IPL 2026: ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ ಆರ್‌ಸಿಬಿಯ 5 ಪಂದ್ಯ
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಮಂಗಳವಾರ (ಮಾರ್ಚ್ 3) ಆರ್‌ಸಿಬಿ ಮ್ಯಾನೇಜ್ಮೆಂಟ್ ದೊಡ್ಡ ಸುದ್ದಿಯನ್ನು ನೀಡಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಐಪಿಎಲ್ 2026ರಲ್ಲಿ ಆರ್‌ಸಿಬಿ 5 ಪಂದ್ಯಗಳನ್ನು ತವರಿನ ಅಂಗಳದಲ್ಲಿ ಆಡಲಿದೆ.
ಸಾಮಾನ್ಯವಾಗಿ ಎಲ್ಲ ತಂಡಗಳಿಗೆ ತವರಿನಲ್ಲಿ 7 ಪಂದ್ಯಗಳು ಸಿಗುತ್ತವೆ. ಇದರಲ್ಲಿ 5 ಪಂದ್ಯಗಳನ್ನು ಆರ್‌ಸಿಬಿ ಬೆಂಗಳೂರಿನಲ್ಲಿ ಆಡಲಿದ್ದು, ಇನ್ನು ಉಳಿದ 2 ಪಂದ್ಯಗಳನ್ನು ಛತ್ತೀಸ್‌ಗಡ ರಾಯಪುರದಲ್ಲಿ ನಡೆಯಲಿದೆ. ಆರ್‌ಸಿಬಿ ಮ್ಯಾನೇಜ್ಮೆಂಟ್ ಈ ಬಗ್ಗೆ ಮಂಗಳವಾರ ಅಧಿಕೃತ ಘೋಷಣೆ ಮಾಡಿದೆ. ಈ ಮೂಲಕ ಆರ್‌ಸಿಬಿ ತವರಿನ ಪಂದ್ಯಗಳನ್ನು ಎಲ್ಲಿ ಆಡುತ್ತದೆ? ಎಂ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯಗಳು ನಡೆಯುತ್ತವೆಯಾ? ಎಂಬೆಲ್ಲಾ ಪ್ರಶ್ನೆಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ.

17 ವರ್ಷಗಳ ಬಳಿಕ ಆರ್‌ಸಿಬಿ ಐಪಿಎಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಪಂಜಾಬ್ ತಂಡವನ್ನು ಮಣಿಸಿ ಆರ್‌ಸಿಬಿ ಟ್ರೋಫಿಗೆ ಮುತ್ತಿಟ್ಟಿತ್ತು. ಈ ವೇಳೆ ಆರ್‌ಸಿಬಿ ಸಂಭ್ರಮಾಚರಣೆಯನ್ನು ಆಚರಿಸಲು ಜೂನ್ 4 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ನಿರ್ಧರಿಸಲಾಗಿತ್ತು. ಈ ವೇಳೆ ಆರ್‌ಸಿಬಿ ಆಟಗಾರರನ್ನು ಕಣ್ಣು ತುಂಬಿಕೊಳ್ಳಲು ಲಕ್ಷಾಂತರ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಈ ವೇಳೆ ನೂಕು ನುಗ್ಗಲು ಸಂಭವಿಸಿದ್ದು, 11 ಜನರು ದುರ್ಮರಣಕ್ಕೀಡಾಗಿದ್ದರು.
11 ಜನರ ದುರ್ಮರಣ ಬಳಿಕ ರಾಜ್ಯ ಸರ್ಕಾರ ನ್ಯಾ.ಕುನ್ಹಾ ಆಯೋಗವನ್ನು ನೇಮಿಸಿತು. ಈ ಸಮಿತಿ ತನಿಖೆ ನಡೆಸಿ ವರದಿಯನ್ನು ಸರ್ಕಾರಕ್ಕೆ ನೀಡಿತ್ತು. ಅಲ್ಲದೆ ಕೆಎಸ್‌ಸಿಎಗೆ ತನಿಖಾ ಸಮಿತಿ ಕೆಲವು ಸುಧಾರಣೆಗಳನ್ನು ಮಾಡುವಂತೆ ಸೂಚಿಸಿತ್ತು. ಇನ್ನು ಇದರ ಮೇಲ್ವಿಚಾರಣೆಗೆ ಸರ್ಕಾರ ಉನ್ನತ ಅಧಿಕಾರಿಗಳ ಸಮಿತಿಯನ್ನು ರಚಿಸಿತ್ತು. ಇನ್ನು ಇದೇ ಸಂಬಂಧ ಕೆಎಸ್‌ಸಿಎ ಹಾಗೂ ಸರ್ಕಾರದ ಅಧಿಕಾರಿಗಳ ನಡುವೆ ಹಲವು ಉನ್ನತ ಮಟ್ಟದ ಸಭೆಗಳು ನಡೆದಿವೆ.
ಆರ್‌ಸಿಬಿ ಮ್ಯಾನೇಜ್ಮೆಂಟ್ ಹೇಳಿದ್ದಿಷ್ಟು..
ಕೆಎಸ್‌ಸಿಎ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ವೆಂಕಟೇಶ್ ಪ್ರಸಾದ್, ಚಿನ್ನಸ್ವಾಮಿ ಮೈದಾನದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಹಾಗೂ ಐಪಿಎಲ್ ಪಂದ್ಯಗಳನ್ನು ಆಡಿಸುವುದೇ ಗುರಿಯಾಗಿದೆ ಎಂದು ತಿಳಿಸಿದ್ದರು. ಈ ಹಿನ್ನೆಲೆ ಕೆಎಸ್‌ಸಿಎ ಹಾಗೂ ಗೃಹ ಇಲಾಖೆಯ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದ ಬಳಿಕ ಈ ಮಹತ್ವದ ತೀರ್ಮಾನಕ್ಕೆ ಬರಲಾಗಿದೆ.

ಬೆಂಗಳೂರಿನಲ್ಲಿ ಪಂದ್ಯಗಳನ್ನು ಆಯೋಜಿಸಲು ನಿರಂತರ ಸಲಹೆ, ಸಹಕಾರ ಮತ್ತು ಬೆಂಬಲ ನೀಡಿದ ಕರ್ನಾಟಕ ಸರ್ಕಾರ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಮತ್ತು ಕರ್ನಾಟಕ ಪೊಲೀಸರಿಗೆ ಆರ್‌ಸಿಬಿ ಫ್ರಾಂಚೈಸಿ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದೆ.
ಭಾರತದಲ್ಲಿ ಸದ್ಯ ಟಿ20 ವಿಶ್ವಕಪ್ ಅಂತಿಮ ಹಂತದತ್ತ ಮುಖಮಾಡಿದ್ದು,ಮಾರ್ಚ್ 8 ರಂದು ಟೂರ್ನಿಗೆ ತೆರೆ ಬೀಳಲಿದೆ. ಈ ಟೂರ್ನಿ ಮುಗಿದ ಬಳಿಕ ಭಾರತದಲ್ಲಿ ಐಪಿಎಲ್ ಆರಂಭವಾಗಲಿದೆ. ಇನ್ನು ಈ ಲೀಗ್ ವೇಳಾ ಪಟ್ಟಿಯನ್ನು ಮಾರ್ಚ್ ಮೊದಲ ವಾರದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications