IPL Controversies: ಶ್ರೀಮಂತ ಲೀಗ್ ಮೆರಗಿಗೆ ಈ ವಿವಾದಗಳೇ ಕಪ್ಪು ಚುಕ್ಕೆ
17 ಆವೃತ್ತಿ ಐಪಿಎಲ್ ಮುಗಿದಿದೆ. 18ನೇ ಆವೃತ್ತಿಯ ಐಪಿಎಲ್ ಇದೇ 22 ರಂದು ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್ ತಂಡಗಳು ಕಾದಾಟ ನಡೆಸಲಿವೆ. ಈ ವೇಳೆ ಎಲ್ಲರ ಕಣ್ಣುಗಳು ಸ್ಟಾರ್ ಆಟಗಾರರ ಮೇಲೆ ನೆಟ್ಟಿರುತ್ತವೆ. ಐಪಿಎಲ್‌ನಲ್ಲಿ ಆಟಗಾರರು ತಮ್ಮ ತಂಡಕ್ಕೆ ಗೆಲುವಿನ ಹಾರ ತೊಡಿಸಲೇ ಬೇಕು ಎಂದು ಜಿದ್ದಿಗೆ ಬಿದ್ದಾಗ, ಮೈದಾನದಲ್ಲಿ ಕೆಲವೊಮ್ಮೆ ಚಿಕ್ಕ ಘರ್ಷಣೆಗಳು ನಡೆಯುತ್ತಿವೆ. ಈ ಜಿದ್ದೆ ದೊಡ್ಡದಾಗಿ ಹಲವು ಬಾರಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ. ಇತಿಹಾಸದ ಪುಟಗಳಲ್ಲಿ ಹುದುಗಿರುವ ಆಯ್ದ ಕೆಲವು ವಿವಾದಗಳ ಬಗ್ಗೆ ಮಾಹಿತಿ ಇಲ್ಲಿದೆ.
ಐಪಿಎಲ್‌ನಲ್ಲಿ ಮಾತ್ರವಲ್ಲದೆ ಇಡೀ ಕ್ರಿಕೆಟ್‌ನಲ್ಲಿಯೇ ಅತಿ ದೊಡ್ಡ ವಿವಾದವೊಂದು 2013 ರಲ್ಲಿ ನಡೆದಿತ್ತು. ಸ್ಪಾಟ್ ಫಿಕ್ಸಿಂಗ್ ಪ್ರಕರಣ ಐಪಿಎಲ್‌ಗೆ ಹತ್ತಿದ್ದ ಅಳಿಸಲಾಗದ ಕಪ್ಪು ಚುಕ್ಕೆ. ಇದ್ರಲ್ಲಿ ಸಿಎಸ್‌ಕೆ ತಂಡದ ಮಾಜಿ ಪ್ರಿನ್ಸಿಪಲ್ ಗುರುನಾಥ್ ಮೇಯಪ್ಪನ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ ಮಾಜಿ ಮಾಲೀಕ ರಾಜ್ ಕುಂದ್ರಾ ಅವರ ಹೆಸರುಗಳು ಕೇಳಿ ಬಂದಿದ್ದವು. ಈ ಪ್ರಕರಣದಲ್ಲಿ, ಆ ಸಮಯದಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿದ್ದ ಎಸ್. ಶ್ರೀಶಾಂತ್, ಅಜಿತ್ ಚಾಂಡಿಲಾ ಮತ್ತು ಅಂಕಿತ್ ಚವಾಣ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಈ ಮೂವರು ಆಟಗಾರರಿಗೆ ಕ್ರಿಕೆಟ್ ಆಡದಂತೆ ಜೀವಮಾನವಿಡೀ ನಿಷೇಧ ಹೇರಲಾಗಿತ್ತು, ಆದರೆ ಈಗ ಬಿಸಿಸಿಐ ಅದನ್ನು ತೆಗೆದುಹಾಕಿದೆ. ಅಲ್ಲದೆ ಈ ಎರಡೂ ತಂಡಗಳಿಗೆ 2 ವರ್ಷ ಐಪಿಎಲ್‌ನಿಂದ ಬ್ಯಾನ್ ಮಾಡಲಾಯಿತು.

