
ಈ ಬಾರಿಯ ಹರಾಜಿನಲ್ಲಿ ಮತ್ತೋರ್ವ ಭಾರತೀಯ ಆಟಗಾರ ಬೃಹತ್ ಮೊತ್ತವನ್ನು ಪಡೆದುಕೊಂಡಿದ್ದಾರೆ. ಆಲ್‌ರೌಂಡರ್ ಸಾಮರ್ಥ್ಯ ಹೊಂದಿರುವ ದೀಪಕ್ ಚಾಹರ್ ಈ ಬಾರಿಯ ಹರಾಜಿನಲ್ಲಿ ಬರೊಬ್ಬರಿ 14 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ. ದೀಪಕ್ ಚಾಹರ್‌ಗೆ ಇಷ್ಟು ದೊಡ್ಡ ಮೊತ್ತ ನೀಡಿ ಸೇರ್ಪಡೆಗೊಳಿಸಿದ್ದು ಚೆನ್ನೈ ಸೂಪರ್ ಕಿಂಗ್ಸ್. ಈ ಮೂಲಕ ಭರವಸೆಯ ಆಟಗಾರನನ್ನು ಚೆನ್ನೈ ಸೂಪರ್ ಕಿಂಗ್ಸ್ ತನ್ನಲ್ಲಿಯೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ದೀಪಕ್ ಚಾಹರ್ ಈ ಹಿಂದಿನ ಬಾರಿ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದರು. ಎಂಎಸ್ ಧೋನಿ ನೇತೃತ್ವದ ತಂಡ ಕಳೆದ ಆವೃತ್ತಿಯಲ್ಲಿ ನೀಡಿದ ಅಮೋಘ ಪ್ರದರ್ಶನದಲ್ಲಿ ದೀಪಕ್ ಚಾಹರ್ ಕೊಡುಗೆ ಕೂಡ ಗಮನಾರ್ಹವಾಗಿತ್ತು. ಸದ್ಯ ಭಾರತೀಯ ವೈಟ್ ಬಾಲ್ ತಂಡದಲ್ಲಿಯೂ ಖಾಯಂ ಸ್ಥಾನ ಪಡೆದುಕೊಂಡಿರುವ ದೀಪಕ್ ಚಾಹರ್ ಮೇಲೆ ಅನೇಕ ತಂಡಗಳು ಕಣ್ಣಿಡುವ ನಿರೀಕ್ಷೆಯಿತ್ತು. ಅದೇ ರೀತಿ ಸಾಕಷ್ಟು ಬೇಡಿಕೆ ಪಡೆದುಕೊಂಡ ಚಾಹರ್ ಭರ್ಜರಿ 14 ಕೋಟಿ ಮೊತ್ತಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದ್ದಾರೆ.
ದೀಪಕ್ ಚಾಹಲ್ ಟಿ20 ಮಾದರಿಗೆ ಹೇಳಿ ಮಾಡಿಸಿದ ಆಟಗಾರ. ಉತ್ತಮ ನಿಯಂತ್ರಣ ಹೊಂದಿರುವ ದೀಪಕ್ ಚಾಹರ್ ವಿಕೆಟ್ ಟೇಕರ್ ಬೌಲರ್ ಆಗಿ ತಂಡಕ್ಕೆ ನೆರವಾಗುತ್ತಾರೆ. ಈ ಕಾರಣದಿಂದಾಗಿಯೇ ಇಷ್ಟು ಬೇಡಿಕೆಯನ್ನು ಪಡೆದುಕೊಂಡರು ದೀಪಕ್ ಚಾಹರ್. ಇದರ ಜೊತೆಗೆ ಬ್ಯಾಟಿಂಗ್ ಸಾಮರ್ಥ್ಯ ಕೂಡ ಉತ್ತಮವಾಗಿರುವ ಕಾರಣ ದೀಪಕ್ ಚಾಹರ್ ದೊಡ್ಡ ಮೊತ್ತವನ್ನು ಪಡೆದುಕೊಂಡಿದ್ದಾರೆ.
ದೀಪಕ್ ಚಾಹರ್ ಅವರನ್ನು ಮತ್ತೊಮ್ಮೆ ತಂಡಕ್ಕೆ ಸೇರ್ಪಡೆಗೊಳಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಈ ಹಿಂದಿನ ಆವೃತ್ತಿಯಲ್ಲಿದ್ದ ಆಟಗಾರರನ್ನು ಮಾತ್ರವೇ ಈ ಹರಾಜಿನವರೆಗೂ ಗುರಿ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ. ಇದಕ್ಕೂ ಮುನ್ನ ಈ ಹಿಂದಿನ ಆವೃತ್ತಿಯಲಿದ್ದ ರಾಬಿನ್ ಉತ್ತಪ್ಪ ಅವರನ್ನು ಮೂಲಬೆಲೆ 2 ಕೋಟಿಗೆ ಖರೀದಿಸಿದ ಸಿಎಸ್‌ಕೆ ನಂತರ ಡ್ವೇಯ್ನ್ ಬ್ರಾವೋ ಅವರನ್ನು 4.40 ಕೋಟಿಗೆ ಖರೀದಿಸಿತು. ನಂತರ ಅಂಬಾಟಿ ರಾಯುಡು 6.75 ಕೋಟಿ ಮೊತ್ತಕ್ಕೆ ಸಿಎಸ್‌ಕೆ ಪಾಲಾಗಿದ್ದರು.