ನಿರೀಕ್ಷೆಯಂತೆಯೇ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮುಖ್ಯ ಕೋಚ್ ಆಗಿದ್ದ ಬ್ರಿಯಾನ್ ಲಾರಾ ತಂಡದಿಂದ ಹೊರಬಿದ್ದಿದ್ದಾರೆ. ಈ ಬಗ್ಗೆ ಎಸ್‌ಆರ್‌ಹೆಚ್ ಮ್ಯಾನೇಜ್‌ಮೆಂಟ್ ಅಧಿಕೃತ ಘೋಷಣೆ ಮಾಡಿದ್ದು ನೂತನ ಕೋಚ್ ಆಗಿ ನ್ಯೂಜಿಲೆಂಡ್ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ ಅವರನ್ನು ನೀಮಿಸಿದೆ.
ಹೀಗಾಗಿ 44ರ ಹರೆಯದ ವೆಟ್ಟೋರಿ 2016ರ ಐಪಿಎಲ್ ಚಾಂಪಿಯನ್ ತಂಡ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 2024ರ ಆವೃತ್ತಿಗೆ ಮಾರ್ಗದರ್ಶನ ನೀಡಲಿದ್ದಾರೆ. ಸನ್‌ರೈಸರ್ಸರ್ ಹಯದರಾಬಾದ್ ತಮಡ ಕಳೆದ ಒಂದೆರಡು ಆವೃತ್ತಿಗಳಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು, ಇದೀಗ ವೆಟ್ಟೋರಿ ಮಾರ್ಗದರ್ಶನದಲ್ಲಿ ಹೊಸ ಆರಂಭವನ್ನು ಎದುರುನೋಡುತ್ತಿದೆ.

ಇನ್ನು ಕಳೆದ ಆವೃತ್ತಿಯಲ್ಲಿ ತಂಡದ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದ ಬ್ರಿಯಾನ್ ಲಾರಾ ಅವರೊಂದಿಗೆ ಮುಂದಿನ ಆವೃತ್ತಿಯಲ್ಲಿ ಮುಂದುವರಿಯದಿರಲು ಫ್ರಾಂಚೈಸಿ ನಿರ್ಧರಿಸಿದೆ. ಐಡೆನ್ ಮಾರ್ಕ್ರಮ್ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ಕಳೆದ ಆವೃತ್ತಿಯಲ್ಲಿ ಕೊನೆಯ ಸ್ಥಾನವನ್ನು ಪಡೆಯುವ ಮೂಲಕ ದಯನೀಯ ಪ್ರದರ್ಶನ ನೀಡಿತ್ತು. 2023ರ ಆವೃತ್ತಿಯಲ್ಲಿ ಬ್ರಿಯಾನ್ ಲಾರಾ ಟಾಮ್ ಮೂಡಿ ಅವರಿಂದ ಕೋಚ್ ಹುದ್ದೆಯನ್ನು ವಹಿಸಿಕೊಂಡಿದ್ದರು. ಈ ಬದಲಾವನೆಯ ಹೊರತಾಗಿಯೂ ತಂಡದ ಪ್ರದರ್ಶನದಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ.
ಸನ್‌ರೈಸರ್ಸ್ ಹೈದರಾಬಾದ್ ತಂಡ ಅದಕ್ಕೂ ಹಿಂದಿನ ಎರಡು ಆವೃತ್ತಿಯಲ್ಲಿಯೂ ಕೂಡ ನೀರಸ ಪ್ರದರ್ಶನವನ್ನೇ ನೀಡಿತ್ತು. 2021 ಹಾಗೂ 2022 ಎರಡು ಆವೃತ್ತಿಯಲ್ಲಿಯೂ 8ನೇ ಸ್ಥಾನವನ್ನು ಪಡೆದುಕೊಂಡಿತ್ತು. ಆದರೆ 2023ರಲ್ಲಿ ಕೇವಲ ನಾಲ್ಕು ಗೆಲುವು ಹಾಗೂ 10 ಸೋಲಿನೊಂದಿಗೆ 10ನೇ ಸ್ಥಾನವನ್ನು ಪಡೆದುಕೊಂಡಿತ್ತು.
ಇನ್ನು ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯ ನೂತನ ಕೋಚ್ ವೆಟ್ಟೋರಿ ಎಡಗೈ ಸ್ಪಿನ್ನರ್ ಹಾಗೂ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಐಪಿಎಲ್‌ನಲ್ಲಿ 34 ಪಂದ್ಯಗಳನ್ನು ಆಡಿರುವ ವೆಟ್ಟೋರಿ 28 ವಿಕೆಟ್ ಹಾಗೂ 121 ರನ್‌ಗಳಿಸಿದ್ದಾರೆ. ಐಪಿಎಲ್ ವೃತ್ತಿ ಜೀವನದಲ್ಲಿ ವೆಟ್ಟೋರಿ ಡೆಲ್ಲಿ ಡೇರ್‌ಡೆವಿಲ್ಸ್(ಈಗಿನ ಡೆಲ್ಲಿ ಕ್ಯಾಪಿಟಲ್ಸ್) ಹಾಗೂ ಆರ್‌ಸಿಬಿ ತಂಡದಲ್ಲಿ ಆಡಿದ್ದರು.
2015ರ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲೆಂಡ್ ಸೋಲು ಕಂಡ ಬಳಿಕ ವೆಟ್ಟೋರಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಣೆ ಮಾಡಿದ್ದರು. ಅದಾದ ಬಳಿಕ ಅವರು ಕೋಚ್ ಆಗಿ ಜವಾಬ್ಧಾರಿ ನಿರ್ವಹಿಸಿದ್ದು ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶದಂತಹ ವಿವಿಧ ರಾಷ್ಟ್ರೀಯ ತಂಡಗಳಿಗೆ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲದೆ ವಿಶ್ವಾದ್ಯಂತ ಹಲವಾರು ಲೀಗ್‌ಗಳಿಗೂ ಅವರು ಕೋಚ್ ಆಘಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಇತ್ತೀಚೆಗಷ್ಟೇ ಆರ್‌ಸಿಬಿ ತಂಡ ಕೂಡ ಮ್ಯಾನೇಜ್‌ಮಂಟ್‌ನಲ್ಲಿ ಸಾಖಷ್ಟು ಬದಲಾವಣೆ ಮಾಡಿಕೊಂಡಿತ್ತು. ಆರ್‌ಸಿಬಿಯ ಕ್ರಿಕೆಟ್ ನಿರ್ದೇಶಕ ಮೈಕ್ ಹೆಸನ್ ಹಾಗೂ ಮುಖ್ಯ ಕೋಚ್ ಸಂಜಯ್ ಬಂಗಾರ್ ತಂಡದಿಮದ ಬೇರ್ಪಟ್ಟಿದ್ದಾರೆ. ಜಿಂಬಾಬ್ವೆಯ ಮಾಜಿ ಕ್ರಿಕೆಟಿಗ ಆಂಡಿ ಫ್ಲವರ್ ಅವರನ್ನು ನೂತನ ಕೋಚ್ ಆಗಿ ನೇಮಿಸಲಾಗಿದೆ.