ಐಪಿಎಲ್ 2026ರ ಮಿನಿ ಹರಾಜು ಅಬುಧಾಬಿಯಲ್ಲಿ ಮಂಗಳವಾರ ಮುಗಿದಿದೆ. ಈ ಹರಾಜಿನಲ್ಲಿ ಹಲವು ಸ್ಟಾರ್ ಆಟಗಾರರಿಗೆ ಕೋಟಿ ಕೋಟಿ ರೂ. ನೀಡಿ ಫ್ರಾಂಚೈಸಿಗಳು ತಂಡಕ್ಕೆ ಸೇರಿಸಿಕೊಂಡಿವೆ. ಇನ್ನು ಆರ್‌ಸಿಬಿ ಸಹ ಹರಾಜಿನಲ್ಲಿ ದೇಶೀಯ ಸೇರಿದಂತೆ ಅಂತಾರಾಷ್ಟ್ರೀಯ ಆಟಗಾರರಿಗೆ ಮಣೆ ಹಾಕಿದೆ. ಇನ್ನು 19ನೇ ಆವೃತ್ತಿಯ ಐಪಿಎಲ್ ಮಾರ್ಚ್ 26 ರಿಂದ ಆರಂಭವಾಗಲಿದೆ. ಸಂಪ್ರದಾಯದಂತೆ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉದ್ಘಾಟನಾ ಪಂದ್ಯವನ್ನು ತವರು ಅಂಗಳದಲ್ಲಿ ಆಡಲಿದೆ. ಈಗ ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತದಾ ಎಂಬ ಪ್ರಶ್ನೆಗಳು ಎದ್ದಿದ್ದವು. ಈಗ ಇದಕ್ಕೆ ಮೌಖಿಕ ಉತ್ತರ ಸಿಕ್ಕಿದೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದ ವೇಳೆ ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ, ಚಿನ್ನಸ್ವಾಮಿ ಅಂಗಳದಲ್ಲಿ ಐಪಿಎಲ್ ಸೇರಿದಂತೆ ಬೇರೆ ಪಂದ್ಯಗಳನ್ನು ನಡೆಸಲು ಅನುಮತಿ ಕೋರಿತ್ತು. ಇನ್ನು ಸರ್ಕಾರ ಸಹ ಐಪಿಎಲ್ 2026 ಅನ್ನು ಬೆಂಗಳೂರಿನಲ್ಲಿ ನಡೆಸಲು ಮೌಖಿಕ ಒಪ್ಪುಗೆಯನ್ನು ಸಹ ನೀಡಿದೆ. ಆದರೆ ಇದಕ್ಕೆ ಈಗ ಲಿಖಿತ ಉತ್ತರದ ನಿರೀಕ್ಷೆಯಲ್ಲಿ ಕೆಎಸ್‌ಸಿಎ ಇದೆ.

ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಸರ್ಕಾರದಿಂದ ಲಿಖಿತ ಅನುಮತಿ ದೊರೆಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತ ಪಡಿಸಿದ್ದಾರೆ. ಇನ್ನು ಈ ವಿಚಾರದ ಬಗ್ಗೆ ಬಿಸಿಸಿಐ ಜೊತೆಗೂ ಮಾತನಾಡಿದ್ದೇವೆ. ಅಗತ್ಯ ಸಿದ್ಧತಾ ಕ್ರಮಗಳನ್ನು ಕೈಗೊಂಡು ಉದ್ಘಾಟನಾ ಪಂದ್ಯ ನಡೆಸಲು ಅನುಮತಿ ಪಡೆಯಲಾಗುವುದು ಎಂದು ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ.
ಕೆಎಸ್‌ಸಿಎ ನೂತನ ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯ ಸರ್ಕಾರದ ಜೊತೆ ಕೈಗೊಳ್ಳಬಹುದಾದ ಸುರಕ್ಷತಾ ಕ್ರಮಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ. ಇನ್ನು ಬೆಂಗಳೂರಿನಲ್ಲಿ ಪಂದ್ಯಗಳನ್ನು ನಡೆಸಲು ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ವೆಂಕಟೇಶ್ ಪ್ರಸಾದ್ ತಿಳಿಸಿದ್ದಾರೆ.
18ನೇ ಆವೃತ್ತಿಯ ಐಪಿಎಲ್ ಟ್ರೋಫಿ ಗೆದ್ದ ಬಳಿಕ ಆರ್‌ಸಿಬಿ ವಿಕ್ಟರಿ ಪರೇಡ್ ನಡೆಸಿತ್ತು. ಈ ವೇಳೆ ಚಿನ್ನಸ್ವಾಮಿ ಮೈದಾನದ ಹೊರಗಡೆ ಕಾಲ್ತುಳಿತ ಸಂಭವಿಸಿ, 11 ಜನರು ಸಾವನ್ನಪ್ಪಿದ್ದರು. ಈ ದುರಂತದ ಬಳಿಕ ರಾಜ್ಯ ಸರ್ಕಾರ ಸಮಿತಿಯೊಂದನ್ನು ನೇಮಿಸಿತ್ತು. ಈ ಸಮಿತಿ ಚಿನ್ನಸ್ವಾಮಿ ಮೈದಾನದ ದೊಡ್ಡ ಮಟ್ಟದ ಜನ ಸೇರುವ ಕಾರ್ಯಕ್ರಮಗಳಿಗೆ ಸೂಕ್ತವಲ್ಲ ಎಂದು ತಿಳಿಸಿತ್ತು.