ಆರ್‌ಸಿಬಿ ಬಳಗದಲ್ಲಿದ್ದರೂ ಒಮ್ಮೆಯೂ ತಂಡದ ಪರ ಐಪಿಎಲ್‌ನಲ್ಲಿ ಆಡಿಲ್ಲ ಈ ಐವರು ಸ್ಟಾರ್ ಕ್ರಿಕೆಟಿಗರು

ಐಪಿಎಲ್‌ನಲ್ಲಿ 14 ಆವೃತ್ತಿ ಅಂತ್ಯವಾಗಿದ್ದು 15ನೇ ಆವೃತ್ತಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಎಲ್ಲಾ ತಂಡಗಳು ಕೂಡ ಹೊಸ ರೂಪದಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಆರ್‌ಸಿಬಿ ತಂಡ ಕೂಡ ಈ ಬಾರಿ ಸಾಕಷ್ಟು ಪ್ರತಿಭಾವಂತ ಆಟಗಾರರ ಪಡೆಯನ್ನು ಹೊಂದಿದ್ದು ತನ್ನ ಚೊಚ್ಚಲ ಟ್ರೋಫಿಗಾಗಿ ಎದುರು ನೋಡುತ್ತಿದೆ. ಇನ್ನು ಐಪಿಎಲ್ ಇತಿಹಾಸವನ್ನು ನೋಡಿದರೆ ಆರ್‌ಸಿಬಿ ತಂಡ ಪ್ರತಿ ಬಾರಿಯೂ ಸ್ಪೋಟಕ ಆಟಗಾರರ ಬಳಗವನ್ನೇ ಹೊಂದಿತ್ತು. ಹಾಗಿದ್ದರೂ ಟೂರ್ನಿಯನ್ನು ಗೆಲ್ಲಲು ಒಂದು ಬಾರಿಯೂ ಸಾಧ್ಯವಾಗಿಲ್ಲ. ಅದೇ ಕಾರಣಕ್ಕಾಗಿ ಆರ್‌ಸಿಬಿ ತಂಡವನ್ನು ಐಪಿಎಲ್ ಇತಿಹಾಸದ ನತದೃಷ್ಟ ತಂಡ ಎಂದು ಹೇಳಲಾಗುತ್ತದೆ.
ಪ್ರಸ್ತುತ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಆರ್‌ಸಿಬಿ ತಂಡದ ಪ್ರಮುಖ ಆಕರ್ಷಣೆಯಾಗಿದ್ದಾರೆ. ಆದರೆ ಆರ್‌ಸಿಬಿಯ ಈ ಸುದೀರ್ಘ ಪ್ರಯಾಣದಲ್ಲಿ ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಕೆವಿನ್ ಪೀಟರ್‌ಸನ್, ಯುವರಾಜ್ ಸಿಂಗ್‌ರಂತಾ ದಿಗ್ಗಜ ಆಟಗಾರರು ತಂಡದಲ್ಲಿ ಭಾಗವಾಗಿದ್ದರು.
ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ತಂಡ ಅತಿ ಹೆಚ್ಚು ಆಟಗಾರನ್ನು ಕಣಕ್ಕಿಳಿಸಿದ ತಂಡ ಎಂಬ ದಾಖಲೆಯನ್ನು ಹೊಂದಿದೆ. ತಮ್ಮ ತಂಡದ ಕಾಂಬಿನೇಶನ್‌ಅನ್ನು ಆರ್‌ಸಿಬಿ ಸಾಮಾನ್ಯವೆಂಬಂತೆ ಬದಲಾವಣೆ ಮಾಡಿಕೊಂಡು ಬರುತ್ತಿದೆ. ಆದರೆ ಪ್ರಸ್ತುತ ವಿಶ್ವ ಕ್ರಿಕೆಟ್‌ನಲ್ಲಿ ಸ್ಟಾರ್‌ಗಳಾಗಿ ಮಿಂಚಿತ್ತಿರುವ ಐವರು ಖ್ಯಾತ ಆಟಗಾರರು ಆರ್‌ಸಿಬಿ ತಂಡದ ಸ್ಕ್ವಾಡ್‌ನಲ್ಲಿದ್ದರೂ ಐಪಿಎಲ್ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯದಲ್ಲೂ ಕಣಕ್ಕಿಳಿದಿಲ್ಲ. ಹಾಗಾದರೆ ಆ ಐವರು ಸ್ಟಾರ್ ಆಟಗಾರರು ಯಾರು? ಮುಂದೆ ಓದಿ..

ಸ್ಟೀವ್ ಸ್ಮಿತ್
ಕ್ರಿಕೆಟ್ ಜಗತ್ತಿನಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಆಟಗಾರ ಸ್ಟೀವ್ ಸ್ಮಿತ್ ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಹರಾಜಾಗದೆ ಉಳಿದುಕೊಂಡಿದ್ದಾರೆ. ಐಪಿಎಲ್‌ನಲ್ಲಿ ತಂಡವನ್ನು ಮುನ್ನಡೆಸಿದ ಅನುಭವವನ್ನು ಕೂಡ ಸ್ಟೀವ್ ಸ್ಮಿತ್ ಹೊಂದಿದ್ದಾರೆ. ಆದರೆ ಈ ಹಿಂದೆ ವಿರಾಟ್ ಕೊಹ್ಲಿ ಜೊತೆ ಒಂದೇ ತಂಡದ ಸ್ಕ್ವಾಡ್‌ನಲ್ಲಿ ಇದ್ದರು ಎಂಬುದು ಹೆಚ್ಚಿನ ಕ್ರಿಕೆಟ್ ಪ್ರೇಮಿಗಳು ತಿಳಿದೇ ಇಲ್ಲ. ಆರ್‌ಸಿಬಿ ತಂಡದ ಪ್ರಮುಖ ಆಟಗಾರನಾಗಿದ್ದ ನ್ಯೂಜಿಲೆಂಡ್‌ನ ಜೆಸ್ಸಿ ರೈಡರ್ 2010ರ ಆವೃತ್ತಿಯಲ್ಲಿ ಗಾಯಗೊಂಡು ಹೊರಬಿದ್ದಾಗ ಸ್ಟೀವ್ ಸ್ಮಿತ್ ಅವರನ್ನು ಬಳಗಕ್ಕೆ ಸೇರ್ಪಡೆಗೊಳಿಸಿತ್ತು. ಆದರೆ ಸ್ಟೀವ್ ಸ್ಮಿತ್‌ಗೆ ಆ ಆವೃತ್ತಿಯಲ್ಲಿ ಒಂದೇ ಒಂದು ಪಂದ್ಯದಲ್ಲೂ ಕಣಕ್ಕಿಳಿಯುವ ಅವಕಾಶ ನೀಡದೆ ತದನಂತರ ಅವರನ್ನು ತಂಡದಿಂದ ಬಿಡುಗಡೆಗೊಳಿಸಿತ್ತು.

ಭುವನೇಶ್ವರ್ ಕುಮಾರ್
ಆರ್‌ಸಿಬಿ ತಂಡ ಪರವಾಗಿ ಐಪಿಎಲ್‌ನಲ್ಲಿ ಕಣಕ್ಕಿಳಿಯದ ಇನ್ನೋರ್ವ ಖ್ಯಾತ ಆಟಗಾರನೆಂದರೆ ಅದು ಭುವನೇಶ್ವರ್ ಕುಮಾರ್. 2009 ಹಾಗೂ 2010ರ ಆವೃತ್ತಿಯಲ್ಲಿ ಭುವನೇಶ್ವರ್ ಕುಮಾರ್ ಆರ್‌ಸಿಬಿ ತಂಡದ ಬಳಗದಲ್ಲಿದ್ದರು. 2009ರಲ್ಲಿ ವೇಗಿಗಳಿಗೆ ಸೂಕ್ತವೆನಿಸಿದ್ದ ವಿದೇಶಿ ನೆಲದಲ್ಲ ಭುವನೇಶ್ವರ್ ಮಿಂಚಿದ್ದರೂ ಬೆಂಗಳೂರು ತಂಡ ಒಂದೇ ಒಂದು ಅವಕಾಶವನ್ನು ನೀಡಿರಲಿಲ್ಲ. ಬಳಿಕ ಪುಣೆ ತಂಡವನ್ನು ಸೇರಿಕೊಂಡ ಭುವನೇಶ್ವರ್ ಕುಮಾರ್ ಅಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾದರು. ಆದರೆ ಚಾಂಪಿಯನ್ಸ್ ಲೀಗ್‌ನಲ್ಲಿ ಭುವನೇಶ್ವರ್ ಕುಮಾರ್ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಆರ್‌ಸಿಬಿ ಪರವಾಗಿ ಏಕೈಕ ಪಂದ್ಯವನ್ನಾಡುವ ಅವಕಾಶವನ್ನು 2009ರಲ್ಲಿ ಪಡೆದುಕೊಂಡಿದ್ದರು ಎಂಬುದು ಮತ್ತೊಂದು ಕುತೂಹಲಕಾರಿ ಅಂಶ.

ಸುಬ್ರಮಣ್ಯಂ ಬದ್ರಿನಾಥ್
ಆರಂಭಿಕ ಸೀಸನ್‌ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ಸಿಗೆ ಕಾರಣರಾಗಿದ್ದ ಆಟಗಾರರ ಪೈಕಿ ಸುಬ್ರಮಣ್ಯಂ ಬದ್ರೀನಾಥ್ ಕೂಡ ಒಬ್ಬರು. ಆದರೆ ಧೋನಿ ನಾಯಕತ್ವದ ಫ್ರಾಂಚೈಸಿ ಬದ್ರೀನಾಥ್ ಅವರನ್ನು ತಂಡದಿಂದ ಬಿಡುಗಡೆಗೊಳಿಸಿದ ನಂತರ ಆರ್‌ಸಿಬಿ ತಂಡವನ್ನು ಸೇರಿಕೊಂಡಿದ್ದರು. 2015ರ ಆವೃತ್ತಿಗೂ ಮುನ್ನ ಆರ್‌ಸಿಬಿ ತಂಡವನ್ನು ಸೇರಿಕೊಂಡ ಬದ್ರೀನಾಥ್ ಬೆಂಗಳೂರು ಮೂಲದ ತಂಡದ ಪರವಾಗಿ ಕನಿಷ್ಟ ಒಂದು ಅವಕಾಶವನ್ನು ಗಳಿಸಿಕೊಳ್ಳಲೂ ವಿಫಲರಾದರು.

ನಥನ್ ಕೌಲ್ಟರ್‌ನೈಲ್
ಆಸ್ಟ್ರೇಲಿಯಾ ಮೂಲದ ಕ್ರಿಕೆಟಿಗ ನಥನ್ ಕೌಲ್ಟರ್‌ನೈಲ್ ವೇಗಿಯಾಗಿ ಹಾಗೂ ಆಲ್‌ರೌಂಡರ್ ಆಗಿ ವಿಶ್ವದ ಬೇಡಿಕೆಯ ಕ್ರಿಕೆಟಿಗ. ಈ ಬಾರಿಯ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರೆ. ಇದಕ್ಕೂ ಮುನ್ನ 2019ರ ಆವೃತ್ತಿಯಲ್ಲಿ ಕೌಲ್ಟರ್‌ನೈಲ್ ಆರ್‌ಸಿಬಿ ತಂಡದ ಆಟಗಾರನಾಗಿದ್ದರು. ಅರ್‌ಸಿಬಿ ಬೌಲಿಂಗ್ ಸಮಸ್ಯೆ ಎದುರಿಸುತ್ತಿದ್ದ ಕಾರಣ ಆ ಆವೃತ್ತಿಯಲ್ಲಿ ತಂಡಕ್ಕೆ ಕೌಲ್ಟರ್‌ನೈಲ್ ಅವರನ್ನು ಸೇರ್ಪಡೆಗೊಳಿಸಿತ್ತು. ಆದರೆ ಆರ್‌ಸಿಬಿ ತಂಡದಲ್ಲಿ ಕಣಕ್ಕಿಳಿಯುವ ಮುನ್ನವೇ ಕೌಲ್ಟರ್‌ನೈಲ್ ಗಾಯಗೊಂಡ ಕಾರಣ ಆರ್‌ಸಿಬಿ ಪರವಾಗಿ ಆಡುವ ಅವಕಾಶ ಪಡೆಯಲಿಲ್ಲ.

ನುವಾನ್ ಪ್ರದೀಪ್
ಶ್ರೀಲಂಕಾ ಕ್ರಿಕೆಟ್ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದಾರೆ ನುವಾನ್ ಪ್ರದೀಪ್. ಆದರೆ ಶ್ರೀಲಂಕಾ ತಂಡದ ಅಯ್ಕೆಗಾರರ ಕಣ್ಣಿಗೆ ನುವಾನ್ ಪ್ರದೀಪ್ ಬೀಳುವ ಮುನ್ನವೇ ಆರ್‌ಸಿಬಿ ಈತನ ಮೇಲೆ ಕಣ್ಣಿಟ್ಟು ತಂಡಕ್ಕೆ ಸೇರ್ಪಡೆಗೊಳಿಸಿತ್ತು. 2011ರಲ್ಲಿ ಆರ್‌ಸಿಬಿ ಅಚ್ಚರಿಯ ರೀತಿಯಲ್ಲಿ ಒಪ್ಪಂದವನ್ನು ಮಾಡಿಕೊಂಡಿತ್ತಾದರೂ ಆರ್‌ಸಿಬಿ ಪರವಾಗಿ ಕಣಕ್ಕಿಳಿಯುವ ಅವಕಾಶ ಸಿಗಲಿಲ್ಲ ನುವಾನ್ ಪ್ರದೀಪ್‌ಗೆ ಸಿಗಲಿಲ್ಲ. ನಂತರ ಆರ್‌ಸಿಬಿ ತಂಡದಿಂದ ಹೊರಬಿದ್ದ ನುವಾನ್ ಪ್ರದೀಪ್‌ಗೆ ಐಪಿಎಲ್‌ನಲ್ಲಿ ಈವರೆಗೂ ಕಮ್‌ಬ್ಯಾಕ್ ಮಾಡಲು ಸಾಧ್ಯವಾಗಲೇ ಇಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications