Yashasvi Jaiswal: ಸೆಹ್ವಾಗ್, ದ್ರಾವಿಡ್ ದಾಖಲೆಯ ಸಮಕ್ಕೆ ನಿಂತ ಯಶಸ್ವಿ ಜೈಸ್ವಾಲ್
ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಬರ್ಮಿಂಗ್ ಹ್ಯಾಮ್‌ನಲ್ಲಿ ಇತಿಹಾಸ ಬರೆದಿದ್ದಾರೆ. ಎರಡನೇ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ 10 ರನ್ ಬಾರಿಸುತ್ತಿದ್ದಂತೆ ವಿಶೇಷ ಕ್ಲಬ್‌ಗೆ ಎಂಟ್ರಿ ನೀಡಿದರು. ಹಾಗಿದ್ದರೆ ಜೈಸ್ವಾಲ್ ಎಂಟ್ರಿ ನೀಡಿದ ಆ ಕ್ಲಬ್ ಯಾವುದು? ಎಂಬ ಬಗ್ಗೆ ವರದಿ ಇಲ್ಲಿದೆ.
ಭಾರತ ಹಾಗೂ ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯ ಎರಡನೇ ಪಂದ್ಯ ನಡೆಯುತ್ತಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 77 ರನ್‌ಗಳಿಂದ ಆಟ ಮುಂದುವರೆಸಿ, 407 ರನ್‌ಗೆ ಆಲೌಟ್ ಆಯಿತು. ಭಾರತ 180 ರನ್ ಮುನ್ನಡೆ ಸಾಧಿಸಿತು. ಶುಕ್ರವಾರ ಟೀಮ್ ಇಂಡಿಯಾ ಎರಡನೇ ಇನಿಂಗ್ಸ್ ಆರಂಭಿಸಿತು. ಈ ವೇಳೆ ಯಶಸ್ವಿ ಜೈಸ್ವಾಲ್ ಹಾಗೂ ಕೆಎಲ್ ರಾಹುಲ್ ಇನಿಂಗ್ಸ್ ಆರಂಭಿಸಿದರು. ಎಲ್ಲರ ಕಣ್ಣುಗಳು ಯಶಸ್ವಿ ಜೈಸ್ವಾಲ್ ಅವರ ಮೇಲೆ ನೆಟ್ಟಿದ್ದವು.

ಟೀಮ್ ಇಂಡಿಯಾದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಈ ಇನಿಂಗ್ಸ್ ಆಡುವ ಮುನ್ನ 39 ಇನಿಂಗ್ಸ್‌ಗಳಲ್ಲಿ 1990 ರನ್ ಬಾರಿಸಿದ್ದರು. ಇವರಿಗೆ 2 ಸಾವಿರ ರನ್ ಪೂರ್ಣಗೊಳಿಸಲು 10 ರನ್ ಅವಶ್ಯಕತೆ ಇತ್ತು. ಇನಿಂಗ್ಸ್‌ನ ನಾಲ್ಕನೇ ಓವರ್‌ನ ಐದನೇ ಎಸೆತದಲ್ಲಿ ಬ್ಯಾಕ್‌ವರ್ಡ್ ಪಾಯಿಂಟ್ ಕ್ಷೇತ್ರದಲ್ಲಿ ಬೌಂಡರಿ ಬಾರಿಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 2000 ರನ್ ಕಲೆ ಹಾಕಿದ ಎಲೈಟ್ ಕ್ಲಬ್‌ಗೆ ಯಶಸ್ವಿ ಜೈಸ್ವಾಲ್ ಪಾತ್ರರಾದರು.
ಎಲೈಟ್ ಕ್ಲಬ್‌ಗೆ ಎಂಟ್ರಿ
ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 2 ಸಾವಿರ ರನ್ ಕಲೆ ಹಾಕಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಯಶಸ್ವಿ ಜೈಸ್ವಾಲ್, ಸುನಿಲ್ ಗವಾಸ್ಕರ್, ವಿಜಯ್ ಹಜಾರೆ ಅವರ ದಾಖಲೆ ಮೀರಿ ನಿಂತರು. ಗವಾಸ್ಕರ್ ಹಾಗೂ ಹಜಾರೆ 43 ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದರು. ಯಶಸ್ವಿ 40 ಇನಿಂನ್ಸ್‌ನಲ್ಲಿ ಈ ಸಾಧನೆ ಮಾಡಿದರು. ಈ ಮೂಲಕ ಯಶಸ್ವಿ ಎಲೈಟ್ ಕ್ಲಬ್‌ಗೆ ಎಂಟ್ರಿ ಪಡೆದರು. ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವೀರೇಂದ್ರ ಸೆಹ್ವಾಗ್ ಹಾಗೂ ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟರ್ ರಾಹುಲ್ ದ್ರಾವಿಡ್ ಇಬ್ಬರೂ 40 ಇನಿಂಗ್ಸ್‌ಗಳಲ್ಲಿ 2 ಸಾವಿರ ರನ್ ಬಾರಿಸಿದ್ದರು. ಇದೇ ಎಲೈಟ್ ಕ್ಲಬ್‌ಗೆ ಯಶಸ್ವಿ ಜೈಸ್ವಾಲ್ ಎಂಟ್ರಿ ಪಡೆದರು.
ಯಶಸ್ವಿ ಜೈಸ್ವಾಲ್ ಶುಕ್ರವಾರ ಬಿರುಸಿನ ಬ್ಯಾಟಿಂಗ್ ನಡೆಸಿದರು. ಈ ವೇಳೆ ಇವರು 22 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 28 ರನ್ ಬಾರಿಸಿ ಜೋಶ್ ಟಂಗ್‌ಗೆ ವಿಕೆಟ್ ಒಪ್ಪಿಸಿದರು.
ಭಾರತ ಎರಡನೇ ಇನಿಂಗ್ಸ್
ಟೀಮ್ ಇಂಡಿಯಾ ಎರಡನೇ ಇನಿಂಗ್ಸ್‌ನಲ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಿದೆ. ಈ ವೇಳೆ ಟೀಮ್ ಇಂಡಿಯಾ ಮೂರನೇ ದಿನದಾದಟದಂತ್ಯಕ್ಕೆ 1 ವಿಕೆಟ್‌ಗೆ 64 ರನ್ ಸೇರಿಸಿತು. ಈ ಮೂಲಕ ಪ್ರವಾಸಿ ತಂಡ 244 ರನ್‌ಗಳ ಮುನ್ನಡೆ ಸಾಧಿಸಿದೆ. ಇನ್ನು ನಾಲ್ಕನೇ ದಿನಕ್ಕೆ ಕರುಣ್ ನಾಯರ್ (ಅಜೇಯ 7 ರನ್), ಕೆಎಲ್ ರಾಹುಲ್ (ಅಜೇಯ 28 ರನ್) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications