ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಬಾರಿ ಬಿಸಿಸಿಐ ಎರಡು ಹಂತದಲ್ಲಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಮೊದಲ ಹಂತದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಸನ್‌ರೈಸರ್ಸ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯಾವಳಿಯ ಟಿಕೆಟ್‌ಗಳನ್ನು ಹೇಗೆ ಪಡೆಯಬೇಕು ಎಂಬ ಬಗ್ಗೆ ಅಭಿಮಾನಿಗಳಲ್ಲಿ ಪ್ರಶ್ನೆ ಹುಟ್ಟಿವೆ.
ಐಪಿಎಲ್ ಟಿಕೆಟ್‌ಗಳನ್ನು ಹೇಗೆ ಪಡೆಯಬೇಕು ಎಂಬ ಬಗ್ಗೆ ಬಿಸಿಸಿಐ ಇನ್ನು ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಆದರೂ ಸಹ ಜೊಮಾಟೊದ ಡಿಸ್ಟ್ರಿಕ್ಟ್ ಅಪ್ಲಿಕೇಶನ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟಿಕೆಟ್‌ಗಳಿಗಾಗಿ ಮೀಸಲಾದ ವಿಭಾಗವನ್ನು ರಚಿಸಲಾಗಿದೆ. ಈ ವಿಭಾಗದಲ್ಲಿ ಶೀಘ್ರ ಬರಲಿದೆ ಎಂದು ಬರೆದುಕೊಂಡಿದೆ. ಇದೇ ಅಪ್ಲಿಕೇಷನ್‌ನಲ್ಲಿ ಟಿಕೆಟ್ ಮಾರಾಟವು ಶೀಘ್ರದಲ್ಲೇ ಪ್ರಾರಂಭವಾಗಬಹುದು ಎಂದು ಇದು ಸ್ಪಷ್ಟಪಡಿಸುತ್ತದೆ.

BookMyShow ಪಂದ್ಯಾವಳಿಗೆ ಪೂರ್ವ-ಮಾರಾಟ ನೋಂದಣಿಯನ್ನು ತೆರೆದಿದೆ. ಈ ಪೂರ್ಣ ನೋಂದಣಿಯಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಪಂದ್ಯಗಳು ಸೇರಿವೆ. ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣ ಮತ್ತು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಗಳನ್ನು ಸೇರಿಸಲಾಗಿದೆ. ಇಷ್ಟಾಗ್ಯೂ ಸಹ ಪೂರ್ವ-ನೋಂದಣಿ ಟಿಕೆಟ್‌ಗಳನ್ನು ಖಾತರಿಪಡಿಸುವುದಿಲ್ಲ. ಇಲ್ಲಿಂದ ಟಿಕೆಟ್‌ಗಳನ್ನು ಖರೀದಿಸಬಹುದು ಎಂದು ಯಾವುದೇ ಸ್ಪಷ್ಟತೆ ಇಲ್ಲ.
ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್ ತಂಡಗಳ ನಡುವಣ ಮೊದಲ ಪಂದ್ಯ ನಡೆಯಲಿದೆ. ಈ ಬಾರಿಯ ಐಪಿಎಲ್ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುತ್ತವೆಯೋ ಇಲ್ಲವೋ ಎಂಬ ಬಗ್ಗೆ ಸ್ಪಷ್ಟತೆ ಸಿಕ್ಕಿದ್ದು, ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನ 5 ಪಂದ್ಯಗಳನ್ನು ಆಯೋಜಿಸಲಿದೆ.
18ನೇ ಆವೃತ್ತಿಯ ಐಪಿಎಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಬಳಿಕ ಚಿನ್ನಸ್ವಾಮಿ ಮೈದಾನದಲ್ಲಿ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನಡೆದ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ್ದರು. ಈ ಘಟನೆ ನಡೆದ ಬಳಿಕ ಸರ್ಕಾರ ನ್ಯಾ.ಕುನ್ಹಾ ಸಮಿತಿಯನ್ನು ನೇಮಿಸಿತ್ತು. ಸಮಿತಿ ಚಿನ್ನಸ್ವಾಮಿ ಮೈದಾನ ದೊಡ್ಡ ಪಂದ್ಯಗಳಿಗೆ ಆತಿಥ್ಯ ನೀಡಲು ಸೂಕ್ತ ಸ್ಥಳ ಅಲ್ಲ ಎಂದು ತಿಳಿಸಿತ್ತು. ಬಳಿಕ ಸಮಿತಿ ಮೈದಾನದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲು ಸೂಚಿಸಿತ್ತು. ಸರ್ಕಾರ ಹಾಗೂ ಕೆಎಸ್‌ಸಿಎ ಅಧಿಕಾರಿಗಳ ಸರಣಿ ಸಭೆಗಳ ಪರಿಣಾಮ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯಗಳನ್ನು ನಡೆಸಲು ಅನುಮತಿ ನೀಡಲಾಯಿತು.