ಮಾತಿನ ಚಕಮಕಿ, ಫಿಕ್ಸಿಂಗ್ ಕಪ್ಪುಚುಕ್ಕೆ: ಐಪಿಎಲ್ ಇತಿಹಾಸದ ಪುಟ ಸೇರಿದ ವಿವಾದಾಗಳು
ಐಪಿಎಲ್ ಈಗ ಬರೀ ಕ್ರಿಕೆಟ್ ಲೀಗ್ ಆಗಿ ಉಳಿದುಕೊಂಡಿಲ್ಲ. ಬದಲಿಗೆ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾದಂತೆ ಆಗಿದೆ. ಈ ಲೀಗ್‌ನಲ್ಲಿ ಆಟಗಾರರು ಪ್ರತಿ ವರ್ಷ ರನ್‌ಗಳ ಮಹಲ್ ಕಟ್ಟುತ್ತಾರೆ. ಇನ್ನು ಬೌಲರ್‌ಗಳು ತಮ್ಮ ಶಿಸ್ತುಬದ್ಧ ದಾಳಿಯಿಂದ ಎದುರಾಳಿಗಳನ್ನು ಕಾಡಿ ಅಬ್ಬರಿಸುತ್ತಾರೆ. ಇದೇ ವೇಳೆ ಆಟಗಾರರ ನಡುವೆ ಮಾತಿನ ಚಕಮಕಿ ನಡೆಯುವುದು ಕಾಮನ್. ಐಪಿಎಲ್ ಆರಂಭವಾದರೆ ರೋಮಾಂಚನ ಹಾಗೂ ಡ್ರಾಮಾಕ್ಕೆ ಏನು ಕಮ್ಮಿ ಇರಲ್ಲ.
ಮಾರ್ಚ್ 28 ರಂದು ಮತ್ತೊಂದು ಆವೃತ್ತಿಯ ಐಪಿಎಲ್ ಆರಂಭವಾಗಲಿದೆ. ಈ ಲೀಗ್‌ನ ಇತಿಹಾಸದ ಪುಟವನ್ನು ಒಮ್ಮೆ ತೆಗೆದು ನೋಡಿದರೆ ಇದು ಎಷ್ಟು ವಿವಾದದಿಂದ ಕೂಡಿದೆ ಎಂದು ತಿಳಿಯುತ್ತದೆ. ಈ ಲೀಗ್ ಎಷ್ಟು ಜನಪ್ರಿಯವಾಗಿದೆಯೋ, ಅಷ್ಟೇ ವಿವಾದಗಳ ಕಾರಣಕ್ಕೂ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಈ ಲೀಗ್‌ನಲ್ಲಿ ನಡೆದ ವಿವಾದಗಳ ಬಗ್ಗೆ ಒಂದು ಪಕ್ಷಿನೋಟ ಇಲ್ಲಿದೆ.

ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಮೈದಾನಕ್ಕೆ ಇಳಿದರೆ ಆಕ್ರಮಣಕಾರಿ ಮನೋಭಾವ ತೋರಿಸುತ್ತಾರೆ. ಈ ಇಬ್ಬರೂ ಎದುರಾದಾಗ 2013ರಲ್ಲಿ ಒಂದು ವಿವಾದ ಹುಟ್ಟಿಕೊಂಡಿತು. ಕೆಕೆಆರ್ ಪರ ಗೌತಮ್ ಗಂಭೀರ್ ಕಣಕ್ಕೆ ಇಳಿದಿದ್ದರೆ, ಆರ್‌ಸಿಬಿ ಪರ ವಿರಾಟ್ ಇದ್ದರು. ಈ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದೇ ಆಟಗಾರರು ದಶಕದ ಬಳಿಕ ಮೈದಾನದಲ್ಲಿ ಮುಖಾಮುಖಿಯಾದಾಗಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಆಗ ಗೌತಮ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಭಾಗವಾಗಿದ್ದರು. ಈ ಇಬ್ಬರೂ ಆಟಗಾರರು ಇದು ಆಟದ ಭಾಗ ಎಂದು ಒಪ್ಪಿಕೊಂಡಿದ್ದಾರೆ.
ತಾಳ್ಮೆ ಕಳೆದುಕೊಂಡ ಧೋನಿ
ಟೀಮ್ ಇಂಡಿಯಾದ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ತಮ್ಮ ತಾಳ್ಮೆಯ ಸ್ವಭಾವದಿಂದಲೇ ಹೆಸರುವಾಸಿ. 2019ರಲ್ಲಿ ರಾಜಸ್ಥಾನ ಹಾಗೂ ಚೆನ್ನೈ ನಡುವಣ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ ಸಿಎಸ್‌ಕೆ ಗೆಲುವಿಗೆ 18 ರನ್ ಅವಶ್ಯಕತೆ ಇತ್ತು. ಕೊನೆಯ ಓವರ್‌ನಲ್ಲಿ ಬೆನ್ ಸ್ಟೋಕ್ಸ್ ಫುಲ್ ಟಾಸ್ ಎಸೆದರು. ಡಗೌಟ್‌ನಲ್ಲಿ ಕುಳಿತು ಪಂದ್ಯವನ್ನು ನೋಡುತ್ತಿದ್ದ ಧೋನಿ, ಈ ಎಸೆತವನ್ನು ನೋ ಬಾಲ್ ಎಂದು ನಂಬಿದ್ದರು.

ಫೀಲ್ಡ್ ಅಂಪೈರ್ ಇದನ್ನು ನೋ ಬಾಲ್ ಎಂದೇ ತಿಳಿಸಿದ್ದರು. ಆದರೆ ಸ್ಕ್ವೇರ್ ಲೆಗ್ ಅಂಪೈರ್ ಅದನ್ನು ನೋ ಬಾಲ್ ಅಲ್ಲ ಎಂದು ತೀರ್ಪು ನೀಡಿದ್ದರು. ನಿರ್ಧಾರ ಬದಲಾಗುತ್ತಿದ್ದಂತೆ ಧೋನಿ ಕೋಪಗೊಂಡು, ಮೈದಾನಕ್ಕೆ ಬಂದು ಅಂಪೈರ್ ಜೊತೆಗೆ ವಾಗ್ವಾದಕ್ಕೆ ಇಳಿದರು.
ಶಾರುಖ್ ಮೇಲೆ ಎಫ್‌ಐಆರ್
ಐಪಿಎಲ್ 2012ರಲ್ಲಿ ಕೆಕೆಆರ್ ಹಾಗೂ ಮುಂಬೈ ನಡುವಣ ಪಂದ್ಯ ನಡೆದಿತ್ತು. ಕೆಕೆಆರ್ ತಂಡದ ಮಾಲೀಕ ಶಾರುಖ್ ಖಾನ್ ಸೆಕ್ಯೂರಿಟಿ ಗಾರ್ಡ್ ಅವರೊಂದಿಗೆ ವಾಗ್ವಾದ ನಡೆಸಿದರು. ವರದಿಗಳ ಅನುಸಾರ ಸೆಕ್ಯೂರಿಟಿ ಸಿಬ್ಬಂದಿ ಶಾರುಖ್ ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ಸಹ ದಾಖಲಾಯಿತು. ಅಲ್ಲದೆ ಶಾರುಖ್ ಅವರಿಗೆ ವಾಂಖೆಡೆ ಮೈದಾನಕ್ಕೆ 5 ವರ್ಷ ನಿಷೇಧ ಹೇರಲಾಯಿತು.
ಸ್ಪಾಟ್ ಫಿಕ್ಸಿಂಗ್
2013ರಲ್ಲಿ ನಡೆದಿದ್ದ ಆ ಒಂದು ಘಟನೆ ಐಪಿಎಲ್ ಅಷ್ಟೇ ಅಲ್ಲ ಕ್ರಿಕೆಟ್ ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು. ಫಿಕ್ಸಿಂಗ್ ಆರೋಪದಡಿ ರಾಜಸ್ಥಾನ ರಾಯಲ್ಸ್ ತಂಡದ ಮೂವರು ಆಟಗಾರರನ್ನು ಬಂಧಿಸಲಾಗಿತ್ತು. ಇದರಲ್ಲಿ ಎಸ್.ಶ್ರೀಶಾಂತ್, ಅಜಿತ್ ಚಂಡೀಲ್, ಅಂಕಿತ್ ಚೌಹಾಣ್ ಬಂಧನಕ್ಕೆ ಒಳಗಾಗಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಸ್‌ಕೆ ತಂಡದ ಪ್ರಿನ್ಸಿಪಲ್ ಗುರುನಾಥ್ ಮೇಯಪ್ಪನ್, ರಾಜಸ್ಥಾನ ರಾಯಲ್ಸ್ ತಂಡದ ಮಾಲೀಕ ರಾಜ್ ಕುಂದ್ರಾ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟಗಾರರ ಮೇಲೆ ನಿಷೇಧ ಹೇರಲಾಯಿತು. ಹಾಗೂ ಚೆನ್ನೈ ಹಾಗೂ ರಾಜಸ್ಥಾನ ತಂಡಗಳನ್ನು ಎರಡು ವರ್ಷಗಳಿಗೆ ಬ್ಯಾನ್ ಮಾಡಲಾಯಿತು.
ಕಪಾಳಮೋಕ್ಷ
ಐಪಿಎಲ್ ಉದ್ಘಾಟನಾ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವೆ ಪಂದ್ಯ ನಡೆದಿತ್ತು. ಇದರಲ್ಲಿ ಪಂಜಾಬ್ 66 ರನ್‌ಗಳಿಂದ ಗೆದ್ದಿತು. ಆದಾಗ್ಯೂ, ಪಂದ್ಯದ ನಂತರ, ಎರಡೂ ತಂಡಗಳು ಕೈಕುಲುಕುತ್ತಿದ್ದಾಗ, ಹರ್ಭಜನ್ ಸಿಂಗ್ ಎಸ್. ಶ್ರೀಶಾಂತ್‌ಗೆ ಕಪಾಳಮೋಕ್ಷ ಮಾಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications