ಐಪಿಎಲ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮೊದಲ ಬೇಟೆಯನ್ನು ಆರಂಭಿಸಿದೆ. ಆರ್‌ಸಿಬಿ 8.75 ಕೋಟಿಗೆ ಇಂಗ್ಲೆಂಡ್ ತಂಡದ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಸೇರಿಸಿಕೊಂಡಿದೆ.
ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಲಿಯಾಮ್ ಲಿವಿಂಗ್ ಸ್ಟೋನ್ ಅವರನ್ನು ಕೊಳ್ಳಲು ಆರ್‌ಸಿಬಿ ಬಾಜಿ ಕಟ್ಟಿ ಕೊನೆಯಲ್ಲಿ ಗೆದ್ದಿತು. ಇವರು ಈಗಾಗಲೇ ಇಂಗ್ಲೆಂಡ್ ಪರ 55 ಪಂದ್ಯಗಳಲ್ಲಿ 881 ರನ್ ಸಿಡಿಸಿದ್ದಾರೆ. ಇವರ ಸ್ಟ್ರೈಕ್ ರೇಟ್ 151.11 ಆಗಿದ್ದು, ಚುಟುಕು ಫಾರ್ಮೆಟ್‌ನಲ್ಲಿ ಇವರು 1 ಶತಕ ಹಾಗೂ 2 ಅರ್ಧಶತಕಗಳನ್ನು ಬಾರಿಸಿದ್ದಾರೆ. ಅಲ್ಲದೆ ಇವರು ಸ್ಪಿನ್ ಬೌಲಿಂಗ್ ಸಹ ನಡೆಸಬಲ್ಲರು. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇವರು 32 ವಿಕೆಟ್ ಕಬಳಿಸಿದ್ದಾರೆ.

ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಇವರು ಆಡಿದ 7 ಪಂದ್ಯಗಳಲ್ಲಿ 111 ರನ್ ಸಿಡಿಸಿದ್ದರು. ಅಲ್ಲದೆ 17ನೇ ಆವೃತ್ತಿಯಲ್ಲಿ ಇವರು 3 ವಿಕೆಟ್ ಸಹ ಕಬಳಿಸಿದ್ದರು. ಇವರಲ್ಲಿನ ಆಲ್‌ರೌಂಡರ್ ಗುಣಗಳನ್ನು ನೋಡಿ ಆರ್‌ಸಿಬಿ ಇವರಿಗೆ ಮಣೆ ಹಾಕಿದೆ.
ಇಂಗ್ಲೆಂಡ್‌ನ ಸ್ಟಾರ್ ಆಟಗಾರ ಲಿಯಾಮ್ ಲಿವಿಂಗ್ಸ್ಟೋನ್ ಅವರು ಕೆಲವು ಐಪಿಎಲ್ ಆವೃತ್ತಿಗಳಿಂದ ಸದ್ದು ಮಾಡುತ್ತಿದ್ದಾರೆ. ಐಪಿಎಲ್‌ನಲ್ಲಿ ಕೆಲವೇ ಪಂದ್ಯಗಳನ್ನು ಆಡಿದ್ದರೂ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಲಿವಿಂಗ್ಸ್ಟೋನ್ ಆಡಿರುವ 39 ಪಂದ್ಯಗಳಲ್ಲಿ 939 ರನ್‌ಗಳನ್ನು ಬಾರಿಸಿದ್ದು, 6 ಅರ್ಧಶತಕ ಗಳಿಸಿದ್ದಾರೆ. ಇನ್ನೂ ಬೌಲಿಂಗ್‌ನಲ್ಲಿ 9.14 ರ ಎಕಾನಮಿಯಲ್ಲಿ 11 ವಿಕೆಟ್ ಪಡೆದಿದ್ದಾರೆ. 27 ರನ್ ಗಳಿಗೆ 3 ವಿಕೆಟ್ ಕಬಳಿಸಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ.
ಆರ್‌ಸಿಬಿ ಫ್ರಾಂಚೈಸಿ ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಮತ್ತು ಯಶ್ ದಯಾಳ್ ಅವರನ್ನು ಉಳಿಸಿಕೊಂಡಿದ್ದು, ಇದೀಗ ಮೆಗಾ ಹರಾಜಿಗೆ 83 ಕೋಟಿ ರೂ. ಇಟ್ಟುಕೊಂಡಿತ್ತು. ಈಗ ಆರ್‌ಸಿಬಿ ಫ್ರಾಂಚೈಸಿ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಮೊದಲ ಆಟಗಾರನಾಗಿ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ.
ಲಿಯಾಮ್ ಲಿವಿಂಗ್ಸ್ಟೋನ್ ಅವರು ಆರ್‌ಸಿಬಿ ತಂಡಕ್ಕೆ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಉಪಯುಕ್ತ ಆಟಗಾರನಾಗಿದ್ದಾರೆ. ಈ ಹಿಂದಿನ ಐಪಿಎಲ್ ಆವೃತ್ತಿಗಳಲ್ಲಿ ಆರ್‌ಸಿಬಿ ತಂಡದ ಮಿಡಲ್ ಆರ್ಡರ್ ಬ್ಯಾಟಿಂಗ್ ವಿಭಾಗ ಹೇಳಿಕೊಳ್ಳುವಂತಿರಲಿಲ್ಲ. ಅಲ್ಲದೆ, ತಂಡಕ್ಕೆ ಫಿನಿಶರ್ ಪಾತ್ರ ನಿರ್ವಹಿಸುವ ಸ್ಪೋಟಕ ಬ್ಯಾಟರ್ ಅವಶ್ಯಕತೆ ಇತ್ತು. ಇದೀಗ ಆರ್‌ಸಿಬಿಯಲ್ಲಿ ಈ ಸ್ಥಾನವನ್ನು ಲಿಯಾಮ್ ಲಿವಿಂಗ್‌ಸ್ಟೋನ್ ತುಂಬಲಿದ್ದಾರೆ.