ಟೀಮ್ ಇಂಡಿಯಾದ ಭರವಸೆಯ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅವರಿಗೆ ತಂಡದಲ್ಲಿ ಸ್ಥಾನ ಲಭಿಸದೇ ಬಹಳ ದಿನಗಳೇ ಕಳದಿವೆ. ಅವರ ಕ್ರಿಕೆಟ್ ವೃತ್ತಿ ಜೀವನ ಇನ್ನು ಯಾವ ಹಂತಕ್ಕೆ ಬಂದು ನಿಲ್ಲುತ್ತದೆ ಎಂಬ ಅನುಮಾನಗಳು ಆರಂಭವಾಗಿವೆ. ಅವರು ಯಾವಾಗ ರಾಷ್ಟ್ರೀಯ ತಂಡಕ್ಕೆ ಮರಳುತ್ತಾರೆ ಎಂಬ ಚರ್ಚೆಯೂ ನಡೆಯುತ್ತಿದೆ. ಇಶಾನ್ ಭಾರತಕ್ಕಾಗಿ ಎಲ್ಲಾ ಮೂರು ಸ್ವರೂಪಗಳಲ್ಲಿ ಪದಾರ್ಪಣೆ ಮಾಡಿದ್ದಾರೆ.
ಇಶಾನ್ ಕಿಶನ್, ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಭರವಸೆ ಮೂಡಿಸಿದ ಆಟಗಾರ. ಇವರು ಸಿಕ್ಕ ಅವಕಾಶದಲ್ಲಿ ಅಬ್ಬರಿಸಿದ್ದರು. ಆದರೆ ಕಳೆದ ಕೆಲವು ಪಂದ್ಯಗಳಲ್ಲಿ ರನ್ ಬರವನ್ನು ಅನುಭಿಸವಿಸುತ್ತಿದ್ದಾರೆ. ಇಶಾನ್ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕವನ್ನೂ ಸಹ ಬಾರಿಸಿದ್ದಾರೆ. ಕೆಲವೇ ಎಸೆತಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯ ಅವರಿಗಿದೆ. ಇದೀಗ ಇಶಾನ್ ಬಗ್ಗೆ ಒಂದು ದೊಡ್ಡ ಅಪ್ಡೇಟ್ ಹೊರಬಿದ್ದಿದೆ.

ಕ್ರಿಕ್‌ಬಜ್ ವರದಿಯ ಪ್ರಕಾರ, ಇಶಾನ್ ಕಿಶನ್ ಗುಜರಾತ್‌ನ ಬರೋಡಾದಲ್ಲಿ ಅಭ್ಯಾಸ ಮತ್ತು ವರ್ಕ್‌ಔಟ್ ಮಾಡುತ್ತಿರುವುದು ತಿಳಿದು ಬಂದಿದೆ. ಅವರು ಈ ನಗರದಲ್ಲಿ ಕೆಲವು ಸಮಯದಿಂದ ಇದ್ದಾರೆ ಎಂದು ನಂಬಲಾಗಿದೆ. ಇಶಾನ್ ಕಿಶನ್ ಅವರೊಂದಿಗೆ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಕೂಡ ಅಭ್ಯಾಸ ನಡೆಸುತ್ತಿದ್ದಾರೆ ಎಂಬ ವರದಿಗಳೂ ಬಂದಿವೆ. ಹಾರ್ದಿಕ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದಾರೆ ಮತ್ತು ಇಶಾನ್ ಐಪಿಎಲ್‌ನಲ್ಲಿ ಮುಂಬೈ ಪರ ಆಡುತ್ತಿದ್ದಾರೆ. ಆದರೆ ಸದ್ಯ ಇಶಾನ್ ಯಾವಾಗ ರಾಷ್ಟ್ರೀಯ ತಂಡಕ್ಕೆ ಮರಳುತ್ತಾರೆ ಎಂಬುದರ ಬಗ್ಗೆ ಏನೂ ತಿಳಿದಿಲ್ಲ.
ಕಳೆದ ವರ್ಷ ನವೆಂಬರ್‌ನಿಂದ ಇಶಾನ್ ಕಿಶನ್ ಯಾವುದೇ ಪಂದ್ಯವನ್ನು ಆಡಿಲ್ಲ. ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ತಂಡದಲ್ಲಿ ಆಯ್ಕೆಯಾದರು. ಆದರೆ ಅವರೇ ತಮ್ಮ ಹೆಸರನ್ನು ಹಿಂತೆಗೆದುಕೊಂಡರು. ಇದರ ನಂತರ, ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ಅವರನ್ನು ಮತ್ತೆ ಕೈಬಿಡಲಾಯಿತು. ಅವರು ದೇಶೀಯ ಕ್ರಿಕೆಟ್‌ನಲ್ಲಿಯೂ ಆಡಲಿಲ್ಲ.
ಕ್ರಿಕ್‌ಬಜ್ ವರದಿಯ ಪ್ರಕಾರ, ಫೆಬ್ರವರಿ 9 ರಿಂದ ಹರಿಯಾಣ ತಂಡದ ವಿರುದ್ಧದ ಪಂದ್ಯದಲ್ಲಿ ಇಶಾನ್ ಜಾರ್ಖಂಡ್ ತಂಡದ ಭಾಗವಾಗುವುದಿಲ್ಲ. ಇಶಾನ್ ಕಿಶನ್ ವಿಷಯದ ಬಗ್ಗೆ ನಾನು ಹೆಚ್ಚು ಚರ್ಚಿಸಲು ಬಯಸುವುದಿಲ್ಲ ಎಂದು ರಾಹುಲ್ ದ್ರಾವಿಡ್ ಇತ್ತೀಚೆಗೆ ಹಿಂದಿರುಗಿದ ನಂತರ ಹೇಳಿದರು.

ಇಶಾನ್ ಕಿಶನ್ ಅವರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ಸ್ಥಿರವಾಗಿಲ್ಲ. ಹೀಗಾಗಿ ಅವರಿಗೆ ತಂಡದಿಂದ ಕೈ ಬಿಡಲಾಗಿತ್ತು. ಅಲ್ಲದೆ ಟೀಮ್ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಇಶಾನ್ ಅವರಿಗೆ ರಣಜಿ ಟ್ರೋಫಿಯಲ್ಲಿ ಬ್ಯಾಟ್ ಮಾಡುವಂತೆ ತಿಳಿಸಿದ್ದರು. ಆದರೆ ಕೋಚ್ ದ್ರಾವಿಡ್‌ನ್ನು ಮೀರಿ ಇಶಾನ್ ಮೈದಾನಕ್ಕೆ ಇಳಿಯಲಿಲ್ಲ. ಇದರಿಂದ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವುದು ಕೊಂಚ ದೂರ ಸರಿಯಿತು. ಒಂದು ವೇಳೆ ಇಶಾನ್ ರಣಜಿ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದೇ ಆಗಿದಲ್ಲಿ ಅವರನ್ನು, ಇಂಗ್ಲೆಂಡ್ ವಿರುದ್ಧ ಕೊನೆಯ ಮೂರು ಟೆಸ್ಟ್ ಗೆ ತಂಡ ಸೇರುವ ಅವಕಾಶವು ಹೆಚ್ಚಿದ್ದವು. ಆದರೆ ಇಶಾನ್ ಕೋಚ್ ಮಾತಿಗೆ ಸೊಪ್ಪು ಹಾಕಲಿಲ್ಲ.
ಇಶಾನ್ ಕಿಶನ್ ಅವರು ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಕನಸಿನಲ್ಲಿದ್ದಾರೆ. ಈ ಹಾದಿ ಇಶಾನ್ ಕಿಶನ್‌ಗೆ ಸುಲಭವಿಲ್ಲ. ಐಪಿಎಲ್‌ನಲ್ಲಿ ಸಿಗುವ ಅವಕಾಶದಲ್ಲಿ ರನ್ ಶಿಖರ್ ಏರಬೇಕಿದೆ. ಅಂದಾಗ ಮಾತ್ರ ಟಿ20 ವಿಶ್ವಕಪ್‌ನಲ್ಲಿ ತಂಡ ಸೇರುವ ಕನಸು ನನಸಾಗುತ್ತದೆ.