ಐಪಿಎಲ್ 2025ರ ಮೆಗಾ ಹರಾಜಿಗೆ ಇನ್ನು ಕೆಲವೇ ದಿನಗಳು ಮಾತ್ರ ಉಳಿದಿವೆ. ರಿಟೆನ್ಶನ್ ಲಿಸ್ಟ್ ಬಿಡುಗಡೆಯಾದ ಬಳಿಕ ಇದೀಗ ಎಲ್ಲರ ಕಣ್ಣು ಐಪಿಎಲ್ ಮೆಗಾ ಹರಾಜಿನತ್ತ ನೆಟ್ಟಿದೆ. ಎಲ್ಲಾ 10 ತಂಡಗಳು ಐಪಿಎಲ್ 2025ರ ಆವೃತ್ತಿಗೆ ವಿಶೇಷ ತಂತ್ರ ರೂಪಿಸುವಲ್ಲಿ ನಿರತವಾಗಿವೆ. ಐಪಿಎಲ್ ಮೆಗಾ ಹರಾಜಿನಲ್ಲಿ ಈ ಬಾರಿ ಸ್ಟಾರ್ ಆಟಗಾರರ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸ್ಟಾರ್ ಆಟಗಾರರನ್ನು ಬಿಡ್ ಮಾಡಲು ಐಪಿಎಲ್ ಫ್ರಾಂಚೈಸಿ ಸಜ್ಜಾಗಿವೆ. ಇದಲ್ಲದೆ, ಕಳೆದ ಬಾರಿ ಐಪಿಎಲ್‌ನಲ್ಲಿ ಸಂಚಲನ ಮೂಡಿಸಿದ ಭಾರತದ ಅನ್‌ಕ್ಯಾಪ್ಡ್ ಆಟಗಾರರ ಅದೃಷ್ಟವೂ ಐಪಿಎಲ್ ಮೆಗಾ ಹರಾಜಿನಲ್ಲಿ ನಿರ್ಧಾರವಾಗಲಿದೆ.
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಫ್ರಾಂಚೈಸಿಗಳ ಗಮನ ಸೆಳೆದಿರುವ ಭಾರತದ ಅನ್‌ಕ್ಯಾಪ್ಡ್ ಮೂವರು ಆಟಗಾರರಿದ್ದಾರೆ. ಈ ಮೂವರು ಆಟಗಾರರ ಮೇಲೆ ಐಪಿಎಲ್‌ನ ಎಲ್ಲಾ 10 ಫ್ರಾಂಚೈಸಿಗಳು ಹಣದ ಸುರಿಮಳೆ ಸುರಿಸಲು ಸಿದ್ಧವಾಗಿವೆ. ಅಂತಹ ಮೂವರು ಅನ್‌ಕ್ಯಾಪ್ಡ್ ಆಟಗಾರರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದ ಯುವ ಎಡಗೈ ಬ್ಯಾಟರ್ ನೆಹಾಲ್ ವಧೇರಾ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ತೋರಿಸಿದ್ದಾರೆ. ಹಲವು ಸಂದರ್ಭಗಳಲ್ಲಿ ಮುಂಬೈ ಪರ ಫಿನಿಶರ್ ಆಗಿ ಗುರುತಿಸಿಕೊಂಡಿದ್ದಾರೆ. ಐಪಿಎಲ್ 2023 ರಲ್ಲಿ, ಅವರು 10 ಪಂದ್ಯಗಳಲ್ಲಿ 241 ರನ್ ಗಳಿಸಿದರು. ಇದಾದ ನಂತರ ಐಪಿಎಲ್ 2024ರಲ್ಲಿ ಅವರು 16 ಪಂದ್ಯಗಳಲ್ಲಿ 2 ಅರ್ಧಶತಕಗಳ ಸಹಾಯದಿಂದ 350 ರನ್ ಕಲೆ ಹಾಕಿದ್ದರು. ಆದರೂ, ಅವರನ್ನು ಮುಂಬೈ ಮುಂದಿನ ಐಪಿಎಲ್ ಆವೃತ್ತಿಗೆ ಉಳಿಸಿಕೊಂಡಿಲ್ಲ. ಹೀಗಾಗಿ ಮೆಗಾ ಹರಾಜಿನಲ್ಲಿರುವ ನೇಹಾಲ್ ವಧೇರಾ ಭಾರೀ ಮೊತ್ತಕ್ಕೆ ಬಿಡ್ ಆಗುವ ಸಾಧ್ಯತೆಯಿದೆ.
ಐಪಿಎಲ್‌ನ ಎಲ್ಲಾ 10 ಫ್ರಾಂಚೈಸಿಗಳು ಹಣ ಸುರಿಸಬಹುದಾದ ಅನ್‌ಕ್ಯಾಪ್ಡ್ ಭಾರತೀಯ ಆಟಗಾರರಲ್ಲಿ ಎರಡನೇ ಹೆಸರು ಆಂಗ್‌ಕ್ರಿಶ್ ರಘುವಂಶಿ. ಈ ಯುವ ಬ್ಯಾಟರ್ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಮಿಂಚಿದ್ದಾರೆ. 2022ರಲ್ಲಿ ವೆಸ್ಟ್ ಇಂಡೀಸ್ ನಲ್ಲಿ ನಡೆದ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಆಂಗ್‌ಕ್ರಿಶ್ ರಘುವಂಶಿ ಸದ್ದು ಮಾಡಿದ್ದರು. ಇದಾದ ನಂತರ ಕೆಕೆಆರ್ ಪರ ರಘುವಂಶಿ ಐಪಿಎಲ್‌ಗೆ ಪಾದರ್ಪನೆ ಮಾಡಿದರು. ಚೊಚ್ಚಲ ಪಂದ್ಯದಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅವರು ಅದ್ಭುತ ಆಟ ಪ್ರದರ್ಶಿಸಿದರು. ಐಪಿಎಲ್ 2024 ರಲ್ಲಿ ಕೆಕೆಆರ್ ಪರ 10 ಪಂದ್ಯಗಳಲ್ಲಿ 1 ಅರ್ಧಶತಕದ ಸಹಾಯದಿಂದ ಒಟ್ಟು 163 ರನ್ ಗಳಿಸಿದರು. ಈ ಯುವ ಆಟಗಾರನೂ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಆಗಬಹುದು.
ಐಪಿಎಲ್ 2024 ರಲ್ಲಿ ಪಂಜಾಬ್ ಕಿಂಗ್ಸ್ ಪರ ಅಶುತೋಷ್ ಶರ್ಮಾ ಅದ್ಭುತ ಪ್ರದರ್ಶನ ನೀಡಿದ್ದರು. ಫಿನಿಶರ್ ಪಾತ್ರದಲ್ಲಿ ಗುರುತಿಸಿಕೊಂಡಿದ್ದ ಅಶುತೋಷ್ ಶರ್ಮಾ ಮೇಲೆ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಸಾಕಷ್ಟು ಹಣವನ್ನು ಖರ್ಚು ಮಾಡಲು ಫ್ರಾಂಚೈಸಿಗಳು ಸಿದ್ಧವಾಗಿವೆ. ಭಾರತದ ಈ ಅನ್‌ಕ್ಯಾಪ್ಡ್ ಪವರ್-ಹಿಟರ್, 5 ಮತ್ತು 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಐಪಿಎಲ್ 2024ರಲ್ಲಿ ಅಶುತೋಷ್ ಶರ್ಮಾ 11 ಪಂದ್ಯಗಳಲ್ಲಿ 1 ಅರ್ಧಶತಕದ ನೆರವಿನಿಂದ 189 ರನ್ ಗಳಿಸಿದ್ದರು. ಈ ಪ್ರದರ್ಶನದ ಆಧಾರದ ಮೇಲೆ ಹಲವು ಫ್ರಾಂಚೈಸಿಗಳು ಅವರ ಮೇಲೆ ಕಣ್ಣಿಟ್ಟಿವೆ.