2026 ಪಂದ್ಯಗಳನ್ನು ನಡೆಸಬೇಕೋ? ಬೇಡವೋ ಎಂಬ ಮಹತ್ವದ ನಿರ್ಧಾರ ಇಂದೇ ಅಂದರೆ ಫೆಬ್ರವರಿ 12ರ ಗುರುವಾರ ಹೊರಬೀಳುವ ಸಾಧ್ಯತೆಯಿದೆ.
ಬೆಂಗಳೂರು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ಆಯೋಜನೆಗೆ ಅನುಮತಿ ನೀಡಬೇಕೆಂಬ ವಿಚಾರವಾಗಿ ಮಹತ್ವದ ಚರ್ಚೆಗಳು ನಡೆದಿವೆ. ಗೃಹ ಸಚಿವ ಜಿ.ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಂದ್ಯ ನಡೆಸುವ ಬಗ್ಗೆ ಬಹುತೇಕ ಸಕಾರಾತ್ಮಕ ಅಭಿಪ್ರಾಯ ವ್ಯಕ್ತವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮಹತ್ವದ ಘೋಷಣೆಗೆ ಕಾದು ಕುಳಿತ ಅಭಿಮಾನಿಗಳು
ಬೆಂಗಳೂರಿನಲ್ಲೇ ಐಪಿಎಲ್ ಉದ್ಘಾಟನಾ ಪಂದ್ಯ ನಡೆಯಬೇಕೆಂಬುದು ಆರ್‌ಸಿಬಿ ಅಭಿಮಾನಿಗಳು ಒತ್ತಾಯಿಸುತ್ತಾ ಬಂದಿದ್ದರು. ಅದರಂತೆಯೇ ಈ ಬಗ್ಗೆ ಇಂದು ಕ್ಯಾಬಿನೆಟ್ ಸಭೆ ನಡೆಸಲಿದ್ದು, ಸಂಜೆಯೊಳಗೆ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ. ಈ ಕ್ಷಣಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ.
ಈ ಬೆಳವಣಿಗೆಯೊಂದಿಗೆ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯ ಆಯೋಜನೆ ಸಂಬಂಧಿತ ವಿಷಯ ಇದೀಗ ಸಚಿವ ಸಂಪುಟದ ಸಭೆಯ ಮುಂದೆ ಹೋಗಿದೆ. ಸರ್ಕಾರದ ಉನ್ನತ ಮಟ್ಟದ ಚರ್ಚೆಯ ನಂತರ ಸಂಜೆಯೊಳಗೆ ಅಂತಿಮ ತೀರ್ಮಾನ ಪ್ರಕಟವಾಗುವ ನಿರೀಕ್ಷೆಯಿದೆ. ಭದ್ರತಾ ವ್ಯವಸ್ಥೆ, ಕ್ರೀಡಾಂಗಣದ ಸಿದ್ಧತೆ, ಸಂಚಾರ ನಿರ್ವಹಣೆ ಸೇರಿದಂತೆ ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಈ ಹಿನ್ನೆಲೆ ಆರ್‌ಸಿಬಿ ಅಭಿಮಾನಿಗಳು ಸರ್ಕಾರದ ಘೋಷಣೆಯನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ.
ಜಿ.ಪರಮೇಶ್ವರ್ ಹೇಳಿದ್ದೇನು?
ಈ ಬಗ್ಗೆ ಸಭೆಯ ಬಳಿಕ ಪ್ರತಿಕ್ರಿಯಿಸಿದ ಗೃಹ ಸಚಿವ ಜಿ.ಪರಮೇಶ್ವರ್ ಅವರು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪ್ರತಿನಿಧಿಗಳೊಂದಿಗೆ ಮತ್ತೊಮ್ಮೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಜಸ್ಟೀಸ್ ಕುನ್ಹಾ ಸಮಿತಿಯ ವರದಿಯನ್ನು ಆಧಾರವಾಗಿ ತೆಗೆದುಕೊಂಡು, ಅದರಲ್ಲಿ ಉಲ್ಲೇಖಿಸಿರುವ ಶಿಫಾರಸುಗಳನ್ನು ಜಾರಿಗೆ ತರಬೇಕೆಂದು ಸೂಚಿಸಲಾಗಿದೆ.
ಮುಂದಿನ ದಿನಗಳಲ್ಲಿ ಯಾವುದೇ ಪಂದ್ಯಗಳನ್ನು ನಡೆಸಬೇಕಾದರೆ, ವರದಿಯಲ್ಲಿರುವ ಅಂಶಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಅಗತ್ಯವೆಂದು ಸರ್ಕಾರ ಸ್ಪಷ್ಟಪಡಿಸಿದೆ. ಐಪಿಎಲ್ ಟೂರ್ನಿ ಆರಂಭಕ್ಕೆ ಸಿದ್ಧವಾಗಿರುವ ಹಿನ್ನೆಲೆ, ಹಿಂದಿನ ಆವೃತ್ತಿಯಲ್ಲಿ ಆರ್‌ಸಿಬಿ ಗೆದ್ದ ಪಂದ್ಯ ನಡೆದ ಮೈದಾನದಲ್ಲೇ ಮತ್ತೆ ಪಂದ್ಯಗಳನ್ನು ಆಯೋಜಿಸಬೇಕೆಂಬ ಬೇಡಿಕೆ ಕೇಳಿಬಂದಿದೆ. ಈ ವಿಷಯದ ಜೊತೆಗೆ ಸರ್ಕಾರದ ಅಧಿಕಾರಿಗಳನ್ನೊಳಗೊಂಡ ಸಮಿತಿಯ ವರದಿಯನ್ನೂ ಪರಿಶೀಲಿಸಿ, ಅದರ ಲಾಭ-ನಷ್ಟಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.
ಸಭೆಯಲ್ಲಿ ನಡೆದ ಎಲ್ಲ ವಿಚಾರಗಳನ್ನು ಸಮಗ್ರವಾಗಿ ಪರಿಗಣಿಸಿ ಮುಂದಿನ ತೀರ್ಮಾನವನ್ನು ರಾಜ್ಯ ಸಚಿವ ಸಂಪುಟವೇ ಕೈಗೊಳ್ಳಲಿದೆ. ಕ್ಯಾಬಿನೆಟ್ ಅಂತಿಮ ನಿರ್ಧಾರ ಪ್ರಕಟಿಸಿದ ಬಳಿಕ ಮಾತ್ರ ಐಪಿಎಲ್ ಪಂದ್ಯಗಳ ಆಯೋಜನೆ ಕುರಿತು ಅಧಿಕೃತ ಘೋಷಣೆ ಮಾಡಲಾಗುತ್ತದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications