
ಬೆಂಗಳೂರು, ಆಗಸ್ಟ್ 10: 2021ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರ ಹರಾಜು ನಡೆಯಲ್ಲ ಎಂದು ವರದಿಯೊಂದು ಹೇಳಿದೆ. 2021ರ ಐಪಿಎಲ್‌ಗಾಗಿ ಹರಾಜು ಪ್ರಕ್ರಿಯೆ ನಡೆಸಲು ವೇಳಾಪಟ್ಟಿ ರೂಪಿಸಲಾಗಿತ್ತು. ಆದರೆ ಈ ವೇಳಾಪಟ್ಟಿಯಂತೆ ಹರಾಜು ನಡೆಯುತ್ತಿಲ್ಲ, 2021ರ ಹರಾಜನ್ನು ಮುಂದೂಡಲು ಸಿದ್ಧತೆ ನಡೆಯುತ್ತಿದೆ ಎನ್ನಲಾಗುತ್ತಿದೆ.
ಕಳೆದ ವರ್ಷ ಐಪಿಎಲ್‌ಗಾಗಿ 'ಮಿನಿ ಹರಾಜು' ನಡೆದಿತ್ತು. 332 ಆಟಗಾರರಲ್ಲಿ 73 ಆಟಗಾರರನ್ನು ಹೆಕ್ಕುವುದಕ್ಕಾಗಿ 8 ಫ್ರಾಂಚೈಸಿಗಳುಗಳು ಪೈಪೋಟಿ ನಡೆಸಿದ್ದವು. ಒಂದು ದಿನ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕೇವಲ 62 ಆಟಗಾರರು ಮಾರಾಟವಾಗಿದ್ದರು.
ಕಳೆದ ವರ್ಷ ಐಪಿಎಲ್ ಆಟಗಾರರ ಹರಾಜು ನಡೆದಿರುವುದರಿಂದ ಈ ಬಾರಿ ಫ್ರಾಂಚೈಸಿಗಳಿಗೆ ಹೆಚ್ಚು ಆಟಗಾರರ ಅಗತ್ಯ ಇದ್ದಂತಿಲ್ಲ. 2021ರ ಆವೃತ್ತಿಗಾಗಿ ತಂಡಗಳು ಕೆಲವೇ ಕೆಲವು ಆಟಗಾರರನ್ನು ಆರಿಸಲಿವೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಬಿಸಿಸಿಐಯು 2021ಕ್ಕೆ ಹರಾಜು ನಡೆಸದಿರಲು ನಿರ್ಧರಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಫ್ರಾಂಚೈಸಿಗಳು ಬೇಕಾಗಿದ್ದ ಆಟಗಾರರನ್ನು ಹೆಕ್ಕಲು ನಡೆಸಲಾಗುತ್ತಿದ್ದ ಐಪಿಎಲ್ ಹರಾಜು ಮುಂದೆ ಯಾವಾಗ ನಡೆಯಬೇಕೆಂದು ಕೋವಿಡ್-19 ಖಾತರಿಪಡಿಸಲಿದೆ. ಕೊರೊನಾ ಪರಿಸ್ಥಿತಿ ಸುಧಾರಿಸುವ ವರೆಗೆ ಅನಿರ್ದಿಷ್ಟಾವಧಿಗೆ 2021ರ ಹರಾಜು ಮುಂದೂಡಲ್ಪಡುವುದರಲ್ಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ.