ಇಂಡಿಯನ್ ಪ್ರೀಮಿಯರ್ ಲೀಗ್ ರೋಚಕ ಘಟ್ಟದತ್ತ ಮುಖ ಮಾಡಿದೆ. ಈ ಬಾರಿಯ ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಆಡುವುದು ಕನ್ಫರ್ಮ್ ಆಗಿದೆ. ಆದರೆ ಆಡುವ ಇನ್ನೊಂದು ತಂಡ ಯಾವುದು ಎಂಬ ಪ್ರಶ್ನೆಗೆ ಭಾನುವಾರ ರಾತ್ರಿ ಉತ್ತರ ಲಭಿಸಲಿದೆ. ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಎಲಿಮಿನೇಟರ್‌ನಲ್ಲಿ ಗೆದ್ದ ಮುಂಬೈ ಇಂಡಿಯನ್ಸ್ ಹಾಗೂ ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ಪಂಜಾಬ್ ಕಿಂಗ್ಸ್ ತಂಡಗಳು ಕಾದಾಟವನ್ನು ನಡೆಸಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್‌ಗೆ ಅರ್ಹತೆ ಪಡೆಯುತ್ತದೆ.
ಪ್ರಶಸ್ತಿ ಸುತ್ತಿನ ಕಾದಾಟ ಜೂನ್ 3 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ. ಇದೇ ದಿನ ನಡೆಯುವ ಸಮರಾಂಭದಲ್ಲಿ ವಿವಿಧ ಪ್ರಶಸ್ತಿಗಳನ್ನು ಸಹ ನೀಡಲಾಗುತ್ತದೆ. ಅತಿ ಹೆಚ್ಚು ರನ್ ಬಾರಿಸಿದ ಆಟಗಾರರಿಗೆ ಆರೆಂಜ್ ಕ್ಯಾಪ್ ಹಾಗೂ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತದೆ. ಈ ಪ್ರತಿಷ್ಠಿತ ಪ್ರಶಸ್ತಿಗಾಗಿ ಜಿದ್ದಾಜಿದ್ದಿನ ಫೈಟ್ ನಡೆಯಲಿದೆ. ಈ ಪ್ರಶಸ್ತಿಯ ಮೇಲೆ ಸ್ಟಾರ್ ಆಟಗಾರರು ಕಣ್ಣು ನೆಟ್ಟಿದ್ದಾರೆ. ಹಾಗಿದ್ದರೆ ಯಾರು ಯಾವ ಪ್ರಶಸ್ತಿಯ ರೇಸ್‌ನಲ್ಲಿದ್ದಾರೆ ಎಂಬ ಬಗ್ಗೆ ವರದಿ ಇಲ್ಲಿದೆ.

ಗುಜರಾತ್ ಟೈಟಾನ್ಸ್ ತಂಡದ ಪರ ಲೀಗ್ ಹಂತದಲ್ಲಿ ಹಾಗೂ ಎಲಿಮಿನೇಟರ್ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದ ಆಟಗಾರ ಸಾಯಿ ಸುದರ್ಶನ್. ತಮಿಳುನಾಡಿನ ಎಡಗೈ ಆಟಗಾರ ತಮ್ಮ ಉತ್ತಮ ಬ್ಯಾಟಿಂಗ್‌ನಿಂದಲೇ ಹೆಸರುವಾಸಿಯಾದರು. ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ಈ ರೀತಿಯ ಪ್ರದರ್ಶನ ನೀಡಿದ್ದರ ಹಿಂದೆ ಸಾಯಿ ಸುದರ್ಶನ್ ಅವರ ಪಾತ್ರ ದೊಡ್ಡದು. ಈ ಲೀಗ್‌ನಲ್ಲಿ ಇವರು ಅಬ್ಬರದ ಪ್ರದರ್ಶನ ನೀಡಿದ ಫಲವಾಗಿಯೇ ಇವರಿಗೆ ಇಂಗ್ಲೆಂಡ್ ಪ್ರವಾಸದಲ್ಲಿ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಸುದರ್ಶನ್‌ಗೆ ಸೂರ್ಯ ಪೈಪೋಟಿ
ಗುಜರಾತ್ ಟೈಟಾನ್ಸ್ ತಂಡದ ಭರವಸೆಯ ಆಟಗಾರ ಸಾಯಿ ಸುದರ್ಶನ್ ತಮ್ಮ ಮೇಲೆ ತಂಡ ಇಟ್ಟನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿದ್ದಾರೆ. ಈ ಆವೃತ್ತಿಯಲ್ಲಿ ಇವರು ಆಡಿದ 15 ಪಂದ್ಯಗಳಲ್ಲಿ 54ರ ಸರಾಸರಿಯಲ್ಲಿ 759 ರನ್ ಸಿಡಿಸಿದ್ದಾರೆ. ಈ ವೇಳೆ 1 ಶತಕ ಹಾಗೂ 6 ಅರ್ಧಶತಗಳು ಸೇರಿವೆ. ಸದ್ಯ ಇವರಿಗೆ ತುಂಬ ಹತ್ತಿರದ ಪ್ರತಿ ಸ್ಪರ್ಧಿ ಎಂದರೆ ಮುಂಬೈ ಇಂಡಿಯನ್ಸ್ ತಂಡದ ಸೂರ್ಯಕುಮಾರ್ ಯಾದವ್. ಸೂರ್ಯ ಆಡಿರುವ 15 ಪಂದ್ಯಗಳಲ್ಲಿ 67ರ ಸರಾಸರಿಯಲ್ಲಿ 673 ರನ್ ಬಾರಿಸಿದ್ದಾರೆ. ಗುಜರಾತ್ ಟೈಟಾನ್ಸ್ ಈಗಾಗಲೇ ಐಪಿಎಲ್‌ನಿಂದ ಹೊರ ಬಿದ್ದಿದ್ದು, ಸುದರ್ಶನ್ ದಾಖಲೆ ಮುರಿಯಲು ಸೂರ್ಯಗೆ ಇನ್ನು 86 ರನ್ ಅವಶ್ಯಕತೆ ಇದೆ. ಸೂರ್ಯಕುಮಾರ್ ಯಾದವ್ ಪ್ರಸಕ್ತ ಫಾರ್ಮ್ ನೋಡಿದರೆ, ಇದು ಸಾಧ್ಯ ಎಂದು ಅನಿಸುತ್ತದೆ. ಇದಕ್ಕೆ ಇವರಿಗೆ ಇನ್ನು 2 ಪಂದ್ಯಗಳು ಸಿಗಲಿವೆ. ಇನ್ನು ವಿರಾಟ್ ಕೊಹ್ಲಿ ಸಹ ಸನಿಹದಲ್ಲಿ ಇದ್ದು, ಆರ್‌ಸಿಬಿ ಸ್ಟಾರ್ ಆಟಗಾರನಿಗೆ ಸುದರ್ಶನ್ ದಾಖಲೆ ಮುರಿಯಲು ಇನ್ನು 145 ರನ್ ಅವಶ್ಯಕತೆ ಇದೆ. ಆರ್‌ಸಿಬಿಗೆ ಇನ್ನು ಒಂದೇ ಒಂದು ಪಂದ್ಯ ಸಿಗಲಿದ್ದು ಈ ಪರಿಸ್ಥಿತಿಯಲ್ಲಿ ಈ ಸಾಧನೆ ಮಾಡುವುದು ವಿರಾಟ್‌ಗೆ ಕಷ್ಟ.

ಪ್ರಸಿದ್ಧ್ ದಾಖಲೆಯ ಮೇಲೆ ಮೂರು ಪೇಸರ್‌ಗಳ ಕಣ್ಣು
ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಪಟ್ಟಿಯಲ್ಲಿ ಕರ್ನಾಟಕದ ಪ್ರಸಿದ್ಧ ಕೃಷ್ಣಾ ಮೊದಲ ಸ್ಥಾನದಲ್ಲಿದ್ದಾರೆ. ಇವರು ಆಡಿದ 15 ಪಂದ್ಯಗಳಲ್ಲಿ 25 ವಿಕೆಟ್ ಕಬಳಿಸಿದ್ದಾರೆ. ಇವರು ಪ್ರತಿನಿಧಿಸಿರುವ ತಂಡವೂ ಸಹ ಈಗಾಗಲೇ ಪ್ರಶಸ್ತಿ ರೇಸ್‌ನಿಂದ ದೂರ ಉಳಿದಿದೆ ಹೀಗಾಗಿ ಪ್ರಸಿದ್ಧ್ ವಿಕೆಟ್ ಹೆಚ್ಚಾಗುವುದು ಕಡಿಮೆ. ಆರ್‌ಸಿಬಿ ತಂಡದ ವೇಗಿ ಜೋಶ್ ಹ್ಯಾಜಲ್ ವುಡ್ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಪ್ರಸಿದ್ಧ್‌ಗೆ ಪೈಪೋಟಿ ನೀಡಬಲ್ಲ ಬೌಲರ್. ಇವರು ತೆಕ್ಕೆಯಲ್ಲಿ 21 ಪಂದ್ಯಗಳಿವೆ, ಇವರಿಗೆ ಪ್ರಸಿದ್ಧ್ ದಾಖಲೆ ಅಳಿಸಲು ಇನ್ನು ಐದು ವಿಕೆಟ್ ಅವಶ್ಯತೆ ಇದೆ ಆದರೆ ಒಂದೇ ಅವಕಾಶ ಸಿಗಲಿದೆ. ಆದರೆ ಮುಂಬೈ ಇಂಡಿಯನ್ಸ್ ತಂಡದ ಟ್ರೆಂಟ್ ಬೌಲ್ಟ್ (21 ವಿಕೆಟ್) ಹಾಗೂ ಜಸ್ಪ್ರಿತ್ ಬುಮ್ರಾ (18 ವಿಕೆಟ್) ಗೆ ಎರಡು ಅವಕಾಶಗಳು ಸಿಗುತ್ತವೆ. ಈ ಎರಡು ಪ್ರಯತ್ನದಲ್ಲಿ ಯಾರು ಸ್ಥಿರ ಪ್ರದರ್ಶನ ನೀಡುತ್ತಾರೋ ಅವರಿಗೆ ಈ ಪ್ರಶಸ್ತಿ ಲಭಿಸುತ್ತದೆ.