ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ಅಜಿಂಕ್ಯ ರಹಾನೆ ಟೀಮ್ ಇಂಡಿಯಾಕ್ಕೆ ಮರಳುವ ಕನಸು ದೂರ ಸರಿಯುವಂತೆ ಕಾಣುತ್ತಿದೆ. ಅಲ್ಲದೆ ಅವರು ಕಂಡ ಕನಸು ಕನಸಾಗಿಯೇ ಉಳಿಯುವಂತೆ ಕಾಣುತ್ತಿದೆ.
ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಕಮ್‌ಬ್ಯಾಕ್ ಮಾಡುವ ಆಸೆಯನ್ನು ಹೊಂದಿದ್ದ, ಅಜಿಂಕ್ಯ ರಹಾನೆ ಆಸೆ ಕೈ ಹಿಡಯುತ್ತಿಲ್ಲ. ರಣಜಿ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ಅಜಿಂಕ್ಯ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ತಾವಾಡಿದ ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ರಹಾನೆ ಸೊನ್ನೆ ಸುತ್ತಿದರು. ಈ ಮೂಲಕ ನಿರಾಸೆ ಅನುಭವಿಸಿದರು.

ರಹಾನೆ ಇತ್ತೀಚೆಗೆ ತಂಡಕ್ಕೆ ಮರಳಲು ಬಯಸುವುದಾಗಿ ಮತ್ತು ಭಾರತಕ್ಕಾಗಿ 100 ಟೆಸ್ಟ್ ಪಂದ್ಯಗಳನ್ನು ಆಡುವುದು ನನ್ನ ಕನಸು ಎಂದು ಹೇಳಿದರು. ಆದರೆ ರಹಾನೆ ಅವರ ಈ ಕನಸು ನನಸಾಗುವ ಸಾಧ್ಯತೆಗಳು ಬಹುತೇಕ ಕಡಿಮೆ ಆಗಿವೆ. ರಣಜಿ ಟ್ರೋಫಿಯಲ್ಲಿ ರಹಾನೆ ಸತತ ಎರಡು ಪಂದ್ಯಗಳಲ್ಲಿ ಖಾತೆ ತೆರೆಯದೆ ಔಟಾಗಿದ್ದಾರೆ. ಆಂಧ್ರಪ್ರದೇಶ ವಿರುದ್ಧ ಮೊದಲ ಎಸೆತದಲ್ಲಿ ಖಾತೆ ತೆರೆಯದೆ ಔಟಾದ ರಹಾನೆ ನಂತರ ಕೇರಳ ವಿರುದ್ಧವೂ ಮೊದಲ ಎಸೆತದಲ್ಲಿಯೇ ಶೂನ್ಯ ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.
ಕಳಪೆ ಪ್ರದರ್ಶನದ ಕಾರಣ 2022 ರಲ್ಲಿ ಅಜಿಂಕ್ಯ ರಹಾನೆ ಅವರನ್ನು ಕೈಬಿಡಲಾಗಿತ್ತು. ಇದೀಗ ಯುವ ಆಟಗಾರರಿಗೆ ಅವಕಾಶ ನೀಡಲು ತಂಡದ ಆಡಳಿತ ಮಂಡಳಿ ನಿರ್ಧರಿಸಿದೆ. ಆದರೆ, ಶ್ರೇಯಸ್ ಅಯ್ಯರ್ ಗಾಯಗೊಂಡಿದ್ದರಿಂದ, ಅಜಿಂಕ್ಯ ರಹಾನೆ ತಂಡಕ್ಕೆ ಮರಳಿದರು. ಆದರೆ ಕೇವಲ ಮೂರು ಟೆಸ್ಟ್‌ಗಳ ನಂತರ, ರಹಾನೆ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡದ ಕಾರಣ ತಂಡದಿಂದ ಕೈಬಿಡಲಾಯಿತು.

ಇದೀಗ ರಣಜಿ ಟ್ರೋಫಿಯಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ಅಜಿಂಕ್ಯ ರಹಾನೆ ತಂಡದಲ್ಲಿ ಪುನರಾಗಮನ ಮಾಡುವ ಕೊನೆಯ ಅವಕಾಶವೂ ಮುಚ್ಚಿಹೋದಂತೆ ಕಾಣುತ್ತಿದೆ. ರಹಾನೆ ತಂಡಕ್ಕೆ ಮರಳುವ ಸಾಧ್ಯತೆ ಕಾಣುತ್ತಿಲ್ಲ.
ಸದ್ಯ ಮಧ್ಯಮ ಕ್ರಮಾಂಕದಲ್ಲಿ ಟೀಂ ಇಂಡಿಯಾಗೆ ಹಲವು ಆಯ್ಕೆಗಳಿವೆ. ಕಳೆದ ಎರಡು ವರ್ಷಗಳಿಂದ ಶ್ರೇಯಸ್ ಅಯ್ಯರ್ ಅವರನ್ನು 5ನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಇಲ್ಲಿಯವರೆಗೆ, ಅಯ್ಯರ್ 12 ಟೆಸ್ಟ್‌ಗಳಲ್ಲಿ 707 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಅಯ್ಯರ್‌ಗೆ ಅವಕಾಶ ಸಿಗುವುದು ಖಚಿತ.
ದಕ್ಷಿಣ ಆಫ್ರಿಕಾ ವಿರುದ್ಧ ಮಧ್ಯಮ ಕ್ರಮಾಂಕದಲ್ಲಿ ಆಡುವಾಗ ಕೆಎಲ್ ರಾಹುಲ್ ಕೂಡ ಶತಕ ಗಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಕೆಎಲ್ ರಾಹುಲ್ ಆಡುವುದು ಬಹುತೇಕ ಖಚಿತವಾಗಿದೆ.
ಅಜಿಂಕ್ಯ ರಹಾನೆ 85 ಟೆಸ್ಟ್ ಪಂದ್ಯಗಳ 144 ಇನ್ನಿಂಗ್ಸ್‌ಗಳಲ್ಲಿ 38.46ರ ಸರಾಸರಿಯಲ್ಲಿ 5077 ರನ್ ಸಿಡಿಸಿದ್ದಾರೆ. ಈ ಅವಧಿಯಲ್ಲಿ 12 ಶತಕ ಹಾಗೂ 26 ಅರ್ಧಶತಕ ಬಾರಿಸಿದ್ದಾರೆ. ಇನ್ನು ಇಂಗ್ಲೆಂಡ್ ವಿರುದ್ಧ ರಹಾನೆ 21 ಪಂದ್ಯಗಳಲ್ಲಿ 840 ರನ್ ಬಾರಿಸಿದ್ದಾರೆ. 22.70 ಸರಾಸರಿಯನ್ನು ಹೊಂದಿದ್ದು, 1 ಶತಕ ಹಾಗೂ 6 ಅರ್ಧಶತಕಗಳನ್ನು ಸಿಡಿಸಿದ್ದಾರೆ.