ಆಲ್‌ರೌಂಡರ್ಸ್ ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಅವರ ಶತಕದ ಸಹಾಯದಿಂದ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪದ್ಯದಲ್ಲಿ ಡ್ರಾ ಸಾಧಿಸುವಲ್ಲಿ ಸಫಲವಾಗಿದೆ. ಈ ಮೂಲಕ ಇಂಗ್ಲೆಂಡ್ ಸರಣಿ ಗೆಲುವಿನ ಕನಸು ಕಮರಿದೆ.
ಭಾರತ ಭಾನುವಾರ ಕೊನೆಯ ದಿನದಾಟವನ್ನು ಎರಡನೇ ಇನಿಂಗ್ಸ್‌ನಲ್ಲಿ 2 ವಿಕೆಟ್‌ಗೆ 174 ರನ್‌ಗಳಿಂದ ಆಟ ಮುಂದುವರೆಸಿತು. ನಾಲ್ಕನೇ ದಿನದಾಟ ಅಂತ್ಯಕ್ಕೆ 87 ರನ್ ಬಾರಿಸಿದ್ದ ಕೆಎಲ್ ರಾಹುಲ್, ಕೊನೆಯ ದಿನದಾಟದಲ್ಲಿ ಕೇವಲ 3 ರನ್ ಸಿಡಿಸಿ ಬೆನ್ ಸ್ಟೋಕ್ಸ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಈ ಮೂಲಕ 421 ಎಸೆತಗಳಲ್ಲಿ 188 ರನ್ ಸಿಡಿಸಿ ಮಿಂಚಿತು.

ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಸಂಕಷ್ಟದಲ್ಲಿದ್ದ ತಂಡಕ್ಕೆ ಆಧಾರವಾದರು. ಇವರು ಪ್ರಸಕ್ತ ಟೆಸ್ಟ್ ಸರಣಿಯಲ್ಲಿ ನಾಲ್ಕನೇ ಶತಕ ಬಾರಿಸಿ ಮಿಂಚಿದರು. ಗಿಲ್ 238 ಎಸೆತಗಳಲ್ಲಿ 12 ಬೌಂಡರಿ ಬಾರಿಸಿದ್ದಾಗ 103 ರನ್‌ಗಳಿಗೆ ತಾಳ್ಮೆ ಕಳೆದುಕೊಡರು. ಜೋಫ್ರಾ ಆರ್ಚರ್ ಎಸೆತವನ್ನು ತಪ್ಪಾಗಿ ಗ್ರಹಿಸಿ ವಿಕೆಟ್ ಕೀಪರ್ ಜೇಮಿ ಸ್ಮಿತ್‌ಗೆ ವಿಕೆಟ್ ಒಪ್ಪಿಸಿದರು.
ಟೀಮ್ ಇಂಡಿಯಾದ ಆಲ್‌ರೌಂಡರ್ಸ್‌ಗಳಾದ ವಾಷಿಂಗ್ಟನ್ ಸುಂದರ ಹಾಗೂ ರವೀಂದ್ರ ಜಡೇಜಾ ಜೋಡಿ ಅಮೋಘ ಬ್ಯಾಟಿಂಗ್ ನಡೆಸಿತು. ಈ ಜೋಡಿ 185 ಎಸೆತಗಳಲ್ಲಿ 100 ರನ್‌ಗಳ ಮಾರ್ಕ್ ದಾಟಿತು. ಅಲ್ಲದೆ ಇಂಗ್ಲೆಂಡ್ ಬೌಲರ್‌ಗಳನ್ನು ಕಾಡಿದರು. ಇವರನ್ನು ಕಟ್ಟಿ ಹಾಕಲು ಬೆನ್ ಸ್ಟೋಕ್ಸ್ ಕ್ಲೋಸ್ ಫೀಲ್ಡರ್‌ಗಳನ್ನು ನಿಲ್ಲಿಸಿದರೆ, ಬೌಂಡರಿಗಳನ್ನು ಬಾರಿಸಿ ರನ್ ಕಲೆ ಹಾಕಿದರು. ಅಲ್ಲದೆ ಉತ್ತಮ ಡಿಫೆನ್ಸ್ ಮಾಡಿ ಎಲ್ಲರ ಗಮನ ಸೆಳೆದರು. ಈ ಜೋಡಿ ಚಹಾ ವಿರಾಮದ ವೇಳೆಗೆ 4 ವಿಕೆಟ್‌ಗೆ 322 ರನ್ ಕಲೆ ಹಾಕಿತು. ಉಭಯ ಆಟಗಾರರು ಅರ್ಧಶತಕ ಬಾರಿಸಿದರು.
ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಜೋಡಿ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿ ತಂಡವನ್ನು ಸೋಲಿನಿಂದ ಪಾರು ಮಾಡಿತು. ಈ ಜೋಡಿ 334 ಎಸೆತಗಳಲ್ಲಿ ಅಜೇಯ 203 ರನ್ ಸಿಡಿಸಿತು. ಈ ವೇಳೆ ಇಬ್ಬರೂ ಆಲ್‌ರೌಂಡರ್ಸ್ ಶತಕ ಬಾರಿಸಿ ಮಿಂಚಿದರು. ಜಡೇಜಾ 185 ಎಸೆತಗಳಲ್ಲಿ 13 ಬೌಂಡರಿ, 1 ಸಿಕ್ಸರ್ ಸಹಾಯದಿದ ಅಜೇಯ 107 ರನ್ ಬಾರಿಸಿದರೆ, ವಾಷಿಂಗ್ಟನ್ ಸುಂದರ್ 206 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ನೆರವಿನಿಂದ ಅಜೇಯ 101 ರನ್ ಸಿಡಿಸಿದರು. ಈ ಜೋಡಿ ಇನಿಂಗ್ಸ್‌ನ 143ನೇ ಓವರ್‌ನಲ್ಲಿ ಬ್ಯಾಟ್ ಮಾಡುತ್ತಿದ್ದಾಗ ಪದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.
ಕೊನೆಯ ದಿನದಾಟದಲ್ಲಿ ಇಂಗ್ಲೆಂಡ್ 80 ಓವರ್‌ಗಳ ಬೌಲಿಂಗ್ ನಡೆಸಿದರೂ ಕೇವಲ 2 ವಿಕೆಟ್ ಪಡೆಯುವಲ್ಲಿ ಸಫಲವಾಯಿತು. ಭಾನುವಾರ ಇಂಗ್ಲೆಂಡ್ ತಂಡದ ಪರ ಬೆನ್ ಸ್ಟೋಕ್ಸ್ ಹಾಗೂ ಜೋಫ್ರಾ ಆರ್ಚರ್ ಯಶಸ್ವಿ ಬೌಲರ್ ಎನಿಸಿಕೊಂಡರು.
ಗಾಯದ ಹೊರತಾಗಿಯೂ ಅಮೋಘ ಪ್ರದರ್ಶನ ನೀಡಿದ ಬೆನ್ ಸ್ಟೋಕ್ಸ್ ಮುಡಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು.