ಹೈದರಾಬಾದ್: ವೇಗದ ಬೌಲರ್ ಮೊಹಮ್ಮದ್ ಶಮಿ (9ಕ್ಕೆ 2) ಹಾಗೂ ನಾಯಕ ರಿಷಭ್ ಪಂತ್ ಅವರ ಬಾರಿಸಿದ ಅರ್ಧಶತಕದ ಬಲದಿಂದ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) 19ನೇ ಆವೃತ್ತಿಯ 10ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಐದು ವಿಕೆಟ್‌ಗಳಿಂದ ಮಣಿಸಿ, ಗೆಲುವಿನ ಆರಂಭವನ್ನು ಮಾಡಿದೆ.
157 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಎಲ್‌ಎಸ್‌ಜಿ ಏಡನ್ ಮಾರ್ಕ್ರಾಮ್ ಹಾಗೂ ಮಿಚೆಲ್ ಮಾರ್ಷ್ ಜೋಡಿ ಮೊದಲ ವಿಕೆಟ್‌ಗೆ 37 ರನ್‌ಗಳ ಜೊತೆಯಾಟವನ್ನು ನೀಡಿತು. ಈ ವೇಳೆ ಮಿಚೆಲ್ 14 ರನ್ ಬಾರಿಸಿ ಔಟ್ ಆದರು. ಎರಡನೇ ವಿಕೆಟ್‌ಗೆ ಏಡನ್ ಮಾರ್ಕ್ರಾಮ್ ಹಾಗೂ ರಿಷಭ್ ಪಂತ್ ಜೋಡಿ 28 ಎಸೆತಗಳಲ್ಲಿ 40 ರನ್ ಸಿಡಿಸಿತು. ಏಡನ್ ಮಾರ್ಕ್ರಾಮ್ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 45 ರನ್ ಸೇರಿಸಿ ಔಟ್ ಆದರು.

ಮಧ್ಯಮ ಕ್ರಮಾಂಕದಲ್ಲಿ ಆಯುಷ್ ಬದೋನಿ (12), ನಿಕೋಲಸ್ ಪೂರನ್ (1), ಅಬ್ದುಲ್ ಸಮದ್ (16) ರನ್ ಕಲೆ ಹಾಕುವಲ್ಲಿ ವಿಫಲರಾದರು. ನಾಯಕ ರಿಷಭ್ ಪಂತ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಅಬ್ಬರಿಸಿದರು. ಜವಾಬ್ದಾರಿ ಅರಿತು ಬ್ಯಾಟ್ ಮಾಡಿದ ರಿಷಭ್ ತಮ್ಮ ಐಪಿಎಲ್ ವೃತ್ತಿ ಜೀವನದ 20ನೇ ಅರ್ಧಶತಕ ಬಾರಿಸಿದರು. ಈ ಮೂಲಕ ಎಲ್‌ಎಸ್‌ಜಿ ತಂಡ ಈ ಪಂದ್ಯವನ್ನು ಗೆಲ್ಲುವಲ್ಲಿ ಮಹತ್ವದ ಕಾಣಿಕೆ ನೀಡಿದರು. ರಿಷಭ್ ಪಂತ್ 50 ಎಸೆತಗಳಲ್ಲಿ 9 ಬೌಂಡರಿ, ಅಜೇಯ 68 ರನ್ ಸಿಡಿಸಿ ತಂಡಕ್ಕೆ ಮೊದಲ ವಿಜಯಮಾಲೆ ತೊಡಿಸಿದರು.
ಟಾಸ್ ಸೊತರೂ ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕರಾದ ಟ್ರಾವಿಸ್ ಹೆಡ್ (7), ಅಭಿಷೇಕ್ ಶರ್ಮಾ (0), ನಾಯಕ ಇಶಾನ್ ಕಿಶನ್ (1) ರನ್ ಕಲೆ ಹಾಕುವಲ್ಲಿ ವಿಫಲರಾದರು. 3.3 ಓವರ್‌ಗಳಲ್ಲಿ 11 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಸನ್ ತಂಡಕ್ಕೆ ಲಿಯಾಮ್ ಲಿವಿಂಗ್ ಸ್ಟೋನ್ ಕೊಂಚ ಆಧಾರವಾದರು. ಲಿವಿಂಗ್ ಸ್ಟೋನ್ 14 ರನ್ ಬಾರಿಸಿದ್ದಾಗ ದಿಗ್ವೇಶ್ ರಾಠಿ ಅವರ ಎಸೆತದಲ್ಲಿ ರಿಷಭ್ ಪಂತ್ ಅವರು ಹಿಡಿದ ಅಮೋಘ ಕ್ಯಾಚ್‌ಗೆ ಬಲಿಯಾದರು.
ಐದನೇ ವಿಕೆಟ್‌ಗೆ ನಿತೀಶ್ ಕುಮಾರ್ ರೆಡ್ಡಿ ಹಾಗೂ ಹೆನ್ರಿಕ್ ಕ್ಲಾಸೆನ್ ಜೋಡಿ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 63 ಎಸೆತಗಳಲ್ಲಿ 116 ರನ್ ಸೇರಿಸಿ ಅಬ್ಬರಿಸಿತು. ನಿತೀಶ್ ಕುಮಾರ್ ರೆಡ್ಡಿ 3 ಬೌಂಡರಿ, 5 ಸಿಕ್ಸರ್ ಸಹಾಯದಿಂದ 56 ರನ್ ಬಾರಿಸಿ ಔಟ್ ಆದರು. ಕ್ಲಾಸೆನ್ 5 ಬೌಂಡರಿ, 2 ಸಿಕ್ಸರ್ ನೆರವಿನಿಂದ 62 ರನ್ ಸಿಡಿಸಿದರು. ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಅಂತಿಮವಾಗಿ ಸನ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 156 ರನ್ ಸೇರಿಸಿತು.

ಲಕ್ನೋ ತಂಡದ ಪರ ಮೊಹಮ್ಮದ್ ಶಮಿ, ಪ್ರಿನ್ಸ್ ಯಾದವ್, ಆವೀಶ್ ಖಾನ್ ತಲಾ 2 ವಿಕೆಟ್ ಪಡೆದರು. ಪವರ್ ಪ್ಲೇನಲ್ಲಿ ಶಮಿ ತಮ್ಮ ಮೊದಲ ಎರಡು ಓವರ್‌ಗಳಲ್ಲಿ ಎರಡು ವಿಕೆಟ್ ಪಡೆದು ಗೆಲುವಿಗೆ ರುವಾರಿಯಾದರು.