ಭಾರತ ಹಾಗೂ ಶ್ರೀಲಂಕಾದ ಆತಿಥ್ಯದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ಟಿ20 ವಿಶ್ವಕಪ್ ಆಯೋಜಿಸಲಾಗುತ್ತಿದೆ. ಈ ವೇಳೆ ಹಲವು ಯುವ ಆಟಗಾರರು ತಂಡವನ್ನು ಸೇರುವ ಕನಸು ಕಾಣುತ್ತಿದ್ದಾರೆ. ಮತ್ತೆ ಬ್ಲ್ಯೂ ಜೆರ್ಸಿ ತೊಡುವ ಕನಸಿಲ್ಲಿರುವ ಭರವಸೆಯ ಆಟಗಾರ ಇಶಾನ್ ಕಿಶನ್ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆರ್ಭಟಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಹರಿಯಾಣ ವಿರದ್ಧ ಇಶಾನ್ ಕಿಶನ್ ಅಮೋಘ ಶತಕ ಬಾರಿಸಿ ತಂಡಕ್ಕೆ ಆಧಾರವಾಗಿದ್ದಾರೆ.
ಕಳೆದ ಎರಡು ವರ್ಷಗಳಿಂದ ಟೀಮ್ ಇಂಡಿಯಾಕ್ಕೆ ಕಂ ಬ್ಯಾಕ್ ಮಾಡುವ ಕನಸು ಇಶಾನ್ ಕಿಶನ್ ಅವರದ್ದಾಗಿದೆ. ಇಶಾನ್ ಕಿಶನ್ ಈ ವೇಳೆ ದೇಶೀಯ ಟೂರ್ನಿಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾಗಿದ್ದಾರೆ. ದೇಶೀಯ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಜಾರ್ಖಂಡ್ 20 ಓವರ್‌ಗಲ್ಲಿ 3 ವಿಕೆಟ್‌ಗೆ 262 ರನ್ ಸಿಡಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಕುಮಾರ್ ಕುಶಾಗರ್ 8 ಬೌಂಡರಿ, 5 ಸಿಕ್ಸರ್ ಸಹಾಯದಿಂದ 81 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದ್ದಾರೆ.

ಈ ಟೂರ್ನಿಯಲ್ಲಿ ಜಾರ್ಖಂಡ್ ತಂಡವನ್ನು ಮುನ್ನಡೆಸುತ್ತಿರುವ ಇಶಾನ್ ಕಿಶನ್, ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಇವರ ಆಟಕ್ಕೆ ಬ್ರೇಕ್ ಹಾಕುವಲ್ಲಿ ಹರಿಯಾಣ ಬೌಲರ್‌ಗಳ ವಿಫಲರಾದರು. ಇವರು ಬಿಗ್ ಹಿಟ್‌ಗಳನ್ನು ಬಾರಿಸುತ್ತಲೇ ತಂಡಕ್ಕೆ ಆಧಾರವಾದರು. ತಾವು ಎದುರಿಸಿದ 24ನೇ ಎಸೆತದಲ್ಲಿ 2 ಬೌಂಡರಿ, 6 ಸಿಕ್ಸರ್ ಸಹಾಯದಿಂದ ಅರ್ಧಶತಕ ಬಾರಿಸಿದ ಇಶಾನ್, ಇದೇ ಲಯವನ್ನು ಮುಂದುವರೆಸಿದರು. ಮುಂದಿನ 21 ಎಸೆತಗಳಲ್ಲಿ 50 ರನ್ ಕಲೆ ಹಾಕಿದ ಇಶಾನ್ ಹರಿಯಾಣಾ ಬೌಲರ್‌ಗಳ ಸವಾಲು ಮೆಟ್ಟಿನಿಂತರು. ಇಶಾನ್ ಈ ಪಂದ್ಯದಲ್ಲಿ ಶತಕ ಬಾರಿಸಲು 45 ಎಸೆತಗಳನ್ನು ತೆಗೆದುಕೊಂಡಿದ್ದಾರೆ.
ಇಶಾನ್ ಕಿಶನ್ 49 ಎಸೆತಗಳಲ್ಲಿ 6 ಬೌಂಡರಿ, 10 ಸಿಕ್ಸರ್ ಸಹಾಯದಿಂದ 101 ರನ್ ಬಾರಿಸಿ ಸುಮಿತ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದರು. ಫೈನಲ್ ಪಂದ್ಯದಲ್ಲಿ ಇಶಾನ್ ಕಿಶನ್ 206ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಇಶಾನ್ ಕಿಶನ್ ಮನಮೋಹಕ ಬ್ಯಾಟಿಂಗ್ ನಡೆಸಿದ್ದಾರೆ. ಇಶನ್ ಈ ಟೂರ್ನಿಯಲ್ಲಿ ಆಡಿದ 10 ಪಂದ್ಯಗಳಲ್ಲಿ 57.44ರ ಸರಾಸರಿಯಲ್ಲಿ 517 ರನ್ ಕಲೆ ಹಾಕಿದ್ದಾರೆ. ಈ ವೇಳೆ 2 ಶತಕ, 2 ಅರ್ಧಶತಕ ಸಿಡಿಸಿದ್ದಾರೆ.