ಬ್ರಿಸ್ಬೇನ್‌ನ ಗಬ್ಬಾದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದ ವೀಕ್ಷಕ ವಿವರಣೆ ಸಂದರ್ಭದಲ್ಲಿ ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಜನಾಂಗೀಯ ನಿಂದನೆ ಮಾಡಲಾಗಿದೆ. ಇಂಗ್ಲೆಂಡ್ ಮಾಜಿ ಆಟಗಾರ್ತಿ ಮತ್ತು ಕ್ರಿಕೆಟ್ ವಿಶ್ಲೇಷಕಿ ಇಶಾ ಗುಹಾ ಅವರು ಅವರು ಜಸ್ಪ್ರೀತ್ ಬುಮ್ರಾ ಅವರನ್ನು 'ಪ್ರೈಮೇಟ್' ಪ್ರಭೇದ ಎಂದು ಕರೆಯುವ ಮೂಲಕ ವಿವಾದಕ್ಕೀಡಾಗಿದ್ದಾರೆ. ಇಶಾ ಗುಹಾ ಅವರು ಬುಮ್ರಾ ಅವರಿಗೆ ಬಳಕೆ ಮಾಡಿದ ಒಂದು ಪದ ಭಾರೀ ವಿವಾದಕ್ಕೆ ಕಾರಣವಾಗಿದೆ. ಇದಾದ ಬಳಿಕ ಇಶಾ ಗುಹಾ ಅವರು ಜಸ್ಪ್ರೀತ್ ಬುಮ್ರಾ ಅವರಿಗೆ ಕ್ಷಮೆ ಕೇಳಿದ್ದಾರೆ.
ಗಬ್ಬಾ ಟೆಸ್ಟ್ ಪಂದ್ಯದ ಎರಡನೇ ದಿನವಾದ ಭಾನುವಾರ ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್‌ನಲ್ಲಿ ಉಸ್ಮಾನ್ ಖವಾಜಾ ಮತ್ತು ನೇಥನ್ ಮೆಕ್‌ಸ್ವೀನಿ ಅವರ ವಿಕೆಟ್ ಅನ್ನು ಜಸ್ಪ್ರೀತ್ ಬುಮ್ರಾ ಕಬಳಿಸಿದರು. ಈ ಸಂದರ್ಭದಲ್ಲಿ ಬುಮ್ರಾ ಅವರ ಪ್ರದರ್ಶನದ ಬಗ್ಗೆ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಹೊಗಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಶಾ ಗುಹಾ ಹೊಗಳುವ ಬರದಲ್ಲಿ ಬುಮ್ರಾ ಅತ್ಯಮೂಲ್ಯ 'ಪ್ರೈಮೇಟ್' ಪ್ರಭೇದ ಎಂದು ಹೇಳಿದರು.

ಇಶಾ ಗುಹಾ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಭಾರೀ ಚರ್ಚೆಗೆ ಕಾರಣವಾಯಿತು. ನಂತರ ಇಶಾ ಗುಹಾ ತಮ್ಮ ಜನಾಂಗೀಯ ಹೇಳಿಕೆ ಕುರಿತು ಕ್ಷಮೆಯಾಚಿಸಿದರು. 'ಜಸ್ಪ್ರೀತ್ ಬುಮ್ರಾ ಅವರ ಅಮೋಘ ಪ್ರದರ್ಶನವನ್ನು ವಿವರಿಸುವ ವೇಳೆ ತಪ್ಪಾದ ಪದ ಬಳಕೆ ಮಾಡಿದ್ದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ಅವರು ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಇಶಾ ಗುಹಾ ಟಿವಿ ನಿರೂಪಕರಾಗಿ ಮತ್ತು ರೇಡಿಯೋ ಪ್ರಸಾರಕರಾಗಿ ಕೆಲಸ ಮಾಡುತ್ತಿದ್ದಾರೆ. ಗುಹಾ ಅವರು ಇಂಗ್ಲೆಂಡ್ ತಂಡದ ಮಾಜಿ ಆಟಗಾರ್ತಿ. ಇಂಗ್ಲೆಂಡ್ ಪರ ಅವರು 100 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆದ ನಂತರ ಅವರು ಟೆಸ್ಟ್ ಪಂದ್ಯಗಳಲ್ಲಿ ಕಾಮೆಂಟರಿ ಮಾಡುವ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಇಶಾ ಗುಹಾ ಮೂಲತಃ ಭಾರತದವರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡದ ಪರ ಆಡಿದ ಭಾರತದ ಮೊದಲ ಮಹಿಳಾ ಆಟಗಾರ್ತಿ ಎನಿಸಿಕೊಂಡಿದ್ದಾರೆ.
ಇಶಾ ಗುಹಾ ಹುಟ್ಟುವ ಮೊದಲೇ ಪೋಷಕರು ಕೋಲ್ಕತ್ತಾದಿಂದ ಇಂಗ್ಲೆಂಡ್‌ಗೆ ಸ್ಥಳಾಂತರಗೊಂಡಿದ್ದರು. ಇಶಾ ಗುಹಾ 1985ರ ಮೇ ತಿಂಗಳಲ್ಲಿ ಇಂಗ್ಲೆಂಡ್‌ನ ಬಕಿಂಗ್‌ಹ್ಯಾಮ್‌ಶೈರ್‌ನಲ್ಲಿ ಜನಿಸಿದರು. ತಮ್ಮ 8ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದ ಅವರು 13ನೇ ವಯಸ್ಸಿನಲ್ಲಿ ಇಂಗ್ಲೆಂಡ್‌ನ ಡೆವಲಪ್ಮೆಂಟ್ ತಂಡಕ್ಕೆ ಆಯ್ಕೆಯಾದರು. ಪ್ರಸ್ತುತ ಅವರ ಒಟ್ಟು ಆಸ್ತಿ ಮೌಲ್ಯ 12.6 ಕೋಟಿ ರೂ. 2018ರಲ್ಲಿ ಪ್ರಸಿದ್ಧ ಗಾಯಕ ರಿಚರ್ಡ್ ಥಾಮಸ್ ಅವರನ್ನು ಮದುವೆಯಾಗಿದ್ದಾರೆ.