
ಐಪಿಎಲ್ ಮಿನಿ ಹರಾಜಿನಲ್ಲಿ ಆರ್‌ಸಿಬಿ ತಂಡ ಸ್ಟಾರ್ ಆಟಗಾರರನ್ನು ಖರೀದಿಸುವ ಗೋಜಿಗೆ ಹೋಗಲಿಲ್ಲ. ಹ್ಯಾರಿ ಬ್ರೂಕ್, ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆಗಾಗಿ ಬಿಡ್ ಮಾಡಿದರೂ ಪರ್ಸ್‌ನಲ್ಲಿ ಹೆಚ್ಚಿನ ಮೊತ್ತ ಹೊಂದಿಲ್ಲದ ಕಾರಣ ಒಂದು ಹಂತದ ನಂತರ ಹರಾಜಿನಿಂದ ಹಿಂದೆ ಸರಿದರು.
ಹೆಚ್ಚಿನ ಪರಿಚಯವೇ ಇಲ್ಲದ ಅವಿನಾಶ್ ಸಿಂಗ್ ಎನ್ನುವ ಹೆಸರು ಹರಾಜಿನಲ್ಲಿ ಬರುತ್ತಿದ್ದಂತೆ ಆರ್‌ಸಿಬಿ ಬಿಡ್ ಮಾಡುವ ಮೂಲಕ ಅಚ್ಚರಿ ಮೂಡಿಸಿತು. ಕೆಕೆಆರ್ ಕೂಡ ಅವಿನಾಶ್ ಸಿಂಗ್‌ಗಾಗಿ ಬಿಡ್ ಮಾಡಿತು. 20 ಲಕ್ಷ ಮೂಲಬೆಲೆ ಹೊಂದಿದ್ದ ಅವಿನಾಶ್ ಸಿಂಗ್‌ರನ್ನು ಆರ್‌ಸಿಬಿ 60 ಲಕ್ಷ ರುಪಾಯಿಗೆ ಬಿಡ್ ಮಾಡಿತು. ಖರೀದಿ ಮಾಡುವಲ್ಲಿ ಯಶಸ್ವಿಯಾಯಿತು.
ಅವಿನಾಶ್ ಸಿಂಗ್ ಯಾರು ಎನ್ನುವ ಕುತೂಹಲ ಎಲ್ಲರಿಗೂ ಇದೆ. ಈತನ ಬಗ್ಗೆ ಎಲ್ಲಿಯೂ ಹೆಚ್ಚಿನ ಮಾಹಿತಿ ಇಲ್ಲ. ಆದರೂ, ಆರ್‌ಸಿಬಿಗೆ ಆಯ್ಕೆಯಾಗಿದ್ದೇ ರೋಚಕ. ಅವಿನಾಶ್ ಸಿಂಗ್ ಜಮ್ಮುವಿನಲ್ಲಿ ಹುಟ್ಟಿ ಬೆಳೆದವರು. ಅವಿನಾಶ್ ಸಿಂಗ್ ಇದುವರೆಗೂ ರಾಜ್ಯ ತಂಡಕ್ಕಾಗಿಯೂ ಒಂದು ಪಂದ್ಯವನ್ನಾಡಿಲ್ಲ. ಎಂಟು ತಿಂಗಳ ಹಿಂದೆ ಟೆನಿಸ್ ಬಾಲ್‌ನಲ್ಲಿ ಬೌಲಿಂಗ್ ಮಾಡುತ್ತಿದ್ದ ಅವಿನಾಶ್ ಇಂದು ಪ್ರತಿಷ್ಠಿತ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಟ್ರಯಲ್‌ನಲ್ಲಿ ಭಾಗವಹಿಸಿದ್ದ ಅವಿನಾಶ್
"ಸೆಪ್ಟೆಂಬರ್‌ನಲ್ಲಿ ಮುಂಬೈನಲ್ಲಿ ಆರ್‌ಸಿಬಿ ಟ್ರಯಲ್ ಇತ್ತು, ಅಲ್ಲಿ ನಾನು ಭಾಗವಹಿಸಿದ್ದೆ. ನನ್ನ ಬೌಲಿಂಗ್ ಆಕ್ಷನ್ ಅನ್ನು ಇಷ್ಟಪಟ್ಟರು. ಶಿಬಿರದಲ್ಲಿ ನಾನು ಉತ್ತಮ ಸಾಧನೆ ಮಾಡಿದ್ದೇನೆ. ಗಂಟೆಗೆ 154.3 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿದೆ. ಕೆಕೆಆರ್, ಎಲ್‌ಎಸ್‌ಜಿ, ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕೂಡ ಟ್ರಯಲ್ ಪರೀಕ್ಷೆಗೆ ಕರೆದರು. ಅಲ್ಲೂ ಕೂಡ ನನ್ನ ಬೌಲಿಂಗ್ ಮೆಚ್ಚಿಕೊಂಡಿದ್ದರು. ನಾನು ಯಾವುದಾದರೂ ತಂಡಕ್ಕೆ ಆಯ್ಕೆಯಾಗುತ್ತೇನೆ ಎನ್ನುವ ವಿಶ್ವಾಸ ಇತ್ತು" ಎಂದು ಅವಿನಾಶ್ ಹೇಳಿದ್ದಾರೆ.
ಜಮ್ಮವಿನಲ್ಲಿ ಆರ್‌ಸಿಬಿ ಆಯೋಜಿಸಿದ್ದ ಟ್ರಯಲ್ ಕ್ಯಾಂಪ್‌ನಲ್ಲಿ ಅವಿನಾಶ್ ಭಾಗವಹಿಸಿದ್ದರು. 154 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಅವರು ಎಲ್ಲರ ಗಮನ ಸೆಳೆದಿದ್ದರು. ಬೌಲಿಂಗ್ ಕೌಶಲ್ಯವನ್ನು ಸುಧಾರಿಸಿಕೊಳ್ಳಲು ಅವರು ಪುಣೆಗೆ ಹೋದರು, ಅಲ್ಲಿ ಹಲವು ಪ್ರಮುಖ ತರಬೇತುದಾರರ ಅಡಿಯಲ್ಲಿ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಂಡರು.

ಕೆನಡಾಕ್ಕೆ ತೆರಳಬೇಕಿದ್ದವ ಕರುನಾಡಿಗೆ
ಕಳೆದ ವರ್ಷ ಡಿಸೆಂಬರ್‌ನಲ್ಲಿ, ಸೇನೆಯ ದೈಹಿಕ ಪರೀಕ್ಷೆಯಲ್ಲಿ ವಿಫಲವಾದ ನಂತರ ಅವಿನಾಶ್ ಕೆಲಸ ಹುಡುಕಲು ಕೆನಡಾಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು. ಅದಕ್ಕಾಗಿ ವೀಸಾ ಪಡೆಯುವ ಪ್ರಯತ್ನದಲ್ಲಿದ್ದರು. ಕಳೆದ ಫೆಬ್ರವರಿಯಲ್ಲಿ ಅವಿನಾಶ್ ಸ್ನೇಹಿತರ ಜೊತೆ ಜಮ್ಮು ಕಾಶ್ಮೀರ ಮಾಜಿ ಕ್ರಿಕೆಟಿಗ ಮಯಾಂಕ್ ಗೋಸ್ವಾಮಿ ನಡೆಸುತ್ತಿದ್ದ ಕ್ರಿಕೆಟ್ ಅಕಾಡೆಮಿಗೆ ಹೋಗಿದ್ದರು.
ಅದುವರೆಗೂ ಟೆನಿಸ್ ಬಾಲ್‌ನಲ್ಲಿ ಬೌಲಿಂಗ್ ಮಾಡಿದ್ದ ಅವಿನಾಶ್ ಅಂದು ಮೊದಲ ಬಾರಿಗೆ ಲೆದರ್ ಬಾಲ್‌ನಲ್ಲಿ ಬೌಲಿಂಗ್ ಮಾಡಿದರು. ಅವಿನಾಶ್‌ನಲ್ಲಿರುವ ಸಾಮರ್ಥ್ಯ ಕಂಡು ಮಯಾಂಕ್ ಗೋಸ್ವಾಮಿ ಅಚ್ಚರಿಗೊಳಗಾಗುತ್ತಾರೆ. ಆತನನ್ನು ಅಕಾಡೆಮಿಗೆ ಸೇರುವಂತೆ ಅವರು ಇತ್ತಾಯ ಮಾಡುತ್ತಾರೆ. ಆದರೆ, ಅವಿನಾಶ್ ಅಕಾಡೆಮಿ ಸೇರಲಿಲ್ಲ. ಆದರೆ, ಪುಣೆಯಿಂದ ಹಿಂತಿರುಗಿದ ನಂತರ ಅವರು ಮಯಾಂಕ್ ಗೋಸ್ವಾಮಿ ತರಬೇತಿಯಲ್ಲಿ ಬೌಲಿಂಗ್ ಅಭ್ಯಾಸ ಮಾಡಿದ್ದಾರೆ.
ಮನೆಯಲ್ಲಿ ಬಡತನ ಇದ್ದ ಕಾರಣ ಕ್ರಿಕೆಟ್ ಕಿಟ್ ಮಾಡಲೂ ಕೂಡ ಅವಿನಾಶ್ ಬಳಿ ಹಣವಿರಲಿಲ್ಲ. ಇದೇ ಕಾರಣಕ್ಕೆ ಮನೆಯಲ್ಲಿ ಅವಿನಾಶ್ ಕ್ರಿಕೆಟ್ ಆಡುವುದಕ್ಕೆ ವಿರೋಧ ವ್ಯಕ್ತವಾಗಿತ್ತು. ಆದರೆ, ಅವರು 60 ಲಕ್ಷಕ್ಕೆ ಹರಾಜಾಗುತ್ತಿದ್ದಂತೆ, ಅವರ ಗ್ರಾಮದಲ್ಲಿ ಎಲ್ಲರೂ ಸಂಭ್ರಮಾಚರಣೆ ಮಾಡಿದ್ದಾರೆ.