ಶ್ರೇಯಸ್ ಪಡೆಗೆ ಶಾಕ್ ನೀಡಿದ ಐರ್ಲೆಂಡ್: ಸೋಲಿಗೆ ಇವೆ 5 ಕಾರಣ
ಐರ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ನಿರಾಸೆ ಅನುಭವಿಸಿದೆ. ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ 34 ರನ್‌ಗಳಿಂದ ಐರ್ಲೆಂಡ್ ವಿರುದ್ಧ ಸೋಲು ಕಂಡಿದೆ. ಈ ಮೂಲಕ ಟಿ20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಬಗ್ಗುಬಡೆದ ಐರ್ಲೆಂಡ್ ಇತಿಹಾಸವನ್ನು ನಿರ್ಮಿಸಿದೆ. ಭಾರತ ತಂಡ ಈ ಸೋಲಿಗೆ ಕಾರಣವೇನು ಎಂಬ ಬಗ್ಗೆ ವರದಿ ಇಲ್ಲಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ನಾಯಕ ಲೋರ್ಕನ್ ಟಕರ್ (50), ಗರೆಥ್ ಡೆಲಾನಿ (49), ಇವರು ಭರ್ಜರಿ ಆಟದ ಬಲದಿಂದ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 182 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಭಾರತ 18.5 ಓವರ್‌ಗಳಲ್ಲಿ 148 ರನ್‌ಗಳಿಗೆ ಆಲೌಟ್ ಆಯಿತು. ಅಭಿಷೇಕ್ ಶರ್ಮಾ ಅವರನ್ನು ಹೊರತು ಪಡಿಸಿದರೆ, ಟೀಮ್ ಇಂಡಿಯಾದ ಯಾವೊಬ್ಬ ಬ್ಯಾಟರ್ ಜವಾಬ್ದಾರಿಯುತ ಆಟವಾಡಲಿಲ್ಲ. ಟೀಮ್ ಇಂಡಿಯಾ ಸೋಲಿಗೆ ಕಾರಣವಾದ ಅಂಶಗಳು ಇಲ್ಲಿವೆ.

ಅತಿಯಾದ ಆತ್ಮವಿಶ್ವಾಸ
ಟೀಮ್ ಇಂಡಿಯಾ ಇತ್ತೀಚಿಗೆ ಭಾರತದಂತಹ ಫ್ಲ್ಯಾಟ್ ಪಿಚ್‌ಗಳಲ್ಲಿ ಐಪಿಎಲ್ ಆಡಿ, ಐರ್ಲೆಂಡ್ ಪ್ರವಾಸ ಕೈಗೊಂಡಿತು. ಅಲ್ಲಿನ ಪಿಚ್‌ಗಳಿಗೆ ಹೊಂದಿಕೊಂಡು ಆಟವಾಡುವಲ್ಲಿ ಆಟಗಾರರು ಎಡವಿದ್ದಾರೆ. ಬ್ಯಾಟರ್‌ಗಳು ರನ್ ಬಾರಿಸುವಲ್ಲಿ ವಿಫಲವಾಗಿದ್ದು, ಸೋಲಿನಲ್ಲಿ ಎದ್ದು ಕಂಡಿತು.
ಪ್ರಸಿದ್ಧ್ ಕೃಷ್ಣ ದುಬಾರಿ ಬೌಲಿಂಗ್
ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರಿಗೆ ಟಿ20 ತಂಡದಲ್ಲಿ ಸ್ಥಾನ ಲಭಿಸಿತು. ಅನುಭವಿ ಬೌಲರ್‌ಗಳ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಇವರ ಮೇಲಿತ್ತು. ಆದರೆ ಇವರು ರನ್‌ಗಳಿಗೆ ಕಡಿವಾಣ ಹಾಕದೆ ರನ್ ನೀಡಿ ಕೈ ಸುಟ್ಟುಕೊಂಡರು. ಇವರು ಇನಿಂಗ್ಸ್‌ನ 17ನೇ ಓವರ್‌ನಲ್ಲಿ 27 ರನ್ ಬಿಟ್ಟುಕೊಟ್ಟರು.
ವಾಷಿಂಗ್ಟನ್ ಸುಂದರ್ ಆಯ್ಕೆ
ಐರ್ಲೆಂಡ್ ತಂಡದಲ್ಲಿ ಆರು ಬಲಗೈ ಬ್ಯಾಟರ್‌ಗಳು ಇದ್ದರೂ ಸಹ ಟೀಮ್ ಇಂಡಿಯಾ ಆಫ್ ಸ್ಪಿನ್ ಬೌಲರ್ ವಾಷಿಂಗ್ಟನ್ ಸುಂದರ್ ಅವರಿಗೆ ಮಣೆ ಹಾಕಿದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಆಲ್‌ರೌಂಡರ್ ಕೋಟಾದಲ್ಲಿ ಸ್ಥಾನ ಪಡೆದ ವಾಷಿಂಗ್ಟನ್ ಬೌಲಿಂಗ್‌ನಲ್ಲಿ ಒಂದೇ ಓವರ್‌ನಲ್ಲಿ 19 ರನ್ ನೀಡಿದರೆ, ಬ್ಯಾಟಿಂಗ್‌ನಲ್ಲಿ 9 ರನ್ ಬಾರಿಸಿದರು.
ಜವಾಬ್ದಾರಿ ಮರೆತ ಬ್ಯಾಟರ್ಸ್
ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾದ ಪರ ಅಭಿಷೇಕ್ ಶರ್ಮಾ ಅವರನ್ನು ಹೊರತು ಪಡಿಸಿದರೆ, ಉಳಿದ ಯಾವೊಬ್ಬ ಬ್ಯಾಟರ್ ನೆಲಕಚ್ಚಿ ನಿಂತು ಬ್ಯಾಟಿಂಗ್ ಮಾಡಲಿಲ್ಲ. ಸ್ಟಾರ್ ಆಟಗಾರ ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ತಿಲಕ್ ವರ್ಮಾ, ನಾಯಕ ಶ್ರೇಯಸ್ ಅಯ್ಯರ್ ರನ್ ಕಲೆ ಹಾಕುವಲ್ಲಿ ವಿಫಲವಾಗಿದ್ದು, ಸೋಲಿಗೆ ಪ್ರಮುಖ ಕಾರಣವಾಯಿತು.
ವೈಭವ್ ಸೂರ್ಯವಂಶಿಗೆ ಅವಕಾಶ ನೀಡದಿರುವುದು
ಐಪಿಎಲ್‌ನಲ್ಲಿ ಮಿಂಚು ಹರಿಸಿ ಭಾರತ 'ಎ' ತಂಡದ ಸ್ಥಿರ ಪ್ರದರ್ಶನ ನೀಡಿದ್ದ ವೈಭವ್ ಸೂರ್ಯವಂಶಿ ಅವರಿಗೆ ಅವಕಾಶ ಸಿಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಟೀಮ್ ಇಂಡಿಯಾ ಇವರಿಗೆ ಅವಕಾಶ ನೀಡದೆ ಇರುವುದು ನಿಜಕ್ಕೂ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. 15 ವರ್ಷದ ವೈಭವ್ ಸೂರ್ಯವಂಶಿಗೆ ಮುಂದಿನ ಪಂದ್ಯದಲ್ಲಾದ್ರೂ ಅವಕಾಶ ಸಿಗುತ್ತದಾ ಎಂಬ ಪ್ರಶ್ನೆ ಮೂಡಿದೆ.
ಐರ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಎರಡನೇ ಪಂದ್ಯವನ್ನು ಭಾನುವಾರ ಆಡಲಿದೆ. ಈ ಪಂದ್ಯವನ್ನು ಗೆದ್ದು ಸರಣಿ ಸಮಬಲ ಸಾಧಿಸುವ ಇರಾದೆ ಶ್ರೇಯಸ್ ಅಯ್ಯರ್ ಪಡೆಯದ್ದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications

