
ಭಾರೀ ಕುತೂಹಲ ಮೂಡಿಸಿರುವ ಐಪಿಎಲ್ 2022ರ ಮೆಗಾ ಹರಾಜಿನ ದಿನ ಬಂದೇ ಬಿಟ್ಟಿದೆ. ಒಟ್ಟು 10 ಫ್ರಾಂಚೈಸಿಗಳು ಈ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಿದ್ದು ಈ ತಂಡಗಳು ಬಲಿಷ್ಠ ತಂಡವನ್ನು ಕಟ್ಟಲು ಸಜ್ಜಾಗುತ್ತಿದೆ. ಕೆಲ ತಂಡಗಳು ಐಪಿಎಲ್ ಇತಿಹಾಸದಲ್ಲಿ ಸಾಕಷ್ಟು ಯಶಸ್ಸು ಸಾಧಿಸಿದ್ದು ಆ ಯಶಸ್ಸಿನ ಹಾದಿಯನ್ನು ಮುಂದುವರಿಸಲು ಬೇಕಾದ ಪೂರಕ ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸುವ ಲೆಕ್ಕಾಚಾರದಲ್ಲಿದೆ. ಇನ್ನೂ ಕೆಲ ತಂಡಗಳು ಈವರೆಗೂ ಟ್ರೋಫಿ ಗೆಲ್ಲಲು ವಿಫಲವಾಗಿದ್ದು ಈ ಮೆಗಾ ಹರಾಜಿನಲ್ಲಿ ಚಾಂಪಿಯನ್ ಪಟ್ಟಕ್ಕೇರಿಸಬಲ್ಲ ಆಟಗಾರರನ್ನು ವಶಕ್ಕೆ ಪಡೆಯಲು ಯೋಜನೆ ರೂಪಿಸುತ್ತಿದೆ.
ಐಪಿಎಲ್ ಮೆಗಾ ಹರಾಜು ಎರಡು ದಿನಗಳ ಕಾರ್ಯಕ್ರಮವಾಗಿದ್ದು ಇದು ಫೆಬ್ರವರಿ 12 ಹಾಗೂ 13ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ಹರಾಜು ಪ್ರಕ್ರಿಯೆ ಎರಡು ದಿನವು ಕೂಡ ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿದೆ.
ಈ ಬಾರಿಯ ಐಪಿಎಲ್ ಹರಾಜಿಗಾಗಿ ಒಟ್ಟು ವಿಶ್ವಾದ್ಯಂತ 1214 ಆಟಗಾರರು ಹೆಸರು ನೊಂದಾಯಿಸಿದ್ದರು. ಇದರಲ್ಲಿ 896 ಭಾರತೀಯ ಆಟಗಾರರಾಗಿದ್ದರೆ 318 ವಿದೇಶಿ ಆಟಗಾರರು ಹೆಸರು ನೊಂದಾಯಿಸಿದ್ದರು. ಈ ಪಟ್ಟಿಯನ್ನು ಬಿಸಿಸಿಐ ಪರಿಷ್ಕರಣೆ ಮಾಡಿದ್ದು ಇದರಲ್ಲಿ ಕೇವಲ 590 ಆಟಗಾರರನ್ನು ಮಾತ್ರವೇ ಹರಾಜು ಸುತ್ತಿಗೆ ಅಂತಿಮಗೊಳಿಸಿದೆ. ಇದರಲ್ಲಿ 370 ಭಾರತೀಯ ಆಟಗಾರರಾಗಿದ್ದರೆ 220 ವಿದೇಶಿ ಆಟಗಾರರಾಗಿದ್ದಾರೆ.
ಮೆಗಾ ಹರಾಜಿಗೂ ಮುನ್ನ ಈಗಾಗಲೇ ಇರುವ 8 ತಂಡಗಳಿಗೆ ತನ್ನಲ್ಲಿರುವ ಆಟಗಾರರ ಪೈಕಿ ಗರಿಷ್ಠ 4 ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ನೀಡಲಾಗಿತ್ತು. ಇದರ ಪೈಕಿ ಕೇವಲ ಓರ್ವ ಆಟಗಾರನನ್ನು ಮಾತ್ರವೇ ಫ್ರಾಂಚೈಸಿಗಳು ಉಳಿಸಿಕೊಳ್ಳಬಹುದಾಗಿತ್ತು. ಈ ನಿಯಮದ ಪ್ರಕಾರ ಕೆಲ ತಂಡಗಳು ಗರಿಷ್ಠ 4 ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದರೆ ಪಂಜಾಬ್ ಕಿಂಗ್ಸ್ ಮಾತ್ರ 2 ಆಟಗಾರರನ್ನು ಮಾತ್ರವೇ ರೀಟೈನ್ ಮಾಡಿಕೊಂಡಿತ್ತು. ಇನ್ನು ಹೊಸದಾಗಿ ಸೇರ್ಪಡೆಯಾಗಿರುವ ಲಕ್ನೋ ಹಾಗೂ ಅಹಮದಾಬಾದ್ ತಂಡಗಳಿಗೆ ಹರಾಜು ಪಟ್ಟಿಗೆ ಬಿಡುಗಡೆಯಾಗಿರುವ ಆಟಗಾರರ ಪೈಕಿ ತಲಾ ಮೂವರನ್ನು ಆಯ್ಕೆ ಮಾಡುವ ಅವಕಾಶವಿತ್ತು. ಎರಡು ತಂಡಗಳು ಕೂಡ ತಮ್ಮ ಆಯ್ಕೆಯ ಮೂವರು ಆಟಗಾರರನ್ನು ಅಂತಿಮಗೊಳಿಸಿದೆ.
ಯಾವ ದೇಶದಿಂದ ಎಷ್ಟು ಆಟಗಾರರು ಹರಾಜಿನಲ್ಲಿ? ಭಾರತ- 370, ಅಫ್ಘಾನಿಸ್ತಾನ- 17, ಆಸ್ಟ್ರೇಲಿಯಾ-47, ಬಾಂಗ್ಲಾದೇಶ-5, ಇಂಗ್ಲೆಂಡ್-24, ಐರ್ಲೆಂಡ್-5, ನ್ಯೂಜಿಲೆಂಡ್-24, ದಕ್ಷಿಣ ಆಫ್ರಿಕಾ-33, ಶ್ರೀಲಂಕಾ-23, ವೆಸ್ಟ್ ಇಂಡೀಸ್-34, ಜಿಂಬಾಬ್ವೆ-1, ನಮೀಬಿಯಾ-3, ನೇಪಾಳ-1, ಸ್ಕಾಟ್ಲೆಂಡ್-2, ಯುಎಸ್‌ಎ-1