ಒಂದೇ ತಂಡದಲ್ಲಿ ಗಂಗೂಲಿ-ಪಾಂಟಿಂಗ್
ವಿಶ್ವ ಕ್ರಿಕೆಟ್ ಕಂಡ ಅದ್ಭುತ ನಾಯಕರು ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಮತ್ತು ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ. ಈ ಇಬ್ಬರೂ ಶ್ರೇಷ್ಠ ನಾಯಕರು ಜಿದ್ದಿಗೆ ಬಿದ್ದವರಂತೆ ತಮ್ಮ ರಾಷ್ಟ್ರಗಳ ಪರವಾಗಿ ಆಡಿದ್ದರು. ಆದರೆ ಐಪಿಎಲ್ನ ಮೊದಲ ಆವೃತ್ತಿಯಲ್ಲಿ ಈ ಇಬ್ಬರೂ ಮಹಾನ್ ನಾಯಕರು ಒಂದೇ ತಂಡದ ಪರವಾಗಿ ಕಣಕ್ಕಿಳಿದಿದ್ದರು. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನಾಗಿ ಸೌರವ್ ಗಂಗೂಲಿ ಮುನ್ನಡೆಸಿದ್ದರೆ ರಿಕಿ ಪಾಂಟಿಂಗ್ ಪ್ರಮುಖ ಬ್ಯಾಟ್ಸ್ಮನ್ ಆಗಿ ತಂಡದಲ್ಲಿದ್ದರು.
ಮೊದಲ ಎಸೆತ ಎದುರಿಸಿದ್ದು ಸೌರವ್ ಗಂಗೂಲಿ
ಐಪಿಎಲ್ ಇತಿಹಾಸದ ಮೊದಲ ಎಸೆತವನ್ನು ಎದುರಿಸಿದ್ದು ಹಾಲಿ ಬಿಸಿಸಿಐ ಅಧ್ಯಕ್ಷ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ. ಕೊಲ್ಕತ್ತಾ ತಂಡದ ಪರವಾಗಿ ಆರಂಭಿಕರಾಗಿ ಗಂಗೂಲಿ ಕಣಕ್ಕಿಳಿದಿದ್ದರು. ಈ ಟೂರ್ನಿಯಲ್ಲಿ ಮೊದಲ ಬಾಲ್ ಎಸೆದ ಕೀರ್ತಿ ಟೀಮ್ ಇಂಡಿಯಾದ ಮಾಜಿ ವೇಗಿ ಆರ್ಸಿಬಿ ತಂಡದ ಪ್ರಮುಖ ಬೌಲರ್ ಆಗಿದ್ದ ಪ್ರವೀಣ್ ಕುಮಾರ್ ಅವರಿಗೆ ಸಲ್ಲುತ್ತದೆ.
ಆರ್ಸಿಬಿ ಪರ ಕಣಕ್ಕಿಳಿದಿದ್ದರು ಸುನಿಲ್ ಜೋಶಿ
ಕರ್ನಾಟಕ ರಾಜ್ಯ ಕ್ರಿಕೆಟ್ ತಂಡದ ಖ್ಯಾತ ಬೌಲರ್ ಎನಿಸಿದ್ದ ಸುನಿಲ್ ಜೋಶಿ ಅಂದು ಆರ್ಸಿಬಿ ತಂಡದ ಪರವಾಗಿ ಚೊಚ್ಚಲ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಈ ಪಂದ್ಯದಲ್ಲಿ ಕರ್ನಾಟಕದ ದಿಗ್ಗಜ ಆಟಗಾರ ಸುನಿಲ್ ಜೋಶಿ ಮೂರು ಓವರ್ಗಳನ್ನು ಎಸೆದಿದ್ದರು.
ಆರ್ಸಿಬಿ ಪರ ಎರಡಂಕಿ ತಲುಪಿದ್ದ ಏಕೈಕ ಬ್ಯಾಟ್ಸ್ಮನ್ ಪ್ರವೀಣ್ ಕುಮಾರ್
ಕೊಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ ಇತಿಹಾಸದ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಅಬ್ಬರವನ್ನು ತೋರಿಸಿತ್ತು. ಇದನ್ನು ಬೆನ್ನಟ್ಟಿದ್ದ ಆರ್ಸಿಬಿ ಬ್ಯಾಟಿಂಗ್ ಲೈನ್ಅಪ್ನಲ್ಲಿ ದೊಡ್ಡ ದೊಡ್ಡ ಹೆಸರಿತ್ತು. ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ, ಜಾಕ್ ಕಾಲೀಸ್, ಕ್ಯಾಮರೂನ್ ವೈಟ್ ಅವರಂಥ ಆಟಗಾರರು ಆರ್ಸಿಬಿ ತಂಡದಲ್ಲಿದ್ದರು. ಆದರೆ ಎಲ್ಲಾ ಆಟಗಾರರು ಮೊದಲ ಪಂದ್ಯದಲ್ಲಿ ವಿಫಲವಾಗಿ ಒಂದಂಕಿಗೆ ವಿಕೆಟ್ ಕಳೆದುಕೊಂಡಿದ್ದರು. ಬೌಲಿಂಗ್ ಸ್ಪೆಶಲಿಸ್ಟ್ ಪ್ರವೀಣ್ ಕುಮಾರ್ ಮಾತ್ರವೇ ಈ ಪಂದ್ಯದಲ್ಲಿ ಎರಡಂಕಿಯನ್ನು ತಲುಪಿದ್ದರು. 15 ಎಸೆತಗಳಲ್ಲಿ ಪ್ರವೀಣ್ ಕುಮಾರ್ 18 ರನ್ ಗಳಿಸಿದ್ದರು. ಆರ್ಸಿಬಿ ಕೇವಲ 82 ರನ್ ಗಳಿಸಿತ್ತು.
ವಿರಾಟ್ ಕೊಹ್ಲಿಯ ವಿಕೆಟ್ ಪಡೆದಿದ್ದ ಅಶೋಕ್ ದಿಂಡಾ
ಅಶೋಕ್ ದಿಂಡಾ ಹೆಸರು ನೀವು ಮರೆತಿರಲಾರಿರಿ. ಇತ್ತೀಚೆಗೆ ದಿಂಡಾ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ದಿಂಡಾ ಯಶಸ್ಸನ್ನು ಗಳಿಸಲು ಸಾದ್ಯವಾಗಲಿಲ್ಲ. ಆದರೆ ಹೆಚ್ಚಿನ ಕ್ರಿಕೆಟ್ ಅಭಿಮಾನಿಗಳು ಒಂದು ಸಂಗತಿಯನ್ನು ಖಂಡಿತಾ ಮರೆತಿರುತ್ತೀರಿ. ಐಪಿಎಲ್ ಇತಿಹಾಸದ ಮೊದಲ ಪಂದ್ಯದಲ್ಲಿ ಅಶೋಕ್ ದಿಂಡಾ ಈಗ ವಿಶ್ವ ಕ್ರಿಕೆಟ್ನಲ್ಲಿ ಸಾಮ್ರಾಟನಾಗಿ ಮಿಂಚುತ್ತಿರುವ ವಿರಾಟ್ ಕೊಹ್ಲಿ ವಿಕೆಟನ್ನು ಕಡಿಮೆ ರನ್ಗೆ ಕಿತ್ತು ಕೆಕೆಆರ್ಗೆ ಯಶಸ್ಸು ನೀಡಿದ್ದರು.