ಟೀಮ್ ಇಂಡಿಯಾದ ಯಶಸ್ವಿ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿ ಮಿಂಚಿದ್ದರು. ಎರಡನೇ ಟೆಸ್ಟ್‌ನ ಮೊದಲ ದಿನ ಶುಕ್ರವಾರ ಯಶಸ್ವಿ ಜೈಸ್ವಾಲ್ 173 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದರು. ಯಶಸ್ವಿ ಶನಿವಾರ ಡಬಲ್ ಸೆಂಚೂರಿಯ ಕನಸು ಕಾಣುತ್ತಿದ್ದರು. ಆದರೆ ಇವರ ಕನಸು ಸಾಕಾರವಾಗಲಿಲ್ಲ. ಶುಕ್ರವಾರದ ಮೊತ್ತಕ್ಕೆ ಎರಡು ರನ್ ಸೇರಿಸಿ ಯಶಸ್ವಿ ಔಟ್ ಆದರು. ಈ ಮೂಲಕ ದ್ವಿಶತಕದ ಆಸೆಗೆ ಪೆಟ್ಟು ಬಿದ್ದಿತು.
ಶನಿವಾರ ಟೀಮ್ ಇಂಡಿಯಾ 2 ವಿಕೆಟ್‌ಗೆ 318 ರನ್ ಸೇರಿಸಿ ಆಟವನ್ನು ಮುಂದುವರೆಸಿತು. ಆದರೆ ಈ ಮೊತ್ತಕ್ಕೆ ಇನ್ನು ಏಳು ರನ್ ಸೇರಿಸುವಷ್ಟರಲ್ಲಿ ಭಾರತ ಮೂರನೇ ವಿಕೆಟ್ ಕಳೆದುಕೊಂಡಿತು. ಈ ವೇಳೆ ಮೈದಾನದಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ಶುಭಮನ್ ಗಿಲ್ ನಡುವೆ ಹೊಂದಾಣಿಕೆಯ ಕೊರತೆ ಎದ್ದು ಕಂಡಿತು. ಯಶಸ್ವಿ ಔಟ್ ಆಗುವ ಮುನ್ನ ಗಿಲ್ ಜೊತೆಗೂಡಿ 3ನೇ ವಿಕೆಟ್‌ಗೆ 74 ರನ್ ಸೇರಿಸಿದ್ದರು.

ಯಶಸ್ವಿ ಜೈಸ್ವಾಲ್ ಶನಿವಾರ ಅಮೋಘವಾಗಿ ಬ್ಯಾಟಿಂಗ್ ನಡೆಸಿ ದ್ವಿಶತಕ ಬಾರಿಸುವ ಕನಸಿನೊಂದಿಗೆ ಇನಿಂಗ್ಸ್ ಆರಂಭಿಸಿದರು. ಈ ವೇಳೆ ಇನಿಂಗ್ಸ್‌ನ 92ನೇ ಓವರ್‌ನ್ನು ಜೇಡನ್ ಸೀಲ್ಸ್ ಮಾಡಲು ಮುಂದಾದರು. ಇವರ ಈ ಓವರ್‌ನ ಎರಡನೇ ಎಸೆತದಲ್ಲಿ ಜೈಸ್ವಾಲ್ ಮಿಡ್ ಆಫ್‌ಗೆ ಚೆಂಡನ್ನು ತಳ್ಳಿದರು. ಆಗ ಅಲ್ಲಿಯೇ ಫೀಲ್ಡ್ ಮಾಡುತ್ತಿದ್ದ ಟಗೆನರೀನ್ ಚಂದ್ರಪಾಲ್ ಚೆಂಡನ್ನು ತಡೆದರು. ಅದಗಾಲೇ ಯಶಸ್ವಿ ಹಾಫ್ ಕ್ರೀಸ್ ದಾಟಿ ಆಗಿತ್ತು. ಆಗ ಗಿಲ್ ಬೇಡ ಎಂದು ಹಿಂದಕ್ಕೆ ಕಳಿಸಿದರು. ಆಗ ಚಂದ್ರಪಾಲ್ ಚೆಂಡನ್ನು ಕೀಪರ್ ಅತ್ತ ಎಸೆದರು. ಕೀಪರ್ ಟೆವಿನ್ ಇಮ್ಲಾಚ್ ಉತ್ತಮವಾಗಿ ಚೆಂಡನ್ನು ಹಿಡಿದು ಸ್ಟಂಪ್ಸ್‌ಗೆ ತಾಗಿಸಿದರು. ಜೈಸ್ವಾಲ್ ಕೆಂಗಣ್ಣಿನಿಂದ ಶುಭಮನ್ ಗಿಲ್ ಕಡೆಗೆ ಕೈ ಮಾಡಿ, ಒಲ್ಲದ ಮನಸ್ಸಿನಿಂದ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು.
ಯಶಸ್ವಿ ಜೈಸ್ವಾಲ್ ತಮ್ಮದಲ್ಲದ ತಪ್ಪಿಗೆ ಔಟ್ ಆಗುತ್ತಿದ್ದಂತೆ ಕೆಂಡಾ ಮಂಡಲರಾದರು. ಮೈದಾನದಲ್ಲಿ ಏನಾಯಿತು ಎಂಬುದು ಅರ್ಥವಾಗದಂತೆ ಆಯಿತು. ಇದಾದ ಬಳಿಕ ಗಿಲ್ ಹಾಗೂ ಜೈಸ್ವಾಲ್ ನಡುವೆ ಮಾತಿನ ಚಕಮಕಿ ನಡೆಯಿತು. ತಮ್ಮ ದ್ವಿಶತಕ ಮಿಸ್ ಆದ ಭಾವ ನಿಚ್ಚಳವಾಗಿ ಯಶಸ್ವಿ ಜೈಸ್ವಾಲ್ ಮುಖದಲ್ಲಿ ಎದ್ದು ಕಾಣುತ್ತಿತ್ತು. ಇವರು ಔಟ್ ಆಗುತ್ತಿದ್ದಂತೆ ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರು ಮೌನಕ್ಕ ಶರಣಾದರು. ನಂತರ ಯಶಸ್ವಿ ಭಾರದ ಹೆಜ್ಜೆಗಳನ್ನು ಹಾಕುತ್ತಾ ಪೆವಿಲಿಯನ್ ಸೇರಿದರು. ಇವರು 258 ಎಸೆತಗಳಲ್ಲಿ 22 ಬೌಂಡರಿಗಳನ್ನು ಒಳಗೊಂಡಂತೆ ಒಟ್ಟು 175 ರನ್ ಗಳಿಸಿದರು.
ಶುಭಮನ್ ಗಿಲ್ ಈ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದರು. ಟೀಮ್ ಇಂಡಿಯಾ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್‌ಗೆ 518 ರನ್ ಸಿಡಿಸಿ ಡಿಕ್ಲೇರ್ ಮಾಡಿಕೊಂಡಿತು.