IPL 2026: ಡೆಲ್ಲಿಗೆ ಸಂಜು ಕಾಟ: ಚೆನ್ನೈಗೆ 8 ವಿಕೆಟ್ ಭರ್ಜರಿ ಜಯ
ನವದೆಹಲಿ: ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ (ಅಜೇಯ 87) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ 19ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 48ನೇ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ, ಪ್ಲೇ ಆಫ್ ಪ್ರವೇಶಿಸುವ ಆಸೆ ಜೀವಂತವಾಗಿರಿಸಿಕೊಂಡಿದೆ.
ಗುರಿಯನ್ನು ಹಿಂಬಾಲಿಸಿದ ಚೆನ್ನೈ ತಂಡದ ಆರಂಭ ಸಾಧಾರಣವಾಗಿತ್ತು. ಆರಂಭಿಕ ರುತುರಾಜ್ ಗಾಯಕ್ವಾಡ್ (6) ಲುಂಗಿ ಎನ್‌ಗಿಡಿ ತೋಡಿದ ಖೆಡ್ಡಾಗೆ ಬಲಿಯಾದರು. ಈ ವೇಳೆ ತಂಡದ ಮೊತ್ತ 24 ರನ್ ಆಗಿತ್ತು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಅವಕಾಶವನ್ನು ಪಡೆದ ಉರ್ವಿಲ್ ಪಟೇಲ್ 2 ಸಿಕ್ಸರ್ ಸಹಾಯದಿಂದ 17 ರನ್ ಬಾರಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಸ್ಟಂಪ್ ಔಟ್ ಆದರು.

45 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಹಾಗೂ ಯುವ ಆಟಗಾರ ಕಾರ್ತಿಕ್ ಶರ್ಮಾ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಒತ್ತಡವನ್ನು ತಮ್ಮ ಮೇಲೆ ಬೀಳದಂತೆ ನೋಡಿಕೊಂಡು ಬ್ಯಾಟ್ ಮಾಡಿತು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಡೆಲ್ಲಿ ಬೌಲರ್‌ಗಳು ವಿಫಲರಾದರು. ವೇಗದ ಬೌಲರ್‌ಗಳು ಹಾಗೂ ಸ್ಪಿನ್ ಬೌಲರ್‌ಗಳ ವಿರುದ್ಧ ರನ್ ಮಳೆ ಹರಿಸಿದ ಜೋಡಿ ತಂಡದ ಜಯದಲ್ಲಿ ಮಿಂಚಿತು. ಈ ಜೋಡಿ ಶತಕದ ಜೊತೆಯಾಟವನ್ನು ನೀಡಿದ್ದರಿಂದ ಚೆನ್ನೈ ಸುಲಭ ಜಯ ಸಾಧಿಸಲು ಕಾರಣವಾಯಿತು. ಯುವ ಆಟಗಾರ ಕಾರ್ತಿಕ್ ಶರ್ಮಾ ಅಜೇಯ 41 ರನ್ ಬಾರಿಸಿ ಮಿಂಚಿದರು.
ಸಂಜು ಸ್ಯಾಮ್ಸನ್ ಅಬ್ಬರ
ಭರ್ಜರಿ ಫಾರ್ಮ್‌ನಲ್ಲಿರುವ ಸಂಜು ಸ್ಯಾಮ್ಸನ್ ಆರಂಭದಲ್ಲಿ ತಾಳ್ಮೆಯಿಂದ ಇನಿಂಗ್ಸ್ ಕಟ್ಟಿ ಬಳಿಕ ಸ್ಫೋಟಿಸಲು ಆರಂಭಿಸಿದರು. ಇವರು ಆರಂಭದಲ್ಲಿ 21 ಎಸೆತಗಳಲ್ಲಿ 22 ರನ್ ಬಾರಿಸಿದ್ದರು. ಬಳಿಕ ಇವರು ತಮ್ಮ ಆಕ್ರಮಣಕಾರಿ ಆಟವನ್ನು ಆಡಿದರು. ಸಂಜು ಅರ್ಧಶತಕ ಬಾರಿಸಲು ಕೇವಲ 32 ಎಸೆತ ತೆಗೆದುಕೊಂಡರು. ಸಂಜು ಸ್ಯಾಮ್ಸನ್ 7 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 87 ರನ್ ಸಿಡಿಸಿದರು. ಅಂತಿಮವಾಗಿ ಸಿಎಸ್‌ಕೆ 17.3 ಓವರ್‌ಗಳಲ್ಲಿ 2 ವಿಕೆಟ್‌ಗೆ 159 ರನ್ ಸೇರಿಸಿ ಜಯ ಸಾಧಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಾದ ಪತುಮ್ ನಿಸ್ಸಂಕಾ (19) ಮತ್ತು ಕೆಎಲ್ ರಾಹುಲ್ (12) ಬೇಗನೇ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಕರುಣ್ ನಾಯರ್ (13), ನಿತೀಶ್ ರಾಣಾ (15) ಹಾಗೂ ನಾಯಕ ಅಕ್ಷರ್ ಪಟೇಲ್ (2) ಅಲ್ಪ ಮೊತ್ತಕ್ಕೆ ಔಟ್ ಆದರು. ಡೆಲ್ಲಿ 69 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಸ್ಟಬ್ಸ್ ಮತ್ತು ಸಮೀರ್ ಭರ್ಜರಿ ಜೊತೆಯಾಟ
ಈ ಹಂತದಲ್ಲಿ ಜೊತೆಯಾದ ಟ್ರಿಸ್ಟನ್ ಸ್ಟಬ್ಸ್ (38 ರನ್, 47 ಎಸೆತ) ಮತ್ತು ಇಂಪ್ಯಾಕ್ಟ್ ಪ್ಲೇಯರ್ ಸಮೀರ್ ರಿಜ್ವಿ ಆರನೇ ವಿಕೆಟ್‌ಗೆ ಅಮೂಲ್ಯ 65 ರನ್‌ಗಳ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ಸ್ಫೋಟಕ ಆಟವಾಡಿದ ರಿಜ್ವಿ ಕೇವಲ 24 ಎಸೆತಗಳಲ್ಲಿ 4 ಸಿಕ್ಸರ್ ಸಹಿತ ಅಜೇಯ 40 ರನ್ ಚಚ್ಚಿದರು. ಅಂತಿಮ ಹಂತದಲ್ಲಿ ಆಶುತೋಷ್ ಶರ್ಮಾ (ಅಜೇಯ 14) ಉಪಯುಕ್ತ ರನ್ ಸೇರಿಸಿದರು. ಪರಿಣಾಮ ಡೆಲ್ಲಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತು. ಚೆನ್ನೈ ಪರ ನೂರ್ ಅಹ್ಮದ್ 22 ರನ್ ನೀಡಿ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications