ಭಾರತ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಈ ಪ್ರವಾಸದಲ್ಲಿ ಮೊದಲಿಗೆ ಏಕದಿನ ಸರಣಿಯನ್ನು ಆಡುತ್ತಿದೆ. ಈ ಬಳಿಕ ಭಾರತ ಟಿ20 ಸರಣಿಗಳನ್ನು ಆಡಲಿದೆ. ಆದರೂ ಅಭಿಮಾನಿಗಳ ಚಿತ್ತ ಐಪಿಎಲ್ ಮೇಲೂ ನೆಟ್ಟಿದೆ. ಐಪಿಎಲ್‌ನ ಮುಂದಿನ ಆವೃತ್ತಿಗೆ ಡಿಸೆಂಬರ್‌ನಲ್ಲಿ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ. ಇದಕ್ಕೂ ಮೊದಲು ತಂಡಗಳು ತಮ್ಮ ತಂಡದಲ್ಲಿ ಉಳಿಸಿಕೊಂಡ, ಕೈ ಬಿಟ್ಟ ಆಟಗಾರರ ಬಗ್ಗೆ ಮಾಹಿತಿಯನ್ನು ಬಿಸಿಸಿಐಗೆ ನೀಡುವ ಅನಿವಾರ್ಯತೆ ಇದೆ. ಇದಕ್ಕೆ ನವೆಂಬರ್ 15 ಕೊನೆಯ ದಿನವಾಗಿರಲಿದೆ. ಹೀಗಾಗಿ ಯಾವೆಲ್ಲಾ ತಂಡಗಳು ಯಾರನೆಲ್ಲಾ ಉಳಿಸಿಕೊಳ್ಳಬಹುದು ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ.
18ನೇ ಆವೃತ್ತಿಯ ಚಾಂಪಿಯನ್ ಆರ್‌ಸಿಬಿ ಸಹ ತನ್ನ ತಂಡದಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಕಳೆದ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ತಂಡದಿಂದ ಮೂವರು ಆಟಗಾರರಿಗೆ ಗೇಟ್ ಪಾಸ್ ನೀಡುವ ಸಾಧ್ಯತೆ ಇದ್ದು, ಇವರ ಬದಲಿಗೆ ಆರ್‌ಸಿಬಿ ಬದಲಿ ಆಟಗಾರರನ್ನು ಟ್ರೇಡ್ ಮಾಡಬಹುದು ಎಂಬ ಲೆಕ್ಕಾಚಾರ ಆರಂಭವಾಗಿದೆ.

ಆರ್ಸಿಬಿ ಐಪಿಎಲ್ ಮೆಗಾ ಹರಾಜಿನಲ್ಲಿ ಜಿದ್ದಿಗೆ ಬಿದ್ದು ಇಂಗ್ಲೆಂಡ್ ತಂಡದ ಭರವಸೆಯ ಯುವ ಆಟಗಾರ ಜಾಕಬ್ ಬೇತೆಲ್ ಅವರನ್ನು 2.6 ಕೋಟಿ ರೂ. ನೀಡಿ ಖರೀದಿಸಿತ್ತು. ಇವರಿಗೆ ಕಳೆದ ಕೆಲವು ದಿನಗಳ ಹಿಂದೆ ಇಂಗ್ಲೆಂಡ್ ತಂಡದ ಟಿ20 ನಾಯಕತ್ವವನ್ನು ಸಹ ನೀಡಲಾಗಿತ್ತು. ಆದರೆ ಇವರು ಆರ್‌ಸಿಬಿ ಪರ ಕಳೆದ ಆವೃತ್ತಿಯಲ್ಲಿ ಕೆಲವೇ ಪಂದ್ಯಗಳನ್ನು ಆಡಿದ್ದರು. ಇದರಲ್ಲಿ ಪ್ಲೇ ಆಫ್ ಪಂದ್ಯಗಳು ಸಹ ಸೇರಿದ್ದವು. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬಾರಿಸಿದ ಅರ್ಧಶತಕವೂ ಸೇರಿದೆ. ಇವರು ಆರ್‌ಸಿಬಿ ಅಂದುಕೊಂಡಷ್ಟು ಸ್ಥಿರ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಆರ್‌ಸಿಬಿ ಇವರ ಬದಲಿಗೆ ಸ್ಪಿನ್ ಬೌಲಿಂಗ್ ಆಲ್‌ರೌಂಡರ್‌ಗೆ ಮಣೆ ಹಾಕುವ ಸಾಧ್ಯತೆ ಇದೆ.
ಆರ್ಸಿಬಿ ತಂಡದ ಮೆಗಾ ಹರಾಜಿನಲ್ಲಿ 1 ಕೋಟಿ ರೂ ನೀಡಿ ಖರೀದಿಸಿದ ದಕ್ಷಿಣ ಆಫ್ರಿಕಾದ ವೇಗಿ ಲುಂಗಿ ಎನ್‌ಗಿಡಿ ಸಹ ಒಬ್ಬರು. ಇವರು ಕಳೆದ ವರ್ಷ ಲೀಗ್ ಹಂತದ ಪಂದ್ಯದಲ್ಲಿ ಚೆನ್ನೈ ವಿರುದ್ಧ ಆರ್‌ಸಿಬಿ 2 ರನ್ ಗೆಲುವು ದಾಖಲಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಆಟಗಾರ. ಇವರು ಕಳೆದ ಆವೃತ್ತಿಯ ಕೊನೆಯಲ್ಲಿ ರಾಷ್ಟ್ರೀಯ ತಂಡಕ್ಕೆ ಬೇಗನೇ ಸೇರಿದ್ದರಿಂದ ಕೇವಲ 2 ಪಂದ್ಯಗಳನ್ನು ಮಾತ್ರ ಆಡಿದ್ದರು. ಇವರ ಬದಲಿಗೆ ಆರ್‌ಸಿಬಿ ಕೊನೆಗೆ ಜಿಂಬಾಬ್ವೆ ಬೌಲರ್ ರಿಪ್ಲೇಸ್ ಮಾಡಿತ್ತು. ಈ ಬಾರಿ ಆರ್‌ಸಿಬಿ ಇವರ ಸ್ಥಾನವನ್ನು ತುಂಬವ ಆಟಗಾರನ ಹುಡುಕಾಟವನ್ನು ಹರಾಜಿನಲ್ಲಿ ಅಥವಾ ಟ್ರೇಡ್ ಮೂಲಕ ತಂಡಕ್ಕೆ ಸೇರಿಸಿಕೊಳ್ಳಲಿದೆ.

ಆರ್ಸಿಬಿ ಐಪಿಎಲ್ ಮೆಗಾ ಹರಾಜಿನಲ್ಲಿ ದೊಡ್ಡ ಕನಸಿನೊಂದಿಗೆ ಖರೀದಿಸಿದ ಆಟಗಾರ ರಸಿಖ್ ಸಲಾಂ. ಇವರು ಈಗಾಗಲೇ ಐಪಿಎಲ್‌ನಲ್ಲಿ ಮೂರು ಫ್ರಾಂಚೈಸಿ ಪರ ಆಡಿದ್ದಾರೆ. ಬೆತೇಲ್, ಲುಂಗಿ ಎನ್‌ಗಿಡಿ ರೀತಿ ರಸಿಖ್ ಸಹ ಕೇವಲ 2 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಆದರೆ ಈ ವೇಳೆ ಇವರು ತಮ್ಮ ಘನತೆಗೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಆರ್‌ಸಿಬಿ ಇವರನ್ನು ಬಿಟ್ಟು ಬೇರೊಬ್ಬ ದೇಶೀಯ ಆಟಗಾರನಿಗೆ ಮಣೆ ಹಾಕಬಹುದು. ಐಪಿಎಲ್ ಹರಾಜುಗೂ ಮುನ್ನ ಯಾವೆಲ್ಲ ಆಟಗಾರರಿಗೆ ಆರ್ಸಿಬಿ ಕೈ ಬಿಡಲಿದೆ ಎಂಬುದು ಕುತೂಹಲ ಮೂಡಿಸಿದೆ.