
2023 ರ ಐಪಿಎಲ್ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಸಾಕಷ್ಟು ಆಟಗಾರರ ಮೇಲೆ ಕಣ್ಣಿಟ್ಟಿದೆ. ನಾಯಕ ಕೇನ್ ವಿಲಿಯಮ್ಸ್ ಸೇರಿ ಪ್ರಮುಖ ಆಟಗಾರರನ್ನೇ ತಂಡದಿಂದ ಬಿಡುಗಡೆ ಮಾಡಿದ್ದು, ಆರಂಭಿಕ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಲು ಯೋಜನೆ ಮಾಡುತ್ತಿದೆ.
ಕಳೆದ ಬಾರಿ ನಾಯಕರಾಗಿದ್ದ ಮಯಾಂಕ್ ಅಗರ್ವಾಲ್‌ರನ್ನು ಪಂಜಾಬ್ ಕಿಂಗ್ಸ್ ತಂಡ ಈ ಬಾರಿ ಬಿಡುಗಡೆ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ. ಮಯಾಂಕ್ ಅಗರ್ವಾಲ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಲು ಸನ್‌ರೈಸರ್ಸ್ ಹೈದರಾಬಾದ್ ತಂಡ ಆಸಕ್ತಿ ಹೊಂದಿರಬಹುದು ಎಂದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.
2022ರ ಐಪಿಎಲ್‌ನಲ್ಲಿ ಅವರು ಪಂಜಾಬ್ ಕಿಂಗ್ಸ್ ನಾಯಕರಾಗಿ 13 ಪಂದ್ಯಗಳನ್ನಾಡಿದರು, ಕೇವಲ 196 ರನ್ ಗಳಿಸಲು ಸಾಧ್ಯವಾಯಿತು. ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಅವರು ತಂಡದ ಒಳಿತಿನ ದೃಷ್ಟಿಯಿಂದ ಆರಂಭಿಕ ಸ್ಥಾನವನ್ನು ಬಿಟ್ಟುಕೊಟ್ಟರು. ಮೂರನೇ ಕ್ರಮಾಂಕದಲ್ಲಿ ಅವರು ಬ್ಯಾಟಿಂಗ್ ಮಾಡಿದರು.
ಸ್ಟಾರ್ ಸ್ಪೋರ್ಟ್ಸ್ ಶೋ 'ಗೇಮ್ ಪ್ಲಾನ್'ನಲ್ಲಿ ಮಾತನಾಡಿದ ಇರ್ಫಾನ್ ಪಠಾಣ್, ಮಯಾಂಕ್ ಅಗರ್ವಾಲ್ ಖರೀದಿಯಿಂದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಹೇಗೆ ಲಾಭವಾಗಲಿದೆ ಎಂದು ವಿವರಣೆ ನೀಡಿದ್ದಾರೆ.

ಮಯಾಂಕ್ ಅಗರ್ವಾಲ್ ತಂಡದಲ್ಲಿದ್ದರೆ ಲಾಭ
"ಎಸ್‌ಆರ್‌ಹೆಚ್ ತಂಡ ಕೇನ್ ವಿಲಿಯಮ್ಸನ್ ಅವರನ್ನು ಬಿಡುಗಡೆ ಮಾಡಿರುವುದರಿಂದ ಅವರಿಗೆ ಮಯಾಂಕ್ ಅಗರ್ವಾಲ್‌ರಂತಹ ಅನುಭವಿ ಆಟಗಾರರ ಅಗತ್ಯವಿದೆ. ಮಯಾಂಕ್ ಅಗರ್ವಾಲ್ ಕೆಲವು ಎಸೆತಗಳನ್ನು ಎಚ್ಚರಿಕೆಯಿಂದ ಆಡಿದ ನಂತರ ಆಕ್ರಮಣಕಾರಿ ಆಟವಾಡುವ ಸಾಮರ್ಥ್ಯ ಹೊಂದಿದ್ದಾರೆ" ಎಂದು ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.
"ಮಯಾಂಕ್ ಅಗರ್ವಾಲ್ ಒಂದು ತಂಡವನ್ನು ಮುನ್ನಡೆಸಿದ ವ್ಯಕ್ತಿಯಾಗಿದ್ದು, ಅವರು ಸಾಕಷ್ಟು ಮುಕ್ತವಾಗಿ ಆಡುತ್ತಾರೆ, ತುಂಬಾ ನಿರ್ಭೀತರು, ತುಂಬಾ ನಿಸ್ವಾರ್ಥರಾಗಿದ್ದಾರೆ. ಎಸ್‌ಆರ್‌ಹೆಚ್ ತಂಡದ ನಾಯಕರಾಗಿಯೂ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆ ಇದೆ" ಎಂದು ಹೇಳಿದರು.
ಸನ್‌ರೈಸರ್ಸ್ ಹೈದರಾಬಾದ್ ತಂಡ 42.25 ಕೋಟಿ ರುಪಾಯಿಗಳನ್ನು ಪರ್ಸ್‌ನಲ್ಲಿ ಹೊಂದಿದೆ. ಪಂಜಾಬ್ ಕಿಂಗ್ಸ್ 32.20 ಕೋಟಿ ರುಪಾಯಿ ಪರ್ಸ್‌ನಲ್ಲಿ ಹೊಂದಿದ್ದು, ಪ್ರಮುಖ ಆಟಗಾರರಿಗೆ ಪೈಪೋಟಿ ನಡೆಸುವ ಸಾಧ್ಯತೆ ಇದೆ.

ಆಡಮ್ ಝಂಪಾ ಅವರನ್ನು ಪ್ರಯತ್ನಿಸಬಹುದು
"ಪಂಜಾಬ್ ಮತ್ತು ಎಸ್‌ಆರ್‌ಹೆಚ್ ತಂಡಗಳು ಈ ಬಾರಿ ಆಸ್ಟ್ರೇಲಿಯಾದ ಸ್ಪಿನ್ನರ್ ಆಡಮ್ ಝಂಪಾ ಅವರಿಗಾಗಿ ಪೈಪೋಟಿ ನಡೆಸುವ ಸಾಧ್ಯತೆ ಇದೆ" ಎಂದು ಪಠಾಣ್ ಹೇಳಿದ್ದಾರೆ. ಎರಡೂ ತಂಡಗಳು ಹೆಚ್ಚಿನ ಹಣ ಹೊಂದಿದ್ದು, ಹಲವು ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲಿವೆ, ಬೆನ್ ಸ್ಟೋಕ್ಸ್, ಸ್ಯಾಮ್ ಕರನ್, ಕ್ಯಾಮರೂನ್ ಗ್ರೀನ್ ಅವರಿಗಾಗಿ ಕೂಡ ಈ ಎರಡು ತಂಡಗಳು ಪೈಪೋಟಿಗೆ ಬೀಳುವ ಸಾಧ್ಯತೆ ಇದೆ.