ಗೌತಮ್ vs ವಿರಾಟ್
ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ಇಬ್ಬರೂ ಡೆಲ್ಲಿ ಆಟಗಾರರೇ. ಆದ್ರೆ ಇವರು ಐಪಿಎಲ್‌ನಲ್ಲಿ ಬೇರೆ ಬೇರೆ ಪ್ರಾಂಚೈಸಿಗಳ ಪರ ಆಡುತ್ತಿದ್ದರು. ವಿರಾಟ್ ಈಗಲೂ ಆಡುತ್ತಾರೆ. ಗೌತಮ್ ಈಗ ಟೀಮ್ ಇಂಡಿಯಾದ ಕೋಚ್ ಆಗಿದ್ದಾರೆ. ಆದರೆ ಇವರಿಬ್ಬರೂ ಪಂದ್ಯದಲ್ಲಿ ಮುಖಾಮುಖಿ ಆದಾಗ ಜಿದ್ದು ಕಟ್ಟಿಟ್ಟ ಬುತ್ತಿ, ಈ ಇಬ್ಬರ ನಡುವೆ ಮೊದಲ ಘರ್ಷಣೆ 2013ರಲ್ಲಿ ನಡೆದಿತ್ತು. ಈ ವೇಳೆ ಲಕ್ಷ್ಮಿ ಪತಿ ಬಾಲಾಜಿ ವಿರಾಟ್ ಅವರಿಗೆ ಪೆವಿಲಿಯನ್ ದಾರಿ ತೋರಿಸಿದರು. ಈ ವೇಳೆ ಗೌತಿ ಹಾಗೂ ವಿರಾಟ್ ನಡುವೆ ಘರ್ಷಣೆ ನಡೆದಿತ್ತು. ಇದಾದ ಬಳಿಕ 2023ರಲ್ಲಿ ಎಲ್‌ಎಸ್‌ಜಿ ಹಾಗೂ ಆರ್‌ಸಿಬಿ ತಂಡಗಳು ಕಣಕ್ಕೆ ಇಳಿದು ಪಂದ್ಯ ಮುಗಿದಾಗಲೂ ಇಂತಹದ್ದೇ ದೃಷ್ಯ ಕಂಡು ಬಂದಿತ್ತು. ಈ ಪಂದ್ಯವು ಕೊಹ್ಲಿ ಮತ್ತು ನವೀನ್ ಉಲ್-ಹಕ್ ನಡುವಿನ ವಾಗ್ವಾದಕ್ಕೂ ಹೆಸರುವಾಸಿಯಾಗಿದೆ.
ಶಾರೂಖ್‌ಗೆ ಬ್ಯಾನ್
ಬಾಲಿವುಡ್ ಸೂಪರ್ ಸ್ಟಾರ್ ಐಪಿಎಲ್‌ನಲ್ಲಿ ವಿವಾದವನ್ನು ತಮ್ಮ ಮೇಲೆ ಎಳೆದುಕೊಂಡಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸಹ ಮಾಲೀಕರು ಆಗಿರುವ ಶಾರುಖ್ ವಿವಾದಗಳಿಂದ ತಪ್ಪಿಸಿಕೊಂಡಿಲ್ಲ. 2012ರಲ್ಲಿ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂದ್ಯವನ್ನು ವೀಕ್ಷಿಸಲು ಶಾರುಖ್ ಹೋಗಿದ್ದರು. ಪಂದ್ಯದ ನಂತರ, ಶಾರುಖ್ ಖಾನ್ ಅಲ್ಲಿನ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದರು. ಈ ವಿಷಯ ಎಷ್ಟು ದೊಡ್ಡ ದಾಯಿತು ಎಂದರೆ ಶಾರುಖ್ ಖಾನ್ ಅವರನ್ನು ಐದು ವರ್ಷಗಳ ಕಾಲ ವಾಂಖೆಡೆಯಿಂದ ನಿಷೇಧಿಸಲಾಯಿತು.

ನೋಬಾಲ್ ವಿವಾದ
2022ರಲ್ಲಿ ನಡೆದಿದ್ದ ಆ ಒಂದು ಪಂದ್ಯವನ್ನು ಕ್ರಿಕೆಟ್ ಅಭಿಮಾನಿಗಳು ನೆನಪು ಹಾರಲು ಸಾಧ್ಯವೇ ಇಲ್ಲ. ಈ ಪಂದ್ಯದಲ್ಲಿ ಡೆಲ್ಲಿ ರಾಜಸ್ಥಾನ ನೀಡಿದ್ದ 222 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿತ್ತು. ಆಗ ಪಂದ್ಯದ ಕೊನೆಯ ಓವರ್‌ನಲ್ಲಿ ಡೆಲ್ಲಿ ಗೆಲುವಿಗೆ 36 ರನ್ ಅವಶ್ಯಕತೆ ಇತ್ತು. ಓಬೆಡ್ ಮೆಕಾಯ್ ಕೊನೆಯ ಓವರ್ ಬೌಲ್ ಮಾಡಿದರು. ರೋವನ್ ಪಾವೆಲ್ ಬ್ಯಾಟಿಂಗ್ ಮಾಡುತ್ತಿದ್ದರು. ಆರಂಭಿಕ ಮೂರು ಎಸೆತಗಳಲ್ಲಿ ಸಿಕ್ಸರ್ ಬಾರಿಸಿದರು. ನಾಲ್ಕನೇ ಎಸೆತ ವಿವಾದಕ್ಕೆ ಕಾರಣವಾಯಿತು. ಇದು ನೋಬಾಲ್ ಎಂದು ಘೋಷಿಸದಿದ್ದಾಗ ರಿಷಭ್ ಪಂತ್ ಕೋಪಗೊಂಡರು. ಅವರು ತಮ್ಮ ಆಟಗಾರರನ್ನು ಮೈದಾನದಿಂದ ಹಿಂದಕ್ಕೆ ಕರೆಸಿಕೊಂಡರು ಮತ್ತು ಪಂದ್ಯವನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಬೇಕಾಯಿತು.
ಕಪಾಳ ಮೋಕ್ಷ
ಐಪಿಎಲ್‌ನ ಮೊದಲ ಆವೃತ್ತಿಯಲ್ಲೇ ವಿವಾದ ಹುಟ್ಟಿಕೊಂಡಿತ್ತು. ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿದ್ದ ಹರ್ಭಜನ್ ಸಿಂಗ್, ಪಂಜಾಬ್ ಪರ ಆಡುತ್ತಿದ್ದ ಶ್ರೀಶಾಂತ್ ಅವರ ಕಪಾಳಿಗೆ ಬಾರಿಸಿದ್ದರು. ಸಚಿನ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಭಜ್ಜಿ ಈ ಪಂದ್ಯವನ್ನು ಸೋತರು. ಬಳಿಕ ಆಟಗಾರರನ್ನು ಅಭಿನಂದಿಸುವ ವೇಳೆ ಭಜ್ಜಿ, ಶ್ರೀಶಾಂತ್ ಕೆನ್ನೆಗೆ ಹೊಡೆದರು. ಈ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಯಿತು. ಈ ಘಟನೆಯಿಂದ ಬಿಸಿಸಿಐ ಹರ್ಭಜನ್ ಅವರನ್ನು 5 ಏಕದಿನ ಪಂದ್ಯಗಳಿಗೆ ನಿಷೇಧಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications