
ಮೌಂಟ್ ಮಾಂಗನ್ಯುಯಿ, ಜನವರಿ 3: ನ್ಯೂಜಿಲ್ಯಾಂಡ್ ಪ್ರವಾಸದಲ್ಲಿರುವ ಶ್ರೀಲಂಕಾ ಕ್ರಿಕೆಟ್ ತಂಡ ಮೌಂಟ್ ಮಾಂಗನ್ಯುಯಿಯಲ್ಲಿರುವ ಬೇ ಓವಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧ ಏಕದಿನ ಪಂದ್ಯವನ್ನಾಡುತ್ತಿದೆ. ಮೊದಲ ಏಕದಿನ ಪಂದ್ಯದ ವೇಳೆ ನ್ಯೂಜಿಲ್ಯಾಂಡ್ ಆಟಗಾರ ಜೇಮ್ಸ್ ನೀಶಮ್ ಓವರ್‌ನಲ್ಲಿ 5 ಸಿಕ್ಸ್ ಚಚ್ಚಿ ಗಮನ ಸೆಳೆದಿದ್ದಾರೆ.
ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಗುರುವಾರ (ಜನವರಿ 3) ನಡೆಯಿತು. ನೀಶಮ್ ಸತತ 5 ಸಿಕ್ಸ್ ಬಾರಿಸುವ ಮೂಲಕ ತಾನು ಫಾರ್ಮ್‌ಗೆ ಮರಳಿರುವುದನ್ನು ಸಾರಿದರು. 28ರ ಹರೆಯದ ಜೇಮ್ಸ್ ಜೂನ್ 2017ರ ಬಳಿಕ ಆಡುತ್ತಿರುವ ಮೊದಲ ಅಂತಾರಾಷ್ಟ್ರೀಯ ಪಂದ್ಯವಿದು.
ನೀಶಮ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು ಶ್ರೀಲಂಕಾ ಆಲ್ ರೌಂಡರ್ ತಿಸೆರ ಪೆರೆರ ಅವರ 49ನೇ ಓವರ್‌ನಲ್ಲಿ. ಬೆನ್ನು ಬೆನ್ನಿಗೆ ಸಿಕ್ಸ್ ಬಾರಿಸಿದರ ಫಲವಾಗಿ ಜೇಮ್ಸ್ ಕೇವಲ 13 ಎಸೆತಗಳಿಗೆ ಅಜೇಯ 47 ರನ್ ಕಲೆ ಹಾಕಿ ಪಂದ್ಯದ ಹೀರೋ ಎನಿಸಿಕೊಂಡರು. ನ್ಯೂಜಿಲ್ಯಾಂಡ್ 45 ರನ್ ಗೆಲುವನ್ನಾಚರಿಸಿತು ಕೂಡ.
ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ಶತಕದಾಟ ಆಡಿದರು. ಗಪ್ಟಿಲ್ 138 ರನ್ ಸೇರಿಸಿದರು. ನಾಯಕ ಕೇನ್ ವಿಲಿಯಮ್ಸ್‌ನ್ 76, ರಾಸ್ ಟೇಲರ್ 54 ರನ್ ಬೆಂಬಲದೊಂದಿಗೆ ಕಿವೀಸ್ 50 ಓವರ್‌ಗೆ 7 ವಿಕೆಟ್ ಕಳೆದು 371 ರನ್ ಪೇರಿಸಿತು.
ಗುರಿ ಬೆನ್ನಟ್ಟಿದ ಶ್ರೀಲಂಕಾ, ಆರಂಭಿಕ ಆಟಗಾರ ನಿರೋಷನ್ ಡಿಕ್ವೆಲ್ಲಾ ಅರ್ಧಶತಕ (76), ಕುಸಾಲ್ ಪೆರೆರ ಅವರ ಆಕರ್ಷಕ ಶತಕ (102) ಹೊರತಾಗಿಯೂ 49 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 326 ರನ್ ಪೇರಿಸಿ ಶರಣಾಯಿತು. ಜೇಮ್ಸ್ ನೀಶಮ್ 38 ರನ್ನಿಗೆ 3 ವಿಕೆಟ್ ಉರುಳಿಸಿ ಮಿಂಚಿದರು.