ರಾಯಲ್ ಚಾಲೆಂಜರ್ಸ್ ಬೆಂಗಳೂರು (rcb) ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧ ತಂಡಗಳಲ್ಲಿ ಒಂದು. ಈ ತಂಡಕ್ಕೆ ವಿಶ್ವದಲ್ಲಿ ಭಾರೀ ಅಭಿಮಾನಿಗಳು ಇದ್ದಾರೆ. ತಂಡ ಒಂದು ಬಾರಿಯೂ ಐಪಿಎಲ್ ಟ್ರೋಫಿ ಗೆಲ್ಲದೇ ಇದ್ದರೂ ಸಹ, ಮುಂದಿನ ಬಾರಿ ಗೆಲ್ಲುತ್ತದೆ ಎಂಬ ಆಶಾಭಾವದಿಂದಲೇ ತಂಡವನ್ನು ಬೆಂಬಿಲಿಸುತ್ತಾ ಬಂದಿದ್ದಾರೆ.
ಆರ್‌ಸಿಬಿ ತಂಡದಲ್ಲಿ ಹಲವು ಸ್ಟಾರ್ ಆಟಗಾರರು ಇದ್ದರು. ಆದರೂ ಈ ತಂಡ ಒಮ್ಮೆಯೂ ಪ್ರಶಸ್ತಿಗೆ ಮುತ್ತಿಟ್ಟಲ್ಲ. ಆರ್‌ಸಿಬಿಯಲ್ಲಿ ಪ್ರಸ್ತುತ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಫಾಫ್ ಡು ಪ್ಲೆಸಿಸ್ ಅವರಂತಹ ಸ್ಟಾರ್ ಆಟಗಾರರು ಇದ್ದಾರೆ. ಆದರೂ, ಈ ತಂಡ ಸತತವಾಗಿ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗುತ್ತಿದೆ.

ಡಿಸೆಂಬರ್ 19 ರಂದು ಬಿಸಿಸಿಐ ಐಪಿಎಲ್ 2024 ಮಿನಿ ಹರಾಜನ್ನು ದುಬೈನಲ್ಲಿ ಆಯೋಜಿಸಿದೆ. ಈ ಬಾರಿಯ ಐಪಿಎಲ್ ಹರಾಜಿನಲ್ಲಿ ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಇಬ್ಬರು ಆಟಗಾರರನ್ನು ಆರ್‌ಸಿಬಿ ಬಿಡ್ ಮಾಡಿದರೆ ಹದಿನೇಳನೇ ಸೀಸನ್‌ನಲ್ಲಿ ಟ್ರೋಫಿ ಗೆಲ್ಲುವ ಕನಸು ನನಸಾಗಬಹುದು ಎಂದು ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ.
ವಿಶ್ವಕಪ್ ನಲ್ಲಿ ಅಬ್ಬರಿಸಿದ ಈ ಆಟಗಾರರು ಇತರ ಐಪಿಎಲ್ ತಂಡಗಳ ಗಮನವನ್ನು ಸೆಳೆದಿದ್ದಾರೆ. ಆದ್ದರಿಂದಲೇ ಹರಾಜು ಬಹಳ ರೋಚಕವಾಗಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಐಪಿಎಲ್ ಹದಿನೇಳನೇ ಋತುವಿನಲ್ಲಿ ಟ್ರೋಫಿ ಗೆಲ್ಲುವ ತನ್ನ ಕನಸನ್ನು ನನಸಾಗಿಸಲು ಆರ್‌ಸಿಬಿ ಬಯಸಿದೆ. ಈ ಕನಸು ನನಸಾಗಬೇಕಿದ್ದರೆ ಹರಾಜಿನಲ್ಲಿ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಇಬ್ಬರು ಆಟಗಾರರನ್ನು ಖರೀದಿಸಬೇಕು.

ಐಪಿಎಲ್ ಹರಾಜಿನಲ್ಲಿ ಆರ್‌ಸಿಬಿ ತಂಡ ನ್ಯೂಜಿಲೆಂಡ್ ಆಲ್‌ರೌಂಡರ್ ರಚಿನ್ ರವೀಂದ್ರ ಮತ್ತು ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅವರ ಮೇಲೆ ಕಣ್ಣು ನೆಟ್ಟಿದೆ.
ಒಂದು ವೇಳೆ ತಂಡ ಈ ಆಟಗಾರರನ್ನು ಪಡೆಯುವಲ್ಲಿ ಯಶಸ್ವಿಯಾದರೆ, ಟ್ರೋಫಿ ಗೆಲುವಿನ ಕನಸು ಹತ್ತಿರವಾಗುತ್ತದೆ.
ಟ್ರಾವಿಸ್ ಹೆಡ್ ಇದಕ್ಕೂ ಮೊದಲು ಅಂದರೆ 2015 ಮತ್ತು 16 ರ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಿದ್ದರು. ಟ್ರಾವಿಸ್ 2016ರ ಐಪಿಎಲ್ ನಲ್ಲಿ ಬೆಂಗಳೂರು ತಂಡದ ಪರ ಮೂರು ಪಂದ್ಯಗಳನ್ನು ಆಡಿದ್ದು 54 ರನ್ ಸಿಡಿಸಿದ್ದಾರೆ.
ಟ್ರಾವಿಸ್ ಹೆಡ್ ಈಗ ತಮ್ಮ ಆಟವನ್ನು ಸುಧಾರಿಸಿಕೊಂಡಿದ್ದಾರೆ. ಅಲ್ಲದೆ ಬಿಗ್ ಮ್ಯಾಚ್ ಗಳಲ್ಲಿ ಆಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ದೊಡ್ಡ ವೇದಿಕೆಯಲ್ಲಿ ಅಬ್ಬರಿಸುವುದು ಇವರಿಗೆ ಸುಲಭ. ಹೀಗಾಗಿಯೇ ಇವರು ತಂಡಕ್ಕೆ ಎಂಟ್ರಿ ನೀಡಿದ್ದೇ ಆದಲ್ಲಿ ಆರ್‌ಸಿಬಿ ಗೆಲುವಿನ ಆಸೆ ಚಿಗುರುತ್ತದೆ ಎಂದು ಅಂದಾಜಿಸಲಾಗುತ್ತಿದೆ.
ವಿಶ್ವಕಪ್ ನಲ್ಲಿ ತನ್ನ ಆಲ್‌ರೌಂಡರ್ ಆಟದಿಂದಲೇ ಸದ್ದು ಮಾಡಿರುವ ಬೆಂಗಳೂರು ಮೂಲದ ರಚಿನ್ ರವೀಂದ್ರ ಅವರಿಗೆ ಆರ್‌ಸಿಬಿ ಹಣದ ಹೊಳೆಯನ್ನೇ ಹರಿಸುವ ಸಾಧ್ಯತೆ ಇದೆ. ಈ ಸ್ಟಾರ್ ಪ್ಲೇಯರ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲ ಆಟಗಾರ. ಅಲ್ಲದೆ ರಚಿನ್ ತಂಡ ಸೇರಿದ್ದೇ ಆದಲ್ಲಿ ಮಧ್ಯಮ ಕ್ರಮಾಂಕಕ್ಕೂ ಬಲ ತುಂಬ ಬಲ್ಲರು. ಕಳೆದ ಕೆಲವು ಆವೃತ್ತಿಗಳಲ್ಲಿ ಆರ್‌ಸಿಬಿ ಮಧ್ಯಮ ಕ್ರಮಾಂಕದ ವೈಫಲ್ಯವನ್ನು ಅನುಭವಿಸಿತ್ತು.
ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಟ್ರಾವಿಸ್ ಹೆಡ್ ಮತ್ತು ರಚಿನ್ ರವೀಂದ್ರ ಅವರನ್ನು ಹೊರತುಪಡಿಸಿ ದಿಲ್ಶಾನ್ ಮಧುಶಂಕ, ಅಜ್ಮತುಲ್ಲಾ ಒಮರ್ಜಾಯ್, ತಂಜಿದ್ ಹಸನ್, ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್‌ವುಡ್ ಅವರಂತಹ ಆಟಗಾರರನ್ನೂ ಬಿಡ್ ಮಾಡಬಹುದು ಎಂದು ಅಂದಾಜಿಸಲಾಗುತ್ತಿದೆ.