Irani Cup 2024: ಮುಂಬೈ vs ರೆಸ್ಟ್ ಆಫ್ ಇಂಡಿಯಾ ಪಂದ್ಯ ಡ್ರಾ; ಚಾಂಪಿಯನ್ ಯಾರು ಗೊತ್ತೇ?
ಭಾರೀ ಕುತೂಹಲ ಮೂಡಿಸಿದ್ದ 2024ರ ಇರಾನಿ ಕಪ್ ಮುಕ್ತಾಯವಾಗಿದೆ. ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಸ್ಟೇಡಿಯಂನಲ್ಲಿ ನಡೆದ ರಣಜಿ ಚಾಂಪಿಯನ್ ಮುಂಬೈ ಮತ್ತು ರೆಸ್ಟ್ ಆಫ್ ಇಂಡಿಯಾ ನಡುವಿನ ಇರಾನಿ ಕಪ್ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿದೆ.
ಮೊದಲ ಇನಿಂಗ್ಸ್‌ನಲ್ಲಿ ರೆಸ್ಟ್ ಆಫ್ ಇಂಡಿಯಾ ವಿರುದ್ಧ ಅಜಿಂಕ್ಯ ರಹಾನೆ ನಾಯಕತ್ವದ ಮುಂಬೈ ತಂಡ ಮುನ್ನಡೆ ಸಾಧಿಸಿತ್ತು. ಮುಂಬೈ ತಂಡದಿಂದ ಅಮೋಘ ಬ್ಯಾಟಿಂಗ್ ಪ್ರದರ್ಶನ ಕಂಡುಬಂದಿತ್ತು. ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ಬಾರಿಸುವ ಮೂಲಕ ತಂಡದ ಗೆಲುವಿನ ಆತ್ಮವಿಶ್ವಾಸವನ್ನು ಗಗನಕ್ಕೇರಿಸಿದ ಸರ್ಫರಾಜ್ ಖಾನ್ ಪಂದ್ಯದ ಹೀರೋ ಎನಿಸಿಕೊಂಡರು.

ರೆಸ್ಟ್ ಆಫ್ ಇಂಡಿಯಾ ಪರ ಅಭಿಮನ್ಯು ಈಶ್ವರನ್ ಮತ್ತು ಧ್ರುವ್ ಜುರೆಲ್ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ತಂಡಕ್ಕೆ ಆಸರೆಯಾದರು. ಆದರೆ ನಾಲ್ಕನೇ ದಿನದಂದು ಮುಂಬೈ ಮೊದಲ ಇನಿಂಗ್ಸ್‌ನಲ್ಲಿ ಮಾಡಿದ 537 ರನ್‌ಗಳ ಸ್ಕೋರ್ ಬೆನ್ನಟ್ಟಿದ ರೆಸ್ಟ್ ಆಫ್ ಇಂಡಿಯಾ ತಂಡವು 416 ರನ್ ಗಳಿಸಿ ಆಲೌಟ್ ಆಗಿತ್ತು.
ಹೀಗಾಗಿ ಮೊದಲ ಇನಿಂಗ್ಸ್‌ನಲ್ಲಿ ಮುಂಬೈ 121 ರನ್‌ಗಳ ಮುನ್ನಡೆ ಸಾಧಿಸಿತ್ತು. ಈಗ ಪಂದ್ಯ ಡ್ರಾಗೊಂಡ ಕಾರಣ ಮೊದಲ ಇನ್ನಿಂಗ್ಸ್‌ನಲ್ಲಿ ಮುಂಬೈ ಮುನ್ನಡೆ ಸಾಧಿಸಿದ್ದರಿಂದ ಇರಾನಿ ಕಪ್ ಚಾಂಪಿಯನ್ ಎಂದು ಘೋಷಿಸಲಾಯಿತು.
ಶುಕ್ರವಾರದಂದು ನಾಲ್ಕನೇ ದಿನದಾಟಕ್ಕೆ ಮುಂಬೈ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 153 ರನ್‌ಗಳಿಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡಾಗ, ಅವರ ಒಟ್ಟು ಮುನ್ನಡೆ 274 ರನ್ ಆಗಿತ್ತು. ಪಂದ್ಯದ ಕೊನೆಯ ದಿನದ ಮೊದಲ ಸೆಷನ್‌ನಲ್ಲಿ ರೆಸ್ಟ್ ಆಫ್ ಇಂಡಿಯಾ ಮುಂಬೈ ಅನ್ನು ಬೇಗ ಆಲೌಟ್ ಮಾಡಿದರೆ, ಈ ಪಂದ್ಯ ರೋಚಕವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು.
ಶನಿವಾರ ಆರಂಭವಾದ ಮುಂಬೈನ ಮೊದಲ ಸೆಷನ್‌ನಲ್ಲಿ 171 ರನ್‌ಗಳಿಗೆ ಎಂಟು ವಿಕೆಟ್ ಪತನಗೊಂಡಿದ್ದವು. ಈ ವೇಳೆ ಸುಲಭವಾಗಿ ಮುಂಬೈನ ಎರಡು ವಿಕೆಟ್ ಅನ್ನು ರೆಸ್ಟ್ ಆಫ್ ಇಂಡಿಯಾ ಪಡೆಯಬಹುದು ಎನ್ನಲಾಗಿತ್ತು. ಆದರೆ ಮುಂಬೈನ ಕೆಳಕ್ರಮಾಂಕದ ಬ್ಯಾಟರ್ ತನುಷ್ ಕೋಟ್ಯಾನ್ ಮತ್ತು ಮೋಹಿತ್ ಅವಸ್ಥಿ ತಂಡದ ಪರ ಉತ್ತಮ ರನ್ ಕಲೆ ಹಾಕುವ ಮೂಲಕ ವಿಕೆಟ್ ಕಾಪಾಡಿಕೊಂಡರು.
ಇದಾದ ಬಳಿಕ ಪಂದ್ಯ ಡ್ರಾ ಆಗುವವರೆಗೂ ಈ ಜೋಡಿ ಔಟಾಗದೆ 158 ರನ್‌ಗಳ ಜೊತೆಯಾಟವಾಡಿದರು. ತನುಷ್ 150 ಎಸೆತಗಳಲ್ಲಿ 10 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಅಜೇಯ 114 ರನ್ ಸಿಡಿಸಿ ಮಿಂಚಿದರು. ಮತ್ತೊಂದೆಡೆ ವೇಗಿ ಮೋಹಿತ್ ಅವಸ್ಥಿ ಕೂಡ ತನುಷ್ ಶತಕ ಬಾರಿಸಲು ಸಾಥ್ ನೀಡಿದರು. ಅವರು 93 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ಸಹಾಯದಿಂದ 51 ರನ್ ಕೊಡುಗೆ ನೀಡಿದರು.
ಮುಂಬೈ 8 ವಿಕೆಟ್ ನಷ್ಟಕ್ಕೆ 329 ರನ್ ಕಲೆ ಹಾಕುತ್ತಿದಾಗ ನಾಯಕ ಅಜಿಂಕ್ಯ ರಹಾನೆ ಡೀಕ್ಲೆರ್ ಘೋಷಿಸಿದರು. ಈ ವೇಳೆಗಾಗಲೇ ಪಂದ್ಯ ಡ್ರಾ ಎಂಬುದು ಉಭಯ ತಂಡಗಳ ನಾಯಕರ ಗಮನಕ್ಕೆ ಬಂದಿತ್ತು. ಹೀಗಾಗಿ ರೆಸ್ಟ್ ಆಫ್ ಇಂಡಿಯಾ ನಾಯಕ ಋತುರಾಜ್ ಗಾಯಕ್ವಾಡ್ ಮತ್ತು ಅಜಿಂಕ್ಯ ರಹಾನೆ ಇಬ್ಬರು ಚರ್ಚಿಸಿ ಪಂದ್ಯವನ್ನು ಮುಂದುವರಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಡ್ರಾಗೆ ಒಪ್ಪಿಕೊಂಡರು. ಇಬ್ಬರ ಒಪ್ಪಿಗೆಯ ಆಧಾರದ ಮೇಲೆ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಮುಂಬೈ ತಂಡ ಈ ಬಾರಿ ಇರಾನಿ ಟ್ರೋಫಿ ಚಾಂಪಿಯನ್ ಆಯಿತು. ಇದು ಮುಂಬೈನ 15ನೇ ಇರಾನಿ ಕಪ್ ಗೆಲುವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications