ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ಇಶಾನ್ ಕಿಶನ್ ಸದ್ಯ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ದುಲೀಪ್ ಟ್ರೋಫಿಯಲ್ಲಿ ಅವರು ಅಚ್ಚರಿಯ ಎಂಟ್ರಿ ಕೊಟ್ಟು ಭರ್ಜರಿ ಶತಕ ಬಾರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಭಾರತ ಸಿ ಮತ್ತು ಭಾರತ ಬಿ ನಡುವಿನ ಪಂದ್ಯವು ಅನಂತಪುರದ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತ ಸಿ ಪರ ಇಶಾನ್ ಕಿಶನ್ 4ನೇ ಕ್ರಮಾಂಕದಲ್ಲಿ ಅಮೋಘ ಶತಕ ಸಿಡಿಸಿದ್ದಾರೆ.

ಇಶಾನ್ ಕಿಶನ್ ಎದುರಿಸಿದ 126 ಎಸೆತಗಳಲ್ಲಿ 14 ಬೌಂಡರಿ ಮತ್ತು 3 ಸಿಕ್ಸರ್‌ಗಳ ಮೂಲಕ 111 ರನ್ ಗಳಿಸಿ ಬಿಸಿಸಿಐ ಆಯ್ಕೆ ಸಮಿತಿಯ ಗಮನ ಸೆಳೆದಿದ್ದಾರೆ. ಅವರ ಈ ಶತಕದಿಂದ ಕುಸಿದಿದ್ದ ಭಾರತ ಸಿ ತಂಡ ಈಗ ಬಲಿಷ್ಠ ಸ್ಕೋರ್‌ನತ್ತ ಸಾಗುತ್ತಿದೆ.
ಇಶಾನ್ ಕಿಶನ್ ದುಲೀಪ್ ಟ್ರೋಫಿಯ ಮೊದಲ ಸುತ್ತಿನ ಪಂದ್ಯಗಳ ಭಾಗವಾಗಿರಲಿಲ್ಲ. ಏಕೆಂದರೆ ಬುಚ್ಚಿ ಬಾಬು ಟೂರ್ನಿಯಲ್ಲಿ ಜಾರ್ಖಂಡ್ ಪರ ಆಡುವಾಗ ಬೆನ್ನುನೋವಿನಿಂದ ಬಳಲುತ್ತಿದ್ದರು. ಆದರೆ ದುಲೀಪ್ ಟ್ರೋಫಿ ಎರಡನೇ ಸುತ್ತಿನಲ್ಲಿ ಭಾರತ ಸಿ ತಂಡದ ಪ್ಲೇಯಿಂಗ್-11ರಲ್ಲಿ ಸ್ಥಾನ ಪಡೆದ ಇಶಾನ್ ಕಿಶನ್ ಎಲ್ಲರೂ ಆಶ್ಚರ್ಯಚಕಿತರಾಗಿಸಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಈಗಾಗಲೇ ಟೀಮ್ ಇಂಡಿಯಾವನ್ನು ಬಿಸಿಸಿಐ ಪ್ರಕಟಿಸಿದೆ. ದುಲೀಪ್ ಟ್ರೋಫಿಯ ಮೊದಲ ಸುತ್ತಿನಲ್ಲಿ ಆಡಿದ ಕೆಲವು ಆಟಗಾರರು ಬಾಂಗ್ಲಾ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿದ್ದರು. ಇದಾದ ನಂತರ ಎರಡನೇ ಸುತ್ತಿಗೆ ತಂಡಗಳಲ್ಲಿ ಬದಲಾವಣೆಗಳಿದ್ದವು. ಆದರೆ, ಭಾರತ ಸಿ ತಂಡದಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ಈಗ ಇಶಾನ್ ಕಿಶನ್ ಸಿಡಿಲಬ್ಬರದ ಇನ್ನಿಂಗ್ಸ್ ಆಡಿ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಮೂಲಕ ಟೀಮ್ ಇಂಡಿಯಾ ಮರಳುವ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ.
ಬುಚ್ಚಿ ಬಾಬು ಟೂರ್ನಿಯಲ್ಲಿ ಕಿಶನ್ ಜಾರ್ಖಂಡ್ ತಂಡವನ್ನು ಮುನ್ನಡೆಸಿದ್ದರು. ಈ ಟೂರ್ನಿಯ ಪಂದ್ಯವೊಂದರಲ್ಲಿ ಅವರು ಅಮೋಘ ಶತಕ ಸಿಡಿಸಿದ್ದರು. ಇದೇ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಸತತ ಎರಡು ಸಿಕ್ಸರ್ ಬಾರಿಸಿ ತಂಡಕ್ಕೆ ಗೆಲುವು ತಂದು ಕೊಟ್ಟಿದ್ದರು.
ಇಶಾನ್ ಕಿಶನ್ 2023ರಿಂದ ಯಾವುದೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. 2023ರ ಜುಲೈ ತಿಂಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಕ್ವೀನ್ಸ್ ಪಾರ್ಕ್ ಓವಲ್ ಟೆಸ್ಟ್‌ನಲ್ಲಿ ಅವರು ಕೊನೆಯ ಬಾರಿಗೆ ಟೀಮ್ ಇಂಡಿಯಾ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದು, ಅಂದಿನಿಂದ ಅವರು ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ.