ಅಬುಧಾಬಿಯಲ್ಲಿ ಇತ್ತೀಚೆಗೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಿನಿ ಹರಾಜಿನಲ್ಲಿ ಬಾಂಗ್ಲಾದೇಶ ಬೌಲರ್ ಮುಷ್ತಾಫಿಜುರ್ ರಹಮಾನ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡ ಖರೀದಿಸಿತ್ತು. ಮುಷ್ತಾಫಿಜುರ್ ರಹಮಾನ್ ಡೆತ್ ಓವರ್‌ಗಳಲ್ಲಿ ಕಟರ್ ಹಾಗೂ ಸ್ಲೋವರ್ ಒನ್ ಎಸೆತಗಳ ಮೂಲಕವೇ ಹೆಸರುವಾಸಿಯಾದ ಬೌಲರ್. ಇವರಿಗೆ ಶಾರೂಖ್ ಒಡೆತನದ ಕೆಕೆಆರ್ ಭಾರೀ ಮೊತ್ತ ನೀಡಿದ್ದು ಈಗ ಸಾಮಾಜಿಕ ತಾಣದಲ್ಲಿ ಟೀಕೆಗೆ ಗುರಿಯಾಗಿದೆ.
ಈ ಟೀಕೆ, ವಿಮರ್ಶೆ, ಚರ್ಚೆಗಳಿಗೆ ಕ್ರಿಕೆಟ್ ಲೋಕದ ಆಗುಹೋಗುಗಳು ಕಾರಣವಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ. ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಮತ್ತೆ ಘರ್ಷಣೆ ಭುಗಿಲೆದ್ದಿದ್ದು ಅಲ್ಫಸಂಖ್ಯಾತ ಹಿಂದುಗಳ ಮೇಲೆ ಹಿಂಸಾಚಾರ ಹೆಚ್ಚಾಗುತ್ತಿದೆ. ಈ ವಿಚಾರವು ಭಾರತದ ರಾಜಕೀಯ ನಾಯಕರ ನಡುವಣ ಚರ್ಚೆಗೂ ವಸ್ತುವಾಗಿದೆ. ಈ ಬೆಳವಣಿಗೆಗಳ ನೇರ ಪರಿಣಾಮ ಈಗ ಕ್ರಿಕೆಟ್ ಮೇಲೆಯೂ ಬಿದ್ದಿದೆ.

ಮಿನಿ ಹರಾಜಿನಲ್ಲಿ ಮುಷ್ತಾಫಿಜುರ್ ರಹಮಾನ್ ಅವರನ್ನು ಕೆಕೆಆರ್ 9.2 ಕೋಟಿ ರೂ ನೀಡಿ ಖರೀದಿ ಮಾಡಿದೆ. ಆತ ವೃತಿಪರ ಕ್ರಿಕೆಟ್ ಆಟಗಾರರಾಗಿದ್ದು ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಕ್ಕೆ ಸೇರಿದವರಲ್ಲ. ಐಪಿಎಲ್‌ನಲ್ಲಿ ತಂಡವೊಂದು ಅವರನ್ನು ಖರೀದಿಸಿರುವುದಕ್ಕೆ ಅವರ ಆಟದ ವೈಖರಿಯೇ ಕಾರಣ. ಪಾಕ್ ಆಟಗಾರರಿಗೆ ಐಪಿಎಲ್‌ನಲ್ಲಿ ನಿರ್ಬಂಧವಿದೆ, ಆದರೆ ಬಾಂಗ್ಲಾ ಆಟಗಾರರಿಗೆ ಯಾವುದೇ ನಿರ್ಬಂಧ ಇಲ್ಲ.
ಕೆಕೆಆರ್ ತಂಡ ಆಡಳಿತ ಮಂಡಳಿಯ ಈ ನಿರ್ಧಾರವು ತಂಡದ ತಂತ್ರಗಾರಿಕೆಯನ್ನು ಅವಲಂಬಿಸಿದೆ. ಹೀಗಾಗಿ ಆಟಗಾರನ ದೇಶದಲ್ಲಿ ನಡೆಯುತ್ತಿರುವ ಘರ್ಷಣೆಗಳನ್ನು ನೆಪವಾಗಿಸಿಕೊಂಡು ಆಟಗಾರನನ್ನು ಟೀಕಿಸುವುದು, ಅವನ ನಿರ್ಬಂಧಕ್ಕೆ ಆಗ್ರಹಿಸುವುದು ತಪ್ಪು.
ಬಾಂಗ್ಲಾ ವಿದ್ಯಮಾನವನ್ನು ಆಧರಿಸಿ ಸಾಮಾಜಿಕ ಮಾಧ್ಯಮದಲ್ಲಿ ಆಟಗಾರರನ್ನು ಟ್ರೋಲ್ ಮಾಡುದರಿಂದ ನೊಂದವರಿಗೆ ನ್ಯಾಯ ಸಿಗದು. ಬದಲಿಗೆ ಸರ್ಕಾರದ ಮಟ್ಟದಲ್ಲಿ ಮಾತುಕತೆಗಳು ನಡೆಯಬೇಕು, ರಾಜತಾಂತ್ರಿಕ ಒತ್ತಡಗಳ ಮೂಲಕ ಅಲ್ಲಿ ಶಾಂತಿ ಸ್ಥಾಪನೆಗೆ ಪ್ರಯತ್ನ ನಡೆಯಬೇಕು.
ಬಾಂಗ್ಲಾದೇಶ ಭರವಸೆಯ ವೇಗದ ಬೌಲರ್‌ಗಳಲ್ಲಿ ಮುಷ್ತಾಫಿಜುರ್ ರಹಮಾನ್‌ಗೆ ಅಗ್ರ ಸ್ಥಾನ. 30 ವರ್ಷದ ಎಡಗೈ ಬೌಲರ್ ತಮ್ಮ ಆಕ್ಷನ್ ಹಾಗೂ ದಾಳಿಯಲ್ಲಿ ಮಿಶ್ರಣದಿಂದ ಹೆಸರುವಾಸಿ. ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸುವಲ್ಲಿ ಇವರು ನಿಸ್ಸೀಮರು. ಮುಷ್ತಾಫಿಜುರ್ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಾ ಸುಮಾರು 11 ವರ್ಷ ಕಳೆದಿವೆ. ಈಗಾಗಲೇ ಇವರು ಬಾಂಗ್ಲಾ ಪರ 15 ಟೆಸ್ಟ್, 116 ಏಕದಿನ, 126 ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಒಟ್ಟಾರೆಯಾಗಿ ಇವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 366 ವಿಕೆಟ್ ಪಡೆದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇವರು ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್, ಮುಂಬೈ ಇಂಡಿಯನ್ಸ್, ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿದ್ದಾರೆ. ಐಪಿಎಲ್‌ನಲ್ಲಿ ಒಟ್ಟಾರೆ ಮುಷ್ತಾಫಿಜುರ್ 60 ಪಂದ್ಯಗಳನ್ನು ಆಡಿದ್ದು 65 ವಿಕೆಟ್ ಪಡೆದಿದ್ದಾರೆ. ಇವರು ಸಿಎಸ್‌ಕೆ ಪರ ಆಡುವಾಗ ಆರ್‌ಸಿಬಿಯ ನಾಲ್ಕು ವಿಕೆಟ್ ಪಡೆದಿರುವುದು ಶ್ರೇಷ್ಠ ಸಾಧನೆಯಾಗಿದೆ.