
ಜನವರಿ ತಿಂಗಳಿನಲ್ಲಿ ಐರ್ಲೆಂಡ್ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದ್ದು ಆರು ಪಂದ್ಯಗಳ ಸೀಮಿತ ಓವರ್‌ಗಳ ಸರಣಿ ಆಡಲಿದೆ. ಈ ಸರಣಿಗಾಗಿ ಕ್ರಿಕೆಟ್ ಐರ್ಲೆಂಡ್ ತನ್ನ ತಂಡವನ್ನು ಪ್ರಕಟಿಸಿದೆ. 3 ಪಂದ್ಯಗಳ ಏಕದಿನ ಸರಣಿ ಹಾಗೂ 3 ಪಂದ್ಯಗಳ ಟಿ20 ಸರಣಿಯಲ್ಲಿ ಇತ್ತಂಡಗಳು ಮುಖಾಮುಖಿಯಾಗಲಿದೆ. ಜನವರಿ 12, 14 ಮತ್ತು 15 ರಂದು ಟಿ20 ಪಂದ್ಯಗಳು ನಡೆಯಲಿದ್ದು, ಜನವರಿ 18, 20 ಮತ್ತು 23 ರಂದು ಏಕದಿನ ಪಂದ್ಯಗಳು ನಡೆಯಲಿವೆ.
ಈ ಸರಣಿಯ ಎಲ್ಲಾ ಆರು ಪಂದ್ಯಗಳನ್ನು ಕೂಡ ಹರಾರೆಯಲ್ಲಿರುವ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಆಡಲಾಗುತ್ತದೆ. ಆದರೆ ಐರಿಶ್ ತಂಡ ಮತ್ತು ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್‌ನ ಭಾಗವಾಗಿರುವುದಿಲ್ಲ.
ಐರ್ಲೆಂಡ್ ರಾಷ್ಟ್ರೀಯ ಕ್ರಿಕೆಟ್ ತಂಡ 2023ರಲ್ಲಿ ಸಾಕಷ್ಟು ಸರಣಿಯಲ್ಲಿ ಭಾಗಿಯಾಗಲಿದೆ. ನಾಲ್ಕು ಪ್ರವಾಸಗಳಲ್ಲಿ ಭಾಗವಹಿಸಲಿದ್ದು ಹಲವಾರು ಹೋಮ್ ಸರಣಿಗಳು ಮತ್ತು ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿಯೂ ಭಾಗವಹಿಸಲಿದೆ.
ಇನ್ನು ಜಿಂಬಾಬ್ವೆ ಪ್ರವಾಸಕ್ಕೆ ತಂಡ ಘೋಷಣೆ ಮಾಡಿ ಐರ್ಲೆಂಡ್ ರಾಷ್ಟ್ರೀಯ ಕ್ರಿಕೆಟ್ ತಂಡದ ಆಯ್ಕೆಗಾರ ಆಂಡ್ರ್ಯೂ ವೈಟ್ ಅಧಿಕೃತ ಮಾಧ್ಯಮ ಪ್ರಕಟಣೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಐರ್ಲೆಂಡ್ ತಮಡದ ಸ್ಟಾರ್ ಆಟಗಾರರಾದ ಪಾಲ್ ಸ್ಟಿರ್ಲಿಂಗ್ ಮತ್ತು ಜೋಶ್ ಲಿಟಲ್ ಅವರು ಕ್ರಮವಾಗಿ ವಿದೇಶಿ ಲೀಗ್ ಕ್ರಿಕೆಟ್‌ನಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಪಂದ್ಯಗಳನ್ನು ತಪ್ಪಿಸಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಐರ್ಲೆಂಡ್ ಟಿ20 ತಂಡ: ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಮಾರ್ಕ್ ಅಡೈರ್, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಸ್ಟೀಫನ್ ಡೊಹೆನಿ, ಫಿಯಾನ್ ಹ್ಯಾಂಡ್, ಗ್ರಹಾಂ ಹ್ಯೂಮ್, ಟೈರೋನ್ ಕೇನ್, ಬ್ಯಾರಿ ಮೆಕಾರ್ಥಿ, ನೀಲ್ ರಾಕ್, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಬೆನ್ ವೈಟ್.
ಐರ್ಲೆಂಡ್ ಏಕದಿನ ತಂಡ: ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಮಾರ್ಕ್ ಅಡೈರ್, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಸ್ಟೀಫನ್ ಡೊಹೆನಿ, ಗ್ರಹಾಂ ಹ್ಯೂಮ್, ಟೈರೋನ್ ಕೇನ್, ಜೋಶ್ ಲಿಟಲ್, ಆಂಡಿ ಮೆಕ್‌ಬ್ರೈನ್, ಬ್ಯಾರಿ ಮೆಕಾರ್ಥಿ, ಪಾಲ್ ಸ್ಟಿರ್ಲಿಂಗ್, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್.