ಐಪಿಎಲ್ 2022: ಬಿಸಿಸಿಐ ಪ್ರಕಟಿಸಿದ ಪರಿಷ್ಕೃತ ಹರಾಜು ಪಟ್ಟಿಯಲ್ಲಿ 3 ಪಾಕಿಸ್ತಾನ ಮೂಲದ ಆಟಗಾರರು

ಬಿಸಿಸಿಐ ಮಂಗಳವಾರ ಐಪಿಎಲ್ ಹರಾಜಿನಲ್ಲಿ ಭಾಗಿಯಾಗಲಿರುವ ಆಟಗಾರರ ಅಂತಿಮ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಮುಂದಿನ ವಾರವೇ ಈ ಹರಾಜು ಪ್ರಕ್ರಿಯೆ ನಡೆಯಲಿದ್ದು ಎಲ್ಲಾ ಫ್ರಾಂಚೈಸಿಗಳು ಕೂಡ ಈ ಹರಾಜಿಗೆ ಸಂಬಂಧಿಸಿದ ಅಂತಿಮ ಸಿದ್ಧತೆಯಲ್ಲಿ ತೊಡಗಿದೆ. 1000ಕ್ಕೂ ಅಧಿಕ ಆಟಗಾರರು ನೊಂದಾಯಿಸಿದ್ದ ಪಟ್ಟಿಯಲ್ಲಿ ಬಿಸಿಸಿಐ 590 ಆಟಗಾರರ ಅಂತಿಮ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಈ ಆಟಗಾರರ ಪೈಕಿ ಫ್ರಾಂಚೈಸಿಗಳು ತಮ್ಮ ತಂಡವನ್ನು ಕಟ್ಟಲು ಸಿದ್ಧತೆ ನಡೆಸುತ್ತಿದೆ.
ಈ ಮೆಗಾ ಹರಾಜಿನಲ್ಲಿ ಭಾರತದ ಆಟಗಾರರು ಮಾತ್ರವಲ್ಲದೆ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಐರ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ಜಿಂಬಾಬ್ವೆ, ನಮೀಬಿಯಾ, ನೇಪಾಳ, ಸ್ಕಾಟ್ಲೆಂಡ್ ಮತ್ತು ಯುಎಸ್ಎ ಆಟಗಾರರು ಅದೃಷ್ಟ ಪರೀಕ್ಷೆಗೆ ಒಳಗಾಗಲಿದ್ದಾರೆ.
ಆದರೆ ಬಿಸಿಸಿಐ ಪಾಕಿಸ್ತಾನ ಕ್ರಿಕೆಟರ್‌ಗಳಿಗೆ ಈ ಹರಾಜಿನಲ್ಲಿ ಭಾಗಿಯಾಗಲು ಅನುಮತಿಯನ್ನು ನೀಡುತ್ತಿಲ್ಲ. ಭಾರತ ಹಾಗೂ ಪಾಕಿಸ್ತಾನ ನಡುವಿನ ರಾಜಕೀಯ ಸಂಘರ್ಷದ ಕಾರಣದಿಂದಾಗಿ ದಶಕಗಳಿಂದಲೂ ಪಾಕಿಸ್ತಾನದ ಆಟಗಾರರನ್ನು ಬಿಸಿಸಿಐ ದೂರವಿಟ್ಟಿದೆ. ಆದರೆ ಪಾಕಿಸ್ತಾನ ಮೂಲದ ಆಟಗಾರರು ಈ ಬಾರಿಯೂ ಐಪಿಎಲ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಈ ಬಾರಿಯ ಹರಾಜಿನಲ್ಲಿ ಒಟ್ಟು ಮೂವರು ಪಾಕಿಸ್ತಾನ ಮೂಲದ ಆಟಗಾರರು ಬಿಸಿಸಿಐ ಬಿಡುಗಡೆಗೊಳಿಸಿದ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಆದರೆ ಈ ಆಟಗಾರರು ಈಗ ಬೇರೆ ಬೇರೆ ದೇಶಗಳಿಗೆ ಸ್ಥಳಾಂತರವಾಗಿದ್ದಾರೆ. ಆ ದೇಶದ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ. ಹಾಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾಗಿಯಾಗಲು ಆಡಲು ಬಿಸಿಸಿಐ ಅವಕಾಶವನ್ನು ನೀಡಿದೆ. ಹಾಗಾದರೆ ಫೆಬ್ರವರಿ 12, 13 ರಂದು ನಡೆಯಲಿರುವ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಆ ಮೂವರು ಪಾಕಿಸ್ತಾನ ಮೂಲದ ಆಟಗಾರರು ಯಾರು? ಇಲ್ಲಿದೆ ಆ ಬಗೆಗಿನ ಮಾಹಿತಿ
ಇಮ್ರಾನ್ ತಾಹೀರ್: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಅನುಭವಿ ಆಟಗಾರ ಇಮ್ರಾನ್ ತಾಹೀರ್ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಭಾಗಿಯಾಗಿರುವ ಆಟಗಾರರ ಪೈಕಿ ಹಿರಿಯ ಕ್ರಿಕೆಟಿಗ. 42ರ ಹರೆಯದ ತಾಹೀರ್ ಇದಕ್ಕೂ ಮುನ್ನ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ರೈಸಿಂಗ್ ಪುಣೆ ಸೂಪರ್‌ಜೈಂಟ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡಿದ್ದಾರೆ. 2019ರಲ್ಲಿ ತಾಹಿರ್ ಪರ್ಪಲ್ ಕ್ಯಾಪ್‌ಅನ್ನು ಕೂಡ ಮುಡಿಗೇರಿಸಿಕೊಂಡಿದ್ದರು. ಇತ್ತೀಚೆಗೆ ನಡೆದ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಕೂಡ ಭಾಗಿಯಾಗಿದ್ದ ತಾಹಿರ್ ಸದ್ಯ ಪಾಕಿಸ್ಥಾನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿದ್ದಾರೆ.
ಉಸ್ಮಾನ್ ಖವಾಜಾ: ಪಾಕಿಸ್ತಾನ ಮೂಲದ ಮತ್ತೋರ್ವ ಆಟಗಾರ ಆಸ್ಟ್ರೇಲಿಯಾ ತಂಡದ ಕ್ರಿಕೆಟಿಗ ಉಸ್ಮಾನ್ ಖವಾಜ. ಈ ಹಿಂದೆ ರೈಸಿಂಗ್ ಪುಣೆ ಸೂಪರ್ಜೈಂಟ್ ತಂಡದ ಭಾಗವಾಗಿದ್ದರು ಈ ಅನುಭವಿ ಆಟಗಾರ. ಇತ್ತೀಚೆಗಷ್ಟೇ ಅಂತ್ಯವಾದ ಆಶಸ್ ಟೆಸ್ಟ್ ಸರಣಿಯಲ್ಲಿ ಖವಾಜ ಅದ್ಭುತ ಫಾರ್ಮ್ ಪ್ರದರ್ಶಿಸಿದ್ದಾರೆ. ಕಳೆದ ವರ್ಷದ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಶತಕವನ್ನು ಕೂಡ ಬಾರಿಸಿರುವ ಖವಾಜ ಈ ಬಾರಿಯ ಐಪಿಎಲ್ ಟೂರ್ನಿಯ ಹರಾಜಿನಲ್ಲಿ ತಮ್ಮ ಅದೃಷ್ಟವನ್ನು ಮತ್ತೊಮ್ಮೆ ಪರೀಕ್ಷಿಸಲಿದ್ದಾರೆ.
ಅಲಿ ಖಾನ್: ಈ ಪಟ್ಟಿಯಲ್ಲಿರುವ ಮೂರನೇ ಹಾಗೂ ಕೊನೇಯ ಪಾಕಿಸ್ತಾನ ಮೂಲದ ಆಟಗಾರ ಅಲಿ ಖಾನ್. ಈ ಆಟಗಾರ 2022ರ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಏಕೈಕ ಅಮೆರಿಕನ್ ಆಟಗಾರ ಕೂಡ ಹೌದು. ಪಾಕಿಸ್ತಾನದಲ್ಲಿ ಹುಟ್ಟು ಬೆಳೆದಿರುವ ಅಲಿ ಖಾನ್ ಯುಎಸ್‌ಎ ಕ್ರಿಕೆಟ್ ತಂಡದ ಪರವಾಗಿ ಆಡುತ್ತಿದ್ದಾರೆ. 2020ರಲ್ಲಿ ಬದಲಿ ಆಟಗಾರನಾಗಿ ಅಲಿ ಖಾನ್ ಕೊಲ್ಕತ್ತಾ ತಂಡವನ್ನು ಸೇರಿಕೊಂಡಿದ್ದರು. ಆದರೆ ಗಾಯದ ಕಾರಣದಿಂದಾಗಿ ಆಡುವ ಅವಕಾಶದಿಂದ ವಂಚಿತವಾಗಿದ್ದರು. ಈ ಬಾರಿಯ ಹರಾಜಿನಲ್ಲಿ ಮತ್ತೊಮ್ಮೆ ಅಲಿ ಖಾನ್ ತಮ್ಮ ಅದೃಷ್ಟ ಪರೀಕ್ಷೆಗೆ ಒಳಗಾಗಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications