Ire vs Ind: 3ನೇ ಟಿ20 ಪಂದ್ಯಕ್ಕೆ ಇದೆಯಾ ಮಳೆಯ ಆತಂಕ: ಹವಾಮಾನ ವರದಿ
ಭಾರತ ಹಾಗೂ ಐರ್ಲೆಂಡ್ ತಂಡಗಳು ಇಂದು ಟಿ20 ಸರಣಿಯ ಕೊನೆಯ ಪಂದ್ಯವನ್ನಾಡಲಿದೆ. ಡಬ್ಲಿನ್‌ನ ಮೆಲೆಹೈಡ್ ಕ್ರಿಕೆಟ್ ಮೈದಾನದಲ್ಲಿಯೇ ಸರಣಿಯ ಈ ಅಂತಿಮ ಪಂದ್ಯ ಕೂಡ ಆಯೋಜನೆಯಾಗಲಿದೆ. ಟೀಮ್ ಇಂಡಿಯಾ ಈಗಾಗಲೇ 2-0 ಅಂತರದಿಂದ ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದ್ದು ಅಂತಿಮ ಪಂದ್ಯದಲ್ಲಿ ಗೆದ್ದು ವೈಟ್‌ವಾಶ್ ಮಾಡುವತ್ತ ಚಿತ್ತ ನೆಟ್ಟಿದೆ. ಮತ್ತೊಂದೆಡೆ ಐರ್ಲೆಂಡ್ ತವರಿನಲ್ಲಿ ಭಾರತದ ವಿರುದ್ಧ ಒಂದು ಪಂದ್ಯವನ್ನಾದರೂ ಗೆಲ್ಲುವ ಹುಮ್ಮಸ್ಸಿನೊಂದಿಗೆ ಕಣಕ್ಕಿಳಿಯಲಿದೆ.
ಸರಣಿಯ ಎರಡನೇ ಪಂದ್ಯದಲ್ಲಿ ಜಸ್ಸಪ್ರೀತ್ ಬೂಮ್ರಾ ನೇತೃತ್ವದ ಭಾರತ ತಂಡ ಭರ್ಜರಿ 33 ರನ್‌ಗಳ ಅಂತರದ ಗೆಲುವು ಸಾಧಿಸಿತ್ತು. ಆ ಪಂದ್ಯದಲ್ಲಿ ಭಾರತದ ಪರವಾಗಿ ಬ್ಯಾಟಿಂಗ್‌ನಲ್ಲಿ ಋತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್ ಹಾಗೂ ರಿಂಕು ಸಿಂಗ್ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದರು. ಹೀಗಾಗಿ ಭಾರತ 185/5 ರನ್‌ಗಳನ್ನು ಗಳಿಸಲು ಸಾಧ್ಯವಾಗಿತ್ತು. ಇನ್ನು ಮತ್ತೊಂದೆಡೆ ಬೌಲಿಂಗ್‌ನಲ್ಲಿ ನಾಯಕ ಜಸ್ಪ್ರೀತ್ ಬೂಮ್ರಾ, ಪ್ರಸಿದ್ಧ್ ಕೃಷ್ಣ ಹಾಗೂ ರವಿ ಬಿಷ್ಣೋಯ್ ತಲಾ ಎರಡು ವಿಕೆಟ್ ಕಬಳಿಸಿದ ಪರಿಣಾಮ ಐರ್ಲೆಂಡ್ ತಂಡವನ್ನು 152/8 ರನ್‌ಗಳಿಗೆ ಕಟ್ಟಿಹಾಲು ಸಾಧ್ಯವಾಗಿತ್ತು.

ಈಗ ಭಾರತ ಈ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವತ್ತ ಚಿತ್ತ ನೆಟ್ಟಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಜಿತೇಶ್ ಶರ್ಮಾ ಪದಾರ್ಪಣೆ ಮಾಡುವ ಸಾಧ್ಯತೆಯೂ ಇದೆ. ಇನ್ನೊಂದೆಡೆ ಐರ್ಲೆಂಡ್ ತಂಡಕ್ಕೆ ಈ ಪಂದ್ಯದ ಗೆಲುವು ಮಹತ್ವದ್ದಾಗಿದ್ದು ತವರಿನಲ್ಲಿ ವೈಟ್‌ವಾಶ್ ಮುಖಭಂಗವನ್ನು ತಪ್ಪಿಸಿಕೊಳ್ಳಲು ಸರ್ವಪ್ರಯತ್ನ ನಡೆಸಲಿದೆ.
ಪಂದ್ಯಕ್ಕೆ ಇದೆಯಾ ಮಳೆಯ ಆತಂಕ
ಇನ್ನು ಈ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡಲಿದೆಯಾ ಎನ್ನುವುದು ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ. ಸದ್ಯದ ಮಾಹಿತಿಯ ಪ್ರಕಾರ ಈ ಪಂದ್ಯಕ್ಕೆ ಆರಂಭಿಕ ಹಂತದಲ್ಲಿ ಮಳೆ ಅಡ್ಡಿಯುಂಟು ಮಾಡುವ ಸಾಧ್ಯತೆ ಹೆಚ್ಚಿದೆ. ಆದರೆ ಬಳಿಕ ವಾತಾವರಣ ಉತ್ತಮವಾಗುವ ನಿರೀಕ್ಷೆಯಿದೆ. ಮಳೆಗೆ ಸ್ವಲ್ಪ ಪ್ರಮಣದ ಓವರ್ ಕಡಿತವಾದರೂ ಸಂಪೂರ್ಣವಾಗಿ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡುವ ಸಾಧ್ಯತೆ ಇಲ್ಲ.
ಅಕ್ಯುವೆದರ್ ಮಾಹಿತಿಯ ಪ್ರಕಾರ ಮೆಲೆಹೈಡ್ ಕ್ರೀಡಾಂಗಣದ ಸುತ್ತಲಿನ ವಾತಾವರಣದಲ್ಲಿ 18-19 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಲಿದ್ದು ಚಳಿಯ ವಾತಾವರಣವಿರಲಿದೆ. ಈ ಪಂದ್ಯ ಸಂಜೆ 7:30ಕ್ಕೆ ಆರಂಭವಾಗಲಿದ್ದು 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.
ಸಂಪೂರ್ಣ ಸ್ಕ್ವಾಡ್
ಐರ್ಲೆಂಡ್ ತಂಡ: ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಮಾರ್ಕ್ ಅಡೇರ್, ರಾಸ್ ಅಡೇರ್, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಫಿಯಾನ್ ಹ್ಯಾಂಡ್, ಜೋಶ್ ಲಿಟಲ್, ಬ್ಯಾರಿ ಮೆಕಾರ್ಥಿ, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಥಿಯೋ ವ್ಯಾನ್ ವೋರ್ಕಾಮ್, ಬೆನ್ ವೈಟ್, ಕ್ರೇಗ್ ಯಂಗ್
ಭಾರತ ತಂಡ: ಜಸ್ಪ್ರೀತ್ ಬುಮ್ರಾ (ನಾಯಕ), ಋತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಅವೇಶ್ ಖಾನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications