
ಕೋಲ್ಕತ್ತಾ, ಡಿಸೆಂಬರ್ 19: ಐಪಿಎಲ್ 2020ರ ಆವೃತ್ತಿಗಾಗಿ ಡಿಸೆಂಬರ್ 19ರಂದು ಕೋಲ್ಕತ್ತಾದಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಬಾರಿಯ ಹರಾಜು ಕಣದಲ್ಲಿ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಿರಿಯ ಮತ್ತು ಅತ್ಯಂತ ಹಿರಿಯ ಆಟಗಾರರಿಬ್ಬರು ಗಮನ ಸೆಳೆಯುವುದರಲ್ಲಿದ್ದಾರೆ.
ಐಪಿಎಲ್ ಆಟಗಾರರ ಹರಾಜು 2020 (ಅಂಕಿ-ಅಂಶಗಳು)
ಹರಾಜಾಗಲಿರುವ ಆಟಗಾರರ ಸಾಲಿನಲ್ಲಿರುವ ಅಫ್ಘಾನಿಸ್ತಾನದ ಕಾಬೂಲ್‌ನ ಎಡಗೈ ರಿಸ್ಟ್ ಸ್ಪಿನ್ನರ್ ನೂರ್ ಅಹ್ಮದ್ ಲಕನ್ವಾಲ್‌ಗೆ ಈಗ ಕೇವಲ 15ರ ಹರೆಯ. ಈತ ಈ ಬಾರಿಯ ಹರಾಜಿನಲ್ಲಿರುವ ಅತ್ಯಂತ ಕಿರಿಯ ಆಟಗಾರ. ಅಹ್ಮದ್ ಯಾವ ತಂಡ ಸೇರಿಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಇಬ್ಬರು ಮಕ್ಕಳ ತಂದೆ, ಮುಂಬೈಯ ಲೆಗ್ ಸ್ಪಿನ್ನರ್ ಪ್ರವೀಣ್ ತಾಂಬೆ ಅವರಿಗೀಗ 48ರ ಹರೆಯ. ತಾಂಬೆ ಈ ಬಾರಿಯ ಐಪಿಎಲ್ ಆಟಗಾರರ ಹರಾಜು ಕಣದಲ್ಲಿರುವ ಅತ್ಯಂತ ಹಿರಿಯ ಆಟಗಾರ. ಇವರು 41ರ ಹರೆಯದವರಾಗಿದ್ದಾಗ ರಾಜಸ್ಥಾನ ರಾಯಲ್ಸ್ ಪರ 2013ರಲ್ಲಿ ಪಾದಾರ್ಪಣೆ ಮಾಡಿದ್ದರು. 33 ಐಪಿಎಲ್ ಇನ್ನಿಂಗ್ಸ್‌ಗಳಲ್ಲಿ 28 ವಿಕೆಟ್ ದಾಖಲೆ ತಾಂಬೆ ಹೆಸರಿನಲ್ಲಿದೆ.
ವಯಸ್ಸಿನ ಬಗ್ಗೆ ತಾಂಬೆ ಅವರಲ್ಲಿ ಮಾತನಾಡಿಸಿದರೆ, 'ನನಗೀಗ 48ರ ಹರೆಯ ಅಂತ ನಾನು ಯಾವತ್ತೂ ಯೋಚಿಸಲು ಹೋಗೋದಿಲ್ಲ. ನೀವಾಗಿ ನೆನಪಿಸದ ಹೊರತು ನನಗಾ ಯೋಚನೆಯೇ ಬರೋಲ್ಲ,' ಎಂದು ಪ್ರತಿಕ್ರಿಯಿಸಿದ್ದಾರೆ. 8 ತಂಡಗಳಿಗೆ 73 ಆಟಗಾರರು ಬೇಕಿದ್ದು, 332 ಆಟಗಾರರಲ್ಲಿ ಫ್ರಾಂಚೈಸಿಗಳು ಪ್ರತಿಭಾನ್ವಿತರನ್ನು ಹೆಕ್ಕಿ ತೆಗೆಯಲಿವೆ